ADVERTISEMENT

ಬಿಜೆಪಿ ಮಹಿಳಾ ಮೋರ್ಚಾ ನಿಯೋಗ ಹಾವೇರಿಗೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 15:57 IST
Last Updated 13 ಜನವರಿ 2024, 15:57 IST
<div class="paragraphs"><p> ಬಿಜೆಪಿ </p></div>

ಬಿಜೆಪಿ

   

ಬೆಂಗಳೂರು: ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸುವುದಕ್ಕಾಗಿ ಬಿಜೆಪಿ ಮಹಿಳಾ ಮೋರ್ಚಾದ ನಿಯೋಗವು ಭಾನುವಾರ ಹಾವೇರಿಗೆ ಭೇಟಿ ನೀಡಲಿದೆ ಎಂದು ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ಮಂಜುಳಾ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತ ಮಹಿಳೆಗೆ ನ್ಯಾಯ ದೊರಕಿಲ್ಲ. ಇಂತಹ ಸಂದರ್ಭದಲ್ಲಿ ಸಂಕ್ರಾಂತಿ ಹಬ್ಬ ಆಚರಿಸುತ್ತಾ ಮನೆಯಲ್ಲಿ ಕುಳಿತಿರಲು ಸಾಧ್ಯವಿಲ್ಲ. ಹಾವೇರಿಗೆ ತೆರಳಿ ವಾಸ್ತವಿಕ ಘಟನೆಗಳ ಮಾಹಿತಿ ಸಂಗ್ರಹಿಸಿ, ಹೋರಾಟ ಮಾಡುತ್ತೇವೆ’ ಎಂದರು.

ADVERTISEMENT

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗಲೇ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿತ್ತು. ಆರೋಪಿಗಳು ಸಚಿವ ಸತೀಶ ಜಾರಕಿಹೊಳಿ ಬೆಂಬಲಿಗರು ಎಂಬ ಕಾರಣಕ್ಕಾಗಿ ಬಂಧಿಸಿರಲಿಲ್ಲ. ಬಿಜೆಪಿಯು ಹೋರಾಟಕ್ಕಿಳಿದ ಬಳಿಕ ಪೊಲೀಸರು ಕ್ರಮ ಕೈಗೊಂಡರು. ಹಾನಗಲ್‌ನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲೂ ಪೊಲೀಸರು ಸರಿಯಾದ ಕ್ರಮ ಜರುಗಿಸಿಲ್ಲ ಎಂದು ದೂರಿದರು.

‘ಗೃಹ ಸಚಿವರು ಎಲ್ಲ ಪ್ರಕರಣಗಳ ಬಗ್ಗೆಯೂ ತೇಲಿಸಿ ಮಾತನಾಡುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಗಂಭೀರವಾಗಿ ಕೆಲಸ ಮಾಡುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಿಲ್ಲ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.