ಬೆಂಗಳೂರು: ‘ಆಪರೇಷನ್ ಕಮಲ’ ಪಟ್ಟಿಯಲ್ಲಿ ಇದ್ದಾರೆ ಎನ್ನಲಾದ ಇಬ್ಬರು ಶಾಸಕರು ಬುಧವಾರ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದು, ಮೈತ್ರಿ ಸರ್ಕಾರ ಪತನಗೊಳಿಸುವ ಬಿಜೆಪಿ ತಂತ್ರಕ್ಕೆ ಹಿನ್ನಡೆಯಾಗಿದೆ ಎಂದು ‘ಕೈ’ ನಾಯಕರು ಸಂಭ್ರಮಿಸಿದ್ದಾರೆ.
ಆದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹರಿಯಾಣದಲ್ಲಿ ಬೀಡು ಬಿಟ್ಟಿರುವ ಕಮಲ ಪಡೆ, ಶತಾಯಗತಾಯ ಸರ್ಕಾರ ಕೆಡವಿಯೇ ತೀರುತ್ತೇವೆ ಎಂಬ ಹಟ ತೊಟ್ಟು ಕಾರ್ಯತಂತ್ರ ಹೆಣೆಯುತ್ತಿದೆ. ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೆಳೆಯುವ ಜತೆಗೆ ಜೆಡಿಎಸ್‌ನ ಕೆಲವು ಶಾಸಕರಿಗೆ ಗಾಳ ಹಾಕುವ ರಹಸ್ಯ ತಂತ್ರಗಾರಿಕೆಯನ್ನೂ ಮುಂದುವರಿಸಿದೆ.
ವಿಶೇಷ ಸಭೆ: ಈ ಮಧ್ಯೆ, ಇದೇ 18ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆ ನಡೆಯಲಿದೆ. ಸಂಪುಟ
ದಿಂದ ಕೈ ಬಿಟ್ಟ ಕಾರಣಕ್ಕೆ ಮುನಿಸಿಕೊಂಡು ಬಿಜೆಪಿಯತ್ತ ಮುಖ ಮಾಡಿರುವ ರಮೇಶ ಜಾರಕಿಹೊಳಿ ಮತ್ತು ಅವರ ಜತೆಗೇ ಹೆಜ್ಜೆ ಇಟ್ಟಿರುವ ಇತರ ಕಾಂಗ್ರೆಸ್ ಶಾಸಕರು ಈ ಸಭೆಯಲ್ಲಿ ಭಾಗವಹಿಸುತ್ತಾರೆಯೇ ಎಂಬ ಕುತೂಹಲ ಗರಿಗೆದರಿದೆ.
ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಇಬ್ಬರು ಪಕ್ಷೇತರ ಶಾಸಕರು ಮಂಗಳವಾರ ವಾಪಸು ಪಡೆದಿದ್ದರು. ಅದರ ಬೆನ್ನಲ್ಲೆ, ಕಾಂಗ್ರೆಸ್‌ನ ಆರೇಳು ಶಾಸಕರು ಬುಧವಾರ ವಿಧಾನ ಸಭಾಧ್ಯ ಕ್ಷರನ್ನು ಭೇಟಿ ಮಾಡಿ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಆತಂಕದಲ್ಲೇ ರಾತ್ರಿ ಕಳೆದ ಕೈ ನಾಯಕರು, ಬುಧವಾರ ಸಂಜೆ ವೇಳೆಗೆ ನಿರಾಳರಾದಂತೆ ಕಂಡರು.
ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ದಿನವಿಡೀ ಕುಮಾರಕೃಪಾದಲ್ಲಿ ರಾಜ್ಯ ನಾಯಕರ ಜೊತೆ ಸಭೆ ನಡೆಸಿದರು. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಹಲವು ನಾಯಕರ ಚರ್ಚೆಯಲ್ಲಿದ್ದರು. ಮುಂಬೈಯಲ್ಲಿರುವ ಪಕ್ಷದ ಅತೃಪ್ತ ಶಾಸಕರ ಜೊತೆ ಸಂಪರ್ಕ ಸಾಧಿಸಲು ಕೈ ನಾಯಕರು ನಿರಂತರ ಪ್ರಯತ್ನ ನಡೆಸಿದರು.
ಈ ವೇಳೆ, ಸಚಿವ ಜಮೀರ್ ಅಹಮ್ಮದ್ ಜೊತೆ ಬಂದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್, ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು. ಬಳಿಕ ರಾಯಚೂರು ಗ್ರಾಮೀಣ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಬಂದರು. ಅಮರೇಗೌಡ ಬಯ್ಯಾಪುರ ಮತ್ತು ಆನಂದ್ ಸಿಂಗ್ ಕೂಡಾ ಚರ್ಚೆ ನಡೆಸಿದರು. ಇವರೆಲ್ಲರೂ ಬಿಜೆಪಿಯ ‘ಆಪರೇಷನ್ ಕಮಲ’ದ ಪಟ್ಟಿಯಲ್ಲಿದ್ದಾರೆ ಎನ್ನಲಾಗಿತ್ತು. ಆದರೆ, ಬಿಜೆಪಿ ಸಂಪರ್ಕದಲ್ಲಿರುವ ಡಾ. ಉಮೇಶ್ ಜಾಧವ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಫಲ ಸಿಗಲಿಲ್ಲ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಭೀಮಾ ನಾಯ್ಕ್, ‘ನಾನು ಕಾಂಗ್ರೆಸ್‌ನಲ್ಲಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ. ಎಲ್ಲಿಗೂ ಹೋಗಿಲ್ಲ. ಶನಿವಾರ ನನ್ನ ಕ್ಷೇತ್ರದಲ್ಲಿ ಇದ್ದೆ. ಭಾನುವಾರ ಗೋವಾ ಪ್ರವಾಸಕ್ಕೆ ಹೋಗಿದ್ದೆ’ ಎಂದು ಸ್ಪಷ್ಟನೆ ನೀಡಿದರು.
‘ಬಿಜೆಪಿ ನಾಯಕರು ಹಿಂದೆ ಸಂಪರ್ಕಿಸಿದ್ದರು. ಈಚೆಗೆ ಯಾರೂ ಮಾತನಾಡಿಸಿಲ್ಲ. ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಚಿಕ್ಕಮಗಳೂರಿನಲ್ಲಿ ಇದ್ದಾರೆ’ ಎಂದರು.
‘ಶಾಸಕರೇ ಎರಡು ದಿನ ಕಾಯಿರಿ’
ಹರಿಯಾಣ ಗುರುಗ್ರಾಮದ ಐಟಿಸಿ ಭಾರತ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ತಂಗಿರುವ ಪಕ್ಷದ ಶಾಸಕರ ಜತೆ ಬುಧವಾರ ಸಭೆ ನಡೆಸಿದ ಬಿ.ಎಸ್. ಯಡಿಯೂರಪ್ಪ, ‘8ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುವುದು ಖಚಿತ. ಸಮಯ ಕೂಡಿ ಬಂದಿಲ್ಲ. ಇನ್ನೂ ಎರಡು ದಿನ ಕಾಯಿರಿ’ ಎಂದು ಸೂಚಿಸಿದ್ದಾರೆ.
ಆಪರೇಷನ್ ಕಮಲ ವಿಫಲ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ‘ತರಾತುರಿಯಲ್ಲಿ ಯಾವುದನ್ನೂ ಮಾಡುವುದು ಬೇಡ. ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಳ್ಳೆಯ ದಿನ ಬರುವವರೆಗೆ ಕಾಯೋಣ’ ಎಂದೂ ಹೇಳಿದ್ದಾರೆ.
ತಕ್ಷಣಕ್ಕೆ ರಾಜೀನಾಮೆ ಇಲ್ಲ?
‘ಸರ್ಕಾರ ಪತನವಾಗಲು ಬೇಕಾದ ಸಂಖ್ಯಾಬಲ ಹೊಂದಿಸುವವರೆಗೆ ಪಕ್ಷದ ಕಡೆ ವಾಲಿರುವ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುವುದು ಬೇಡ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ. ‘ಆಪರೇಷನ್ ಠುಸ್ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ, ಕನಿಷ್ಠ 5 ಶಾಸಕರನ್ನಾದರೂ ರಾಜೀನಾಮೆ ಕೊಡಿಸಿ ಮೈತ್ರಿ ಸರ್ಕಾರಕ್ಕೆ ನಡುಕ ಹುಟ್ಟಿಸಬೇಕು ಎಂಬ ಇರಾದೆ ಯಡಿಯೂರಪ್ಪ ಅವರದ್ದಾಗಿತ್ತು. ಆದರೆ, ಇದಕ್ಕೆ ವರಿಷ್ಠರು ಸಹಮತ ಸೂಚಿಸಿಲ್ಲ’ ಎಂದೂ ಮೂಲಗಳು ಹೇಳಿವೆ.
ಸಿಎಲ್‌ಪಿಗೆ ಗೈರಾದರೆ ಕ್ರಮದ ಎಚ್ಚರಿಕೆ
‘ಇದೇ 18ರಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ವಿಶೇಷ ಸಭೆಗೆ ಗೈರಾದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪಕ್ಷದ ಶಾಸಕರಿಗೆ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಮಧ್ಯಾಹ್ನ 3.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಹಾಜರಾಗಬೇಕು’ ಎಂದರು.
‘ಗೈರಾದರೆ ಗಂಭೀರವಾಗಿ ಪರಿಗಣಿಸಿ ಪಕ್ಷದ ಸದಸ್ಯತ್ವವನ್ನು ಸ್ವಇಚ್ಛೆಯಿಂದ ಬಿಟ್ಟುಕೊಡಲು ಇಚ್ಛಿಸುವೆ ಎಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಗುರಿ ಇಟ್ಟಿರುವ ಶಾಸಕರು ಯಾರು?
ಕಾಂಗ್ರೆಸ್
ರಮೇಶ ಜಾರಕಿಹೊಳಿ(ಗೋಕಾಕ)
ಮಹೇಶ ಕುಮಟಳ್ಳಿ(ಅಥಣಿ)
ಬಿ. ನಾಗೇಂದ್ರ(ಬಳ್ಳಾರಿ ಗ್ರಾಮೀಣ)
ಉಮೇಶ ಜಾಧವ್(ಚಿಂಚೋಳಿ)
ಪ್ರತಾಪಗೌಡ ಪಾಟೀಲ(ಮಸ್ಕಿ)
ಬಿ.ಸಿ. ಪಾಟೀಲ (ಹಿರೇಕೆರೂರ)
ಆನಂದ್ ಸಿಂಗ್ (ವಿಜಯನಗರ–ಹೊಸಪೇಟೆ)
ಜೆ.ಎನ್. ಗಣೇಶ (ಕಂಪ್ಲಿ)
ಶಿವರಾಮ ಹೆಬ್ಬಾರ್ (ಯಲ್ಲಾಪುರ)
ರಾಮಪ್ಪ (ಹರಿಹರ)
ಬಸವರಾಜ ದದ್ದಲ (ರಾಯಚೂರು ಗ್ರಾಮೀಣ)
ಭೀಮಾನಾಯ್ಕ್(ಹಗರಿಬೊಮ್ಮನಹಳ್ಳಿ)
ಜೆಡಿಎಸ್
ಅಶ್ವಿನ್ ಕುಮಾರ್ (ಟಿ.ನರಸೀಪುರ)
ದೇವಾನಂದ ಚೌಹಾಣ್ (ನಾಗಠಾಣ)
ನಾಗನಗೌಡ ಕಂದಕೂರ( ಗುರುಮಠ್ಕಲ್)
ರಾಜಾವೆಂಕಟಪ್ಪ ನಾಯಕ(ಮಾನ್ವಿ)
ಬಿಜೆಪಿಗೆ ಬೆಂಬಲ ನೀಡಿದ ಪಕ್ಷೇತರರು
ಎಚ್. ನಾಗೇಶ(ಮುಳಬಾಗಿಲು)
ಆರ್. ಶಂಕರ್(ರಾಣೆಬೆನ್ನೂರು)
***
ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿ ಸಲು ಆರು ತಿಂಗಳಿನಿಂದ ಪ್ರಯತ್ನ ನಡೆಸಿರುವ ಬಿಜೆಪಿಯವರದ್ದು ಲಜ್ಜೆಗೆಟ್ಟ ರಾಜಕಾರಣ.
– ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ
ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಬಹಿರಂಗವಾಗಿ ಖರೀದಿ ಮಾಡುತ್ತಿದ್ದಾರೆ. ಮೋದಿ ಇಂತಹ ಕೆಲಸಕ್ಕೆ ಕೈಹಾಕಿದ್ದು ಸರಿಯಲ್ಲ.
– ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಈಗ ಸುದ್ದಿಯಾಗುತ್ತಿರುವುದು ಎಲ್ಲವೂ ಆಧಾರರಹಿತ. ಪಕ್ಷದ ಯಾವುದೇ ಶಾಸಕರೂ ಎಲ್ಲೂ ಹೋಗಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ.
– ಕೆ.ಸಿ ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.