ADVERTISEMENT

ಸಾಹಿತಿಗಳು ಪಕ್ಷದ ಸಭೆಗಳಿಗೆ ಹಾಜರಾಗುವುದು ಸರಿಯಲ್ಲ: ಬಿ.ಕೆ. ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:20 IST
Last Updated 23 ಜೂನ್ 2024, 16:20 IST
<div class="paragraphs"><p>ಬಿ.ಕೆ. ಚಂದ್ರಶೇಖರ್</p></div>

ಬಿ.ಕೆ. ಚಂದ್ರಶೇಖರ್

   

ಬೆಂಗಳೂರು: ‘ಅಕಾಡೆಮಿಗಳು, ಪ್ರಾಧಿಕಾರಗಳು ಸ್ವಾಯತ್ತ ಸಂಸ್ಥೆಗಳಾಗಿರಬೇಕೆಂಬ‌ ವಿಚಾರದಲ್ಲಿ ವಿವಾದ ಅನಪೇಕ್ಷಣೀಯ. ಸಾಂಸ್ಕೃತಿಕ ಸಂಸ್ಥೆಗಳು ಸೇರಿದಂತೆ, ಆ ರೀತಿಯ ಸಂಸ್ಥೆಗಳು ಸ್ವಾಯತ್ತ ಆಗಿರಬೇಕೆಂಬುದು ಸಾಂವಿಧಾನಿಕ ಆಶಯ ಎಂಬುದನ್ನು ನಾವು ಮರೆಯಬಾರದು’ ಎಂದು ಕಾಂಗ್ರೆಸ್‌ ಮುಖಂಡರಾದ ಬಿ.ಕೆ. ಚಂದ್ರಶೇಖರ್ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.

‘ಈ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ಸರ್ಕಾರ ನೇಮಿಸಿ, ಅಗತ್ಯ ಹಣಕಾಸು ಪೂರೈಸಿದರೂ ಆಯಾ ಕ್ಷೇತ್ರದ ಪರಿಣಿತರನ್ನು ಆಯ್ಕೆ ಮಾಡಲಾಗುತ್ತದೆಯೇ ಹೊರತು ಪಕ್ಷದ ಕಾರ್ಯಕರ್ತರನ್ನಲ್ಲ ಎನ್ನುವ ಅಂಶಕ್ಕೆ ಈವರೆಗಿನ ನೇಮಕಗಳೇ ಸಾಕ್ಷಿ. 2014ರಿಂದ 2024ರವರೆಗಿನ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಸಂಸ್ಥೆಗಳ ಸ್ವಾಯತ್ತೆಯನ್ನು ದುರ್ಬಲಗೊಳಿಸಿ, ಒಂದು ಪಕ್ಷದ ಹಾಗೂ ಅವರ ಸರ್ಕಾರದ ಬೆಂಬಲಿಗರನ್ನು ನೇಮಿಸಿದ ಪ್ರಕ್ರಿಯೆಗೆ ಕಾಂಗ್ರೆಸ್ ಪಕ್ಷ ಒಳಗೊಂಡಂತೆ ಅನೇಕ ರಾಜಕೀಯ ಹಾಗೂ ರಾಜಕೀಯೇತರ ಸಂಸ್ಥೆಗಳು ಮತ್ತು ವ್ಯಕ್ತಿಗಳು ನಿರಂತರ ಹೋರಾಟ ಮಾಡುತ್ತಾ ಮುಂದುವರೆದಿರುವುದು ಸತ್ಯ’ ಎಂದಿದ್ದಾರೆ.

ADVERTISEMENT

‘ಸರ್ಕಾರದ್ದೇ ಸರ್ವಾಧಿಕಾರ. ಆದ್ದರಿಂದ ಸ್ವಾಯತ್ತೆ ಎಂಬ ಕಲ್ಪನೆ ಲೇಖಕರ, ಸಾಹಿತಿಗಳ, ಕಲಾವಿದರ ಕನಸೇ ಹೊರತು, ವಾಸ್ತವವಲ್ಲ’ ಎಂಬ ಪ್ರತಿಪಾದನೆಯನ್ನು ಒಪ್ಪಲು ಸಾಧ್ಯವಿಲ್ಲ. ಪ್ರಭುತ್ವದ ಈ ರೀತಿಯ ನಂಬಿಕೆಯು ಪ್ರಜಾಪ್ರಭುತ್ವದ ಹಲವು ಸಂಸ್ಥೆಗಳಿಗೆ ಮತ್ತು ಅಕಾಡೆಮಿಗಳಿಗೆ, ವಿಶ್ವವಿದ್ಯಾಲಯಗಳಿಗೆ, ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವ ಹಲವು ಮೂಲಭೂತ ಹಕ್ಕುಗಳಿಗೆ, ಭಾರತದ ವೈವಿಧ್ಯದ ಪ್ರತೀಕವಾಗಿರುವ ಧರ್ಮದ ಆಚರಣೆಗಳಿಗೆ ಹಾಗೂ ಭಾರತದ ಸಂಸ್ಕೃತಿಗೆ ನಿರ್ಣಾಯಕವಾದ ಪೆಟ್ಟುಕೊಟ್ಟಂತಲ್ಲವೇ ಎಂದೂ ಪ್ರಶ್ನಿಸಿದ್ದಾರೆ.

‘ಸ್ವಾಯತ್ತೆಯ ಪ್ರತಿಪಾದನೆಯು ಸರ್ಕಾರದ ವಿರೋಧ ಅಲ್ಲ, ಪರವಾಗಿರುವುದೂ ಅಲ್ಲ. ಹಾಗೆಯೇ, ಕಾಂಗ್ರೆಸ್ ಸದಸ್ಯರಾದ ನಾವಿಬ್ಬರೂ ಪಕ್ಷದ ಅಧ್ಯಕ್ಷರ ವಿರೋಧಿಗಳೆಂದು ಪರಿಗಣಿಸುವುದು ಅಸಂಬದ್ಧ. ನಮ್ಮದು ಸಾಂಸ್ಕೃತಿಕ, ಸಾಮಾಜಿಕ ಕರ್ತವ್ಯಗಳ ಸಂವೇದನಾಶೀಲ ಪ್ರತಿಕ್ರಿಯೆ ಮತ್ತು ಕರ್ತವ್ಯ ನಿರ್ವಹಣೆ. ನಾವು ಇದೇ ಸರಿಯಾದ ಮಾರ್ಗವೆಂದು ನಂಬಿದ್ದೇವೆ. ‘ನಾವು ಸಾಂಸ್ಕೃತಿಕ ಜೀತದಾರರಲ್ಲ’ವೆಂದು ಹೇಳಿರುವ ಸಾಹಿತಿಗಳು, ತಮ್ಮ ವೃತ್ತಿಘನತೆ ಎತ್ತಿಹಿಡಿದಿದ್ದಾರೆ. ಇದನ್ನು ‘ಅವಕಾಶವಾದಿ ನಡೆ ಹಾಗೂ ಹುಳಿದ್ರಾಕ್ಷಿ’ಗೆ ಹೋಲಿಸಿ ಪಕ್ಷದ ವಕ್ತಾರರು ಹೇಳಿಕೆ ನೀಡಬಾರದಿತ್ತು’ ಎಂದಿದ್ದಾರೆ.

‘ಲೇಖಕರು, ಸಾಹಿತಿಗಳು ಸರ್ಕಾರದ ಕಚೇರಿಗಳಿಗೆ ಹೋಗಬೇಕು. ಆದರೆ, ರಾಜಕೀಯ ಪಕ್ಷದ ಕಚೇರಿಯಲ್ಲಿ ನಡೆಯುವ ಸಭೆಗಳಿಗೆ ಹಾಜರಾಗುವುದು ಸರಿಯಲ್ಲ ಎನ್ನುವುದು ನಮ್ಮ ಭಾವನೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.