ಕಲಬುರ್ಗಿ: ‘ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟ 100 ದಿನ ಪೂರೈಸಿರುವುದರಿಂದ ಇದೇ 6ರಂದು ವಿವಿಧ ರಾಜ್ಯಗಳಲ್ಲಿ ರೈತರ ಮನೆಗಳ ಮೇಲೆ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಲಾಗುವುದು’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಯೋಗೇಂದ್ರ ಯಾದವ್ ಹೇಳಿದರು.
ನಗರದಲ್ಲಿ ಶುಕ್ರವಾರ ರೈತರೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈತರು ತಮ್ಮ ವಾಹನಗಳಿಗೂ ಕಪ್ಪು ಬಾವುಟ ಕಟ್ಟುವರು. ದೆಹಲಿಯ ಗಡಿಗಳಲ್ಲಿ ಹೋರಾಟ ನಿರತ ರೈತರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಧರಣಿ ನಡೆಸಲಿದ್ದಾರೆ’ ಎಂದರು.
‘ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಿನ ಮೂಲಕ ಖಾತ್ರಿ ಪಡಿಸಬೇಕು ಎಂಬ ಅಭಿಯಾನವನ್ನು ಕಲಬುರ್ಗಿಯಿಂದಲೇ ಆರಂಭಿಸುತ್ತಿದ್ದೇವೆ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡ ಹಾಗೂ ಮಧ್ಯಪ್ರದೇಶಕ್ಕೆ ಈ ಅಭಿಯಾನ ಕೊಂಡೊಯ್ಯಲಾಗು
ವುದು’ ಎಂದು ಯಾದವ್ ತಿಳಿಸಿದರು.
‘ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸುವಂತೆ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಈಗ ಅವರೇ ಪ್ರಧಾನಿ ಇದ್ದರೂ ಬೆಂಬಲ ಬೆಲೆ ಬಗ್ಗೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ರೈತರ ಬೆಂಬಲ ಬೆಲೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ ಎನ್ನುತ್ತಾರೆ. ಆದರೆ, ಅದು ಕಾಗದದಲ್ಲಿ ಮಾತ್ರ ಇದೆ. ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕುಕಾಯ್ದೆಯಂತೆ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.