ADVERTISEMENT

ಕಪ್ಪು ಶಿಲೀಂಧ್ರ: 4 ದಿನಗಳಲ್ಲಿ 26 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 15:26 IST
Last Updated 4 ಆಗಸ್ಟ್ 2021, 15:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ನಾಲ್ಕು ದಿನಗಳಲ್ಲಿ 26 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಇದೇ ಅವಧಿಯಲ್ಲಿ ಹೊಸದಾಗಿ 44 ಮಂದಿಗೆ ಈ ಸೋಂಕು ತಗಲಿರುವುದು ಖಚಿತಪಟ್ಟಿದೆ. ಇವರಲ್ಲಿ ಬಹುತೇಕರು ಕೋವಿಡ್‌ನಿಂದ ಚೇತರಿಸಿಕೊಂಡವರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 3,713ಕ್ಕೆ ಏರಿಕೆಯಾಗಿದೆ. ಅವರಲ್ಲಿ 367 ಮಂದಿ ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಕಳೆದ ಮೇ ತಿಂಗಳಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡ ಕೆಲವರಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಏರಿಕೆ ಕಂಡು, ತಿಂಗಳಿಗೆ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದವು. ಜುಲೈ ತಿಂಗಳಲ್ಲಿ ಇದು ಇಳಿಮುಖ ಮಾಡಿತ್ತು.

ADVERTISEMENT

ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ 32ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ದೃಢಪಟ್ಟಿವೆ. 1,178 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. ಅವರಲ್ಲಿ 112 ಮಂದಿ ಸಾವಿಗೀಡಾಗಿದ್ದಾರೆ.

‘ಕೋವಿಡ್ ನಿಯಂತ್ರಣ ಹಾಗೂ ಅನಿಯಂತ್ರಿತ ಸ್ಟೆರಾಯ್ಡ್ ಬಳಕೆಗೆ ಕಡಿವಾಣ ಹಾಕಿರುವುದರಿಂದ ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳು ಇಳಿಕೆ ಕಂಡಿವೆ. ಆದರೆ, ಸೋಂಕಿತರಲ್ಲಿ ಕೆಲವರು ತಡವಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ಸೋಂಕು ಮಿದುಳಿಗೆ ಹರಡಿದಲ್ಲಿ ಉಳಿಸಿಕೊಳ್ಳುವುದು ಕಷ್ಟ. ಹಾಗಾಗಿ, ಲಕ್ಷಣಗಳು ಗೋಚರಿಸಿದ ಕೂಡಲೇ ಆಸ್ಪತ್ರೆಗೆ ತೆರಳಿ, ತಪಾಸಣೆ ಮಾಡಿಸಿಕೊಳ್ಳಬೇಕು. ಸದ್ಯ ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ಔಷಧದ ಸಮಸ್ಯೆಯಿಲ್ಲ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.