ADVERTISEMENT

ಬ್ಲ್ಯಾಕ್ ಫಂಗಸ್: ತಜ್ಞರ ಸಮಿತಿ ರಚನೆ –ಆರೋಗ್ಯ ಸಚಿವ ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 16 ಮೇ 2021, 8:59 IST
Last Updated 16 ಮೇ 2021, 8:59 IST
 ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌
ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌   

ಬೆಂಗಳೂರು: ‘ಕೋವಿಡ್‌ ಬೆನ್ನಲ್ಲೇ ಕಾಣಿಸಿಕೊಂಡಿರುವ ಬ್ಲ್ಯಾಕ್ ಫಂಗಸ್ ರೋಗದ ಬಗ್ಗೆ ಸೋಮವಾರ (ಮೇ 17) ನೇತ್ರ ತಜ್ಞರ ಜೊತೆ ಚರ್ಚಿಸುತ್ತೇವೆ. ಈ ರೋಗದ ಕುರಿತಂತೆ ಅಧ್ಯಯನ ನಡೆಸಿ, ಚಿಕಿತ್ಸೆ ವಿಧಾನದ ಬಗ್ಗೆ ಮಾರ್ಗದರ್ಶನ ನೀಡಲು ತಜ್ಞರನ್ನು ಸೇರಿಸಿ ಸಮಿತಿ ರಚಿಸಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಬೌರಿಂಗ್​ ಆಸ್ಪತ್ರೆಯಲ್ಲಿ ಸೋಮವಾರದಿಂದ ಈ ಕಾಯಿಲೆಗೆ ಪ್ರಾಯೋಗಿಕವಾಗಿ ವಿಶೇಷ ಚಿಕಿತ್ಸೆ ನೀಡಲಾಗುವುದು. ಜಿಲ್ಲಾ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಆರಂಭಿಸಲಾಗುವುದು’ ಎಂದರು.

‘ಈ ರೋಗಕ್ಕೆ ಸತತ ಏಳು ವಾರಗಳ ಚಿಕಿತ್ಸೆ ಅವಶ್ಯಕತೆ ಇದೆ. ಒಬ್ಬ ವ್ಯಕ್ತಿಗೆ ₹ 2 ಲಕ್ಷದಿಂದ ₹ 3 ಲಕ್ಷ ಖರ್ಚು ಆಗುತ್ತದೆ. ಉಚಿತವಾಗಿ ಚಿಕಿತ್ಸೆ ಕೊಡಿಸುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರ ಜೊತೆ ಮಾತನಾಡುತ್ತೇನೆ. ಸಮಸ್ಯೆ‌ ಇದ್ದ ಕೂಡಲೇ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಅವರು ಮನವಿ ಮಾಡಿದರು.

ADVERTISEMENT

‘ಇಡೀ ದೇಶದಲ್ಲೆ ಈ ರೋಗಕ್ಕೆ ಔಷಧಿ ಕೊರತೆ ಇದೆ. ಈಗಾಗಲೇ 20 ಸಾವಿರ ವೈಯಲ್ಸ್‌ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಜೊತೆ ಸಂಪರ್ಕದಲ್ಲಿ ಇದ್ದೇನೆ. ಕೇಂದ್ರ ಆರೋಗ್ಯ ಸಚಿವರ ಜೊತೆಯಲ್ಲೂ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಯಾರು ಆತ‌ಂಕಪಡುವ ಅಗತ್ಯ ಇಲ್ಲ’ ಎಂದರು.

ನಿಖರ ಅಂಕಿ ಅಂಶ ಇಲ್ಲ: ‘ರಾಜ್ಯದಲ್ಲಿ ಎಷ್ಟು ಬ್ಲ್ಯಾಕ್ ಫಂಗಸ್ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಇಲ್ಲ. ಎಷ್ಟು ಸಾವಾಗಿದೆ ಎಂಬ ನಿಖರವಾದ ಮಾಹಿತಿಯೂ ಇಲ್ಲ. ಯಾಕೆಂದರೆ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಹೀಗಾಗಿ, ಮಾಹಿತಿ ಲಭ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.