ADVERTISEMENT

ತೆಂಗು ಬೆಳೆಗೆ ಕಪ್ಪುತಲೆ ಹುಳು ಕಾಟ

ರಾಜ್ಯದ ವಿವಿಧೆಡೆ ಬೇಸಿಗೆಯಲ್ಲಿ ರೋಗ ಹೆಚ್ಚಳ l ಇಳುವರಿ ಕುಂಠಿತ ಸಾಧ್ಯತೆ l ಆತಂಕದಲ್ಲಿ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 21:30 IST
Last Updated 12 ಫೆಬ್ರುವರಿ 2023, 21:30 IST
ಹರಿಹರ ತಾಲ್ಲೂಕಿನ ಕಡರನಾಯ್ಕನಹಳ್ಳಿ ಸಮೀಪದ ಹೊಳೆಸಿರಿಗೆರೆಯಲ್ಲಿ ತೆಂಗಿನ ತೋಟವು ಕಪ್ಪು ತಲೆ ಹುಳು ಬಾಧೆಯಿಂದ ಒಣಗುತ್ತಿರುವುದು.
ಹರಿಹರ ತಾಲ್ಲೂಕಿನ ಕಡರನಾಯ್ಕನಹಳ್ಳಿ ಸಮೀಪದ ಹೊಳೆಸಿರಿಗೆರೆಯಲ್ಲಿ ತೆಂಗಿನ ತೋಟವು ಕಪ್ಪು ತಲೆ ಹುಳು ಬಾಧೆಯಿಂದ ಒಣಗುತ್ತಿರುವುದು.   

ಬೆಂಗಳೂರು: ತುಮಕೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗಿಗೆ ಕಪ್ಪುತಲೆಯ ಹುಳು ರೋಗ ಬಾಧಿಸುತ್ತಿದೆ.

ಇಡೀ ತೆಂಗಿನ ತೋಟಗಳಿಗೆ ಈ ರೋಗ ಆವರಿಸಿಲ್ಲವಾದರೂ ಹಲವು ಮರಗಳಿಗೆ ಹಾನಿಯಾಗಿದೆ. ರೋಗಕ್ಕೆ ತುತ್ತಾಗಿರುವ ಮರಗಳಲ್ಲಿ ಶೇ 20 ರಿಂದ ಶೇ 30ರಷ್ಟು ಇಳುವರಿ ಕಡಿಮೆಯಾಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ತೆಂಗಿನ ಗರಿಗಳಿಗೆ ಇರುವೆಗಿಂತಲೂ ಚಿಕ್ಕದಾಗಿರುವ ಹುಳು ಮೆತ್ತಿಕೊಳ್ಳುತ್ತಿವೆ. ಮುಟ್ಟಿದರೆ ಕೈಯೆಲ್ಲಾ ಕಪ್ಪಾಗುತ್ತದೆ. ಇದರೊಂದಿಗೆ ಪಾಚಿ ಸಮಸ್ಯೆ ಕಾಣಿಸಿಕೊಂಡಿದೆ.

ADVERTISEMENT

ತುಮಕೂರು ಜಿಲ್ಲೆಯಲ್ಲಿ ಈ ರೋಗ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಕಾಂಡ ಸೋರುವ ರೋಗ (ಅಣಬೆ ರೋಗ) ಕಾಣಿಸಿಕೊಂಡಿದೆ. ಕೂಡಲೇ ನಿಯಂತ್ರಿಸದಿದ್ದರೆ ಮರಗಳಿಗೆ ಸಾಕಷ್ಟು ಹಾನಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಬೆಳೆಗಾರರು.

ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ರೋಗ ತಗುಲಿದ ತೆಂಗಿನ ಮರಗಳು ಹಾನಿಗೆ ಒಳಗಾಗಿವೆ. ಪರತಂತ್ರ ಕೀಟಗಳ ಪ್ರಯೋಗದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ರೋಗ ನಿಯಂತ್ರಣಕ್ಕೆ ಬಂದಿದೆ.

‘ಮಳೆಗಾಲದಲ್ಲಿ ಈ ಸಮಸ್ಯೆ ಇರುವುದಿಲ್ಲ. ತೋಟ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬಿಸಿಲಿನ ಪ್ರಮಾಣ ಹೆಚ್ಚಾದಂತೆ ರೋಗದ ತೀವ್ರತೆ ಹೆಚ್ಚಾಗುತ್ತದೆ’ ಎನ್ನುತ್ತಾರೆ ವಿವಿಧ ಜಿಲ್ಲೆಗಳ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಡಾ.ಜಿ.ಸಿ. ರಾಘವೇಂದ್ರ ಪ್ರಸಾದ್‌ (ದಾವಣಗೆರೆ), ಜಿ.ಸವಿತಾ (ಚಿತ್ರದುರ್ಗ) ಮತ್ತು ರುದ್ರೇಶ್ (ಮೈಸೂರು).

ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ತೋಟಗಾರಿಕೆ ಇಲಾಖೆ ಹತೋಟಿಗೆ ಕ್ರಮ ಕೈಗೊಳ್ಳುತ್ತಿದೆ. ಬೆಳೆಗಾರರಿಗೆ ಮಾಹಿತಿ ನೀಡುತ್ತಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 69 ಸಾವಿರ ಹೆಕ್ಟೇರ್‌ ತೆಂಗು ಬೆಳೆಯಲಾಗಿದೆ. ಹೊಸದುರ್ಗ ಮತ್ತು ಹೊಳಲ್ಕೆರೆ ಭಾಗದ 2,500 ಹೆಕ್ಟೆರ್‌ನಲ್ಲಿ ರೋಗ ಕಾಣಿಸಿಕೊಂಡಿದೆ. ದಾವಣಗೆರೆ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್‌ ತೆಂಗು ಬೆಳೆ ಇದೆ. ಶೇ 15ರಷ್ಟು ಮರಗಳಲ್ಲಿ ರೋಗ ಕಾಣಿಸಿಕೊಂಡಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಈ ರೋಗದಿಂದ ತೆಂಗಿನ ಇಳುವರಿ ಕುಂಠಿತವಾಗಿದೆ.

ಕೊಬ್ಬರಿ ಉತ್ಪನ್ನವೂ ಕಡಿಮೆಯಾಗುತ್ತಿದೆ. ಸಾವಿರ ಕಾಯಿಗೆ 170 ಕೆ.ಜಿ. ಸಿಗುತ್ತಿದ್ದ ಕೊಬ್ಬರಿ, ಇದೀಗ 90 ಕೆ.ಜಿ.ಗೆ ಕುಸಿದಿದೆ.

ಮೈಸೂರು ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಬಾಧೆ ಕಂಡುಬಂದಿದೆ. ಇದರಿಂದ ವ್ಯತಿರಿಕ್ತ ಪರಿಣಾಮವೇನೂ ಆಗಿಲ್ಲ.

ನಿಯಂತ್ರಣ ಹೇಗೆ?

ಜೈವಿಕ ವಿಧಾನ ಬಳಸಿ ಹುಳುಗಳ ಹತೋಟಿಗೆ ಕ್ರಮಕೈಗೊಳ್ಳಬಹುದು. ಪ್ರತಿ ಗಿಡಕ್ಕೆ ಗೊನಿಯೋಜಸ್‌ ನೆಫಾಂಟಿಡಿಸ್‌ (ಬೆಥಿಲಿಡೆ) ಇಲ್ಲವೇ ಬ್ರೆವಿಕಾರ್ನಿಸ್‌ (ಬ್ರಾಕೊನಿಡೆ) ಪರಾವಲಂಬಿ ಜೀವಿಗಳನ್ನು ಬಿಡಬೇಕು. ಅವು ಈ ಕಪ್ಪುತಲೆ ಹುಳು ತಿನ್ನುತ್ತವೆ.

ಬಾಧೆಗೆ ಒಳಗಾದ ಗರಿಗಳನ್ನು ಕತ್ತರಿಸಿ ಸುಟ್ಟು ಹಾಕಬೇಕು. ಒಂದು ಲೀಟರ್‌ ನೀರಿಗೆ 7 ಗ್ರಾಂ ಬೇವಿನ ಸೊಪ್ಪು ಬೆರಸಿ ಗರಿಗಳ ಕೆಳಭಾಗಕ್ಕೆ ಎರಡು ವಾರಗಳಿಗೊಮ್ಮೆ ಸಿಂಪಡಿಸಬೇಕು.

ಪ್ರತಿ ಲೀಟರ್ ನೀರಿಗೆ ಒಂದು ಎಂಎಲ್‌ ಮ್ಯಾಲಥಿಯನ್‌ 50 ಇಸಿ 0.05% ಮಿಶ್ರಣ ಮಾಡಿ ಗರಿಯ ಅಡಿಭಾಗಕ್ಕೆ ಸಿಂಪಡಿಸಬೇಕು. ಇಲ್ಲವೇ ಪ್ರತಿ ಲೀಟರ್‌ಗೆ ಕ್ವಿನಾಲ್ಪಾಸ್‌ 0.05% ಬೆರೆಸಿ ಸಿಂಪಡಿಸಬೇಕು.

ಪರತಂತ್ರ ಕೀಟ ಪ್ರಯೋಗ ಯಶಸ್ವಿ

ತುಮಕೂರು ಜಿಲ್ಲೆಯಲ್ಲಿ ಪರತಂತ್ರ ಕೀಟ ಪ್ರಯೋಗದಿಂದ ಕಪ್ಪುತಲೆ ಹುಳು ಬಾಧೆ ಭಾಗಶಃ ನಿಯಂತ್ರಣಕ್ಕೆ ಬಂದಿದೆ.

2013–14ರಲ್ಲಿ ತಿಪಟೂರು ಭಾಗದಲ್ಲಿ ತೀವ್ರ ಪ್ರಮಾಣದಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ತೆಂಗಿನ ಮರದ ಸುಳಿ ತಿಂದು ಹಾಳು ಮಾಡುವ ಕಪ್ಪುತಲೆ ಹುಳುಗಳ ಮೇಲೆ ಪರತಂತ್ರ ಕೀಟಗಳ ಪ್ರಯೋಗ ಮಾಡಿದಾಗ ರೋಗ ನಿಯಂತ್ರಣಕ್ಕೆ ಬಂದಿತ್ತು. ಪ್ರಸ್ತುತ ಹಿಂದಿನಷ್ಟು ಸಮಸ್ಯೆಯಾಗಿಲ್ಲ. ತಿಪಟೂರು ತಾಲ್ಲೂಕಿನಲ್ಲಿ ಸುಮಾರು 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಅದರಲ್ಲಿ ಕಸಬಾ ಹೋಬಳಿಯ ಕಲ್ಕೆರೆ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೋಗ ಬಾಧಿಸಿದೆ.

ಏನಿದು ಕಪ್ಪುತಲೆಯ ಹುಳು?

‘ಒಪಿಸಿನಾ ಅರೆಸೋಸಿಲ್ಲ’ (Orisina Arenosella) ಎಂಬ ವೈಜ್ಞಾನಿಕ ಹೆಸರಿನ ಕಪ್ಪುತಲೆ ಹುಳು (Black Headed Caterpillar) ಲಾರ್ವಾ ಹಂತದಿಂದಲೇ ತೆಂಗಿನ ಮರದ ಹಸಿರು ಭಾಗವಾದ ಗರಿಗಳ ತೆಂಗಿನ ಗರಿಯ ರಸ ಹೀರುತ್ತದೆ. ಇದರಿಂದ ಗರಿಗಳು ಒಣಗುತ್ತವೆ.

ಹುಳು ಕಾಣಿಸಿಕೊಂಡ ತಕ್ಷವೇ ಪರಿಹಾರ ಕೈಗೊಳ್ಳದಿದ್ದರೆ ವರ್ಷದೊಳಗೆ ಸಂಪೂರ್ಣ ತೋಟವನ್ನೇ ಆವರಿಸಿ ಹಾಳು ಮಾಡುತ್ತವೆ. ಇಡೀ ತೋಟ ಅಸ್ಥಿಪಂಜರದಂತೆ ಗೋಚರಿಸುತ್ತದೆ. ಹುಳು ಬಾಧೆಗೆ ತುತ್ತಾದ ತೆಂಗಿನಮರ ಕಾಯಿ ಬಿಡುವುದಿಲ್ಲ. ಈ ಗರಿಗಳನ್ನೂ ಕೂಡ ಬಳಸಲು ಬರುವುದಿಲ್ಲ. ಸಕಾಲದಲ್ಲಿ ಅವುಗಳನ್ನು ಸುಟ್ಟು ಹಾಕದಿದ್ದರೆ ಹುಳು ಪುನಃ ಉತ್ಪತ್ತಿಯಾಗಿ ಇತರೇ ತೋಟಗಳಿಗೂ ದಾಳಿ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.