ಬೆಂಗಳೂರು: ಬಿಎಂಎಸ್ ಟ್ರಸ್ಟ್‌ನಲ್ಲಿ ಅಕ್ರಮ ನಡೆದಿದ್ದು, ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಕೂಡಲೇ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬಿಎಂಎಸ್ ಟ್ರಸ್ಟ್‌ನಲ್ಲಿ ಅಕ್ರಮ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಬಿಎಂಎಸ್ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. ಟ್ರಸ್ಟ್ ಹಾಗೂ ಟ್ರಸ್ಟ್‌ನ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ಟ್ರಸ್ಟಿನಲ್ಲಿ ಸರ್ಕಾರದ ಟ್ರಸ್ಟಿಗೇ ಕೊಕ್ ಕೊಟ್ಟು, ಈ ಟ್ರಸ್ಟ್‌ನಲ್ಲಾಗುತ್ತಿದ್ದ ಗೋಲ್‌ಮಾಲ್ ಬಗ್ಗೆ ಸರ್ಕಾರಿ ಟ್ರಸ್ಟಿಯಾಗಿದ್ದ ಐಎಎಸ್ ಅಧಿಕಾರಿ ಡಾ.ಮಂಜುಳಾ ಮತ್ತು ಇನ್ನೊರ್ವ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಬರೆದ ಪತ್ರಗಳನ್ನು ಕಸದಬುಟ್ಟಿಗೆ ಹಾಕಿದ್ದು ಏಕೆ? ಉನ್ನತ ಶಿಕ್ಷಣ ಸಚಿವರೇ, ಇದರ ಹಿಂದಿನ ಹುನ್ನಾರ ಏನು’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
‘ಟ್ರಸ್ಟ್‌ನಲ್ಲಿ ಕೈಗೊಂಡ ಅಕ್ರಮ ತಿದ್ದುಪಡಿಗಳನ್ನು ಸಕ್ರಮಗೊಳಿಸಲು ತಾವು ತೋರಿದ ಆತುರ, ಕಾಳಜಿ ಎಂಥದ್ದು ಎಂಬುದು ನನಗೆ ಗೊತ್ತು. ಅವುಗಳ ಅನುಮೋದನೆಗಾಗಿ ತಾವೇ ಬರೆದ ಟಿಪ್ಪಣಿಯ ಒಕ್ಕಣಿಯನ್ನು ಒಮ್ಮೆ ಓದಿಕೊಳ್ಳಿ. ಅಶ್ವತ್ಥನಾರಾಯಣ ಅವರೇ, ಉನ್ನತ ಶಿಕ್ಷಣ ಸಚಿವರಾದ ನಿಮ್ಮ ಉನ್ನತ ಮಟ್ಟ ಎಷ್ಟು ಕೆಳಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ’ ಎಂದು ಎಚ್‌ಡಿಕೆ ಟೀಕಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಗುರುವಾರ ಮಾತನಾಡಿದ್ದ ಕುಮಾರಸ್ವಾಮಿ, ‘ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬೈಲಾ ಉಲ್ಲಂಘಿಸಿ ಟ್ರಸ್ಟಿಗಳ ನೇಮಕ, ಪ್ರವೇಶ ಪ್ರಕ್ರಿಯೆ, ಶುಲ್ಕ ವಸೂಲಿ ಮತ್ತು ಜಮೀನಿನಲ್ಲಿ ಅಕ್ರಮ ನಡೆದಿದ್ದು, ಇದರಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಶಾಮೀಲಾಗಿರುವುದರಿಂದ ಅವರ ತಲೆದಂಡ ಆಗಲೇಬೇಕು’ ಎಂದು ಒತ್ತಾಯಿಸಿದ್ದರು.
ಏನಿದು ಅಕ್ರಮ?
‘ಉದ್ಯಮಿ ದಯಾನಂದ ಪೈ ಅವರನ್ನು ಆಜೀವ ಟ್ರಸ್ಟಿಯನ್ನಾಗಿ ಮಾಡಿರುವುದು ಮತ್ತು ದಾನಿ ಟ್ರಸ್ಟಿಯಾದ ರಾಗಿಣಿ ನಾರಾಯಣ ಅವರ ಸೋದರಳಿಯನನ್ನು ಟ್ರಸ್ಟಿಯನ್ನಾಗಿ ಮಾಡಿರುವುದು ಬೈಲಾಗೆ ವಿರುದ್ಧ. ಇದರಲ್ಲಿ ಅಶ್ವತ್ಥನಾರಾಯಣ ಅವರ ಪಾತ್ರ ಇದೆ. ಸುಮಾರು ₹10 ಸಾವಿರ ಕೋಟಿ ಮೌಲ್ಯ ಆಸ್ತಿ ಹೊಂದಿರುವ ಈ ಶಿಕ್ಷಣ ಸಂಸ್ಥೆಯ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿಗಳ ಕಣ್ಣು ಬಿದ್ದಿದೆ’ ಎಂದೂ ಕುಮಾರಸ್ವಾಮಿ ದೂರಿದ್ದಾರೆ.
‘ಬಿಎಂಎಸ್ ಶಿಕ್ಷಣ ಸಂಸ್ಥೆಯ ಸ್ಥಾಪಕ ವಿಶ್ವಸ್ಥ ಬಿ.ಎಸ್.ನಾರಾಯಣ ಅವರ ಪತ್ನಿ ರಾಗಿಣಿ ನಾರಾಯಣ ಅವರು ಉದ್ಯಮಿ ದಯಾನಂದ ಪೈ, ಹಿರಿಯ ವಕೀಲ ಬಿ.ವಿ.ಆಚಾರ್ಯ, ನಿವೃತ್ತ ಐಎಎಸ್ ಅಧಿಕಾರಿ ವಿ.ಕೆ.ಗೋರೆ ಅವರನ್ನು ಟ್ರಸ್ಟಿಯನ್ನಾಗಿ ನೇಮಿಸಿಕೊಳ್ಳುತ್ತಾರೆ. ಒಬ್ಬ ಟ್ರಸ್ಟಿ ಮೂರು ವರ್ಷದ ಅವಧಿಗೆ ಇರಬೇಕು. ಆದರೆ, ದಯಾನಂದ ಪೈ 10 ವರ್ಷಗಳಿಂದ ಟ್ರಸ್ಟಿಯಾಗಿಯೇ ಮುಂದುವರೆದಿದ್ದಾರೆ. ರಾಗಿಣಿ ಮತ್ತು ಪೈ ಸೇರಿ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಮತ್ತು ಇತರ ಕಾಲೇಜುಗಳಲ್ಲಿ ತಲಾ ಶೇ 50 ರಷ್ಟು ಮ್ಯಾನೇಜ್‌ಮೆಂಟ್ ಕೋಟಾದ ಸಿಟುಗಳನ್ನು ಹಂಚಿಕೊಳ್ಳಲು ಲಿಖಿತ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದೂ ಕುಮಾರಸ್ವಾಮಿ ತಿಳಿಸಿದ್ದಾರೆ.
ಸರ್ಕಾರದ ನಾಮನಿರ್ದೇಶಿತ ಟ್ರಸ್ಟಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಡಾ.ಎನ್.ಮಂಜುಳಾ ಅವರು 2019ರ ಜುಲೈನಲ್ಲಿ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಬಿಎಂಎಸ್ ಬೈ–ಲಾ ತಿದ್ದುಪಡಿ ನಿರ್ಣಯವು ಟ್ರಸ್ಟ್‌ನ ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ತೆಗೆದುಕೊಂಡ ಕ್ರಮಕ್ಕೆ ವಿರುದ್ಧವಾಗಿದೆ ಎಂದು ದೂರಿದ್ದರು. ಹಾಗಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಇದಕ್ಕೆ ಸಚಿವರೇ ಕಾರಣ ಎಂದೂ ಹೇಳಿದ್ದಾರೆ.
‘ಬೈಲಾ ತಿದ್ದುಪಡಿಗಾಗಿ ನಾನು ಸಿ.ಎಂ ಆಗಿದ್ದ ಸಂದರ್ಭದಲ್ಲಿ ಆಮಿಷ ಒಡ್ಡಿದ್ದರು. ಆದರೆ, ನಾನು ಅದಕ್ಕೆ ಮಣಿಯಲಿಲ್ಲ. ಈ ಸರ್ಕಾರ ತಮಗೆ ಬೇಕಾಗಿದ್ದನ್ನು ಮಾಡಿಕೊಂಡಿದ್ದಾರೆ’ ಎಂದು ಎಚ್‌ಡಿಕೆ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.