ADVERTISEMENT

ಮಾವಳ್ಳಿಪುರ ಬಳಿ ಕ್ರೀಡಾ ನಗರಿ ನಿರ್ಮಾಣ: ಕ್ರೀಡಾ ಸಚಿವ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 14:38 IST
Last Updated 14 ಫೆಬ್ರುವರಿ 2024, 14:38 IST
<div class="paragraphs"><p>ಕ್ರೀಡಾ ಇಲಾಖೆ ಸಚಿವ ನಾಗೇಂದ್ರ </p></div>

ಕ್ರೀಡಾ ಇಲಾಖೆ ಸಚಿವ ನಾಗೇಂದ್ರ

   

ಬೆಂಗಳೂರು: ಯಲಹಂಕ ತಾಲ್ಲೂಕು ಹೆಸರಘಟ್ಟ ಹೋಬಳಿ ಮಾವಳ್ಳಿಪುರ ಬಳಿ 100 ಎಕರೆ ಪ್ರದೇಶದಲ್ಲಿ ಕ್ರೀಡಾ ನಗರಿ (ಸ್ಪೋರ್ಟ್ಸ್‌ ಸಿಟಿ) ನಿರ್ಮಿಸಲಾಗುವುದು ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಸ್‌.ಆರ್‌.ವಿಶ್ವನಾಥ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾವಳ್ಳಿಪುರ ಬಳಿ 60 ಎಕರೆ ಜಮೀನು ನೀಡಲು ಕಂದಾಯ ಇಲಾಖೆ ಒಪ್ಪಿಕೊಂಡಿದೆ ಎಂದರು.

ADVERTISEMENT

ಇದರ ಜತೆಗೆ ಇನ್ನೂ ಹೆಚ್ಚುವರಿ 40 ಎಕರೆ ಜಾಗ ನೀಡುವಂತೆ ಕೇಳಲಾಗಿದೆ. ಅದನ್ನು ಪಡೆದು, ಸಂಪುಟ ಸಭೆಯ ಒಪ್ಪಿಗೆಯ ಬಳಿಕ ಸರ್ಕಾರದಿಂದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಎಲ್ಲ ಸೌಲಭ್ಯಗಳು ಮತ್ತು ಎಲ್ಲ ಕ್ರೀಡೆಗಳು ಒಂದೇ ಸೂರಿನಡಿ ಇರುವಂತೆ ಕ್ರೀಡಾ ನಗರಿ ನಿರ್ಮಿಸಲಾಗುವುದು ಎಂದು ಹೇಳಿದರು.

‘ಕ್ರೀಡಾ ನಗರಿ ನಿರ್ಮಿಸಿದರೆ ನಿಮ್ಮನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿಸುತ್ತೇನೆ’ ಎಂದು ವಿಶ್ವನಾಥ್‌ ಅವರು ಸಚಿವ ನಾಗೇಂದ್ರ ಅವರ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ನಾಗೇಂದ್ರ, ‘ಉದ್ಘಾಟನೆ ದಿನದಂದು ನಾವು– ನೀವು ಕಬಡ್ಡಿ ಆಡೋಣ’ ಎಂದರು.

ಇಲಾಖೆಯ ವತಿಯಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುವುದು ಎಂದು ನಾಗೇಂದ್ರ ಹೇಳಿದರು.

ಕಾಂಗ್ರೆಸ್ ಸದಸ್ಯ ಬಿ.ಶಿವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ನಾಗೇಂದ್ರ, ಆನೇಕಲ್‌ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶಾಸಕರ ಕೋರಿಕೆ ಮೇರೆಗೆ ಒಂದು ಬಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಅನುದಾನ ಒದಗಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.