ಬೆಂಗಳೂರು: ಸ್ಫೂರ್ತಿಧಾಮ ಸಂಸ್ಥೆಯು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಅವರಿಗೆ 2024ನೇ ಸಾಲಿನ ‘ಬೋಧಿವೃಕ್ಷ’ ಪ್ರಶಸ್ತಿ ಪ್ರಕಟಿಸಿದೆ.
ದಲಿತ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುವ ಮಂಡ್ಯ ಜಿಲ್ಲೆಯ ಹಾನವಾಡಿಯವರಾದ ಪತ್ರಕರ್ತ ರಾಮ್‌ದೇವ್ ರಾಕೆ, ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಹಕ್ಕಿಗೆ ಹೋರಾಟ ನಡೆಸುತ್ತಿರುವ ಸುಶೀಲ ನಾಡ, ಬೆಳ್ತಂಗಡಿಯ ಚಾರ್ಮಾಡಿ ಘಾಟ್‌ನಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ ಸಿಲುಕಿದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸುವ ಕಾರ್ಯವನ್ನು ಮೂರು ದಶಕದಿಂದ ಮಾಡುತ್ತಿರುವ ಹಸನಬ್ಬ, ಋತುಮತಿಯಾದ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಗುಡಿಸಲು, ಮರದ ಕೆಳಗೆ ಬಿಡುವ ಅನಿಷ್ಠ ಪದ್ಧತಿ ವಿರುದ್ಧ ಹೋರಾಡುತ್ತಿರುವ ಜಿ.ಕೆ. ಪ್ರೇಮ ಅವರಿಗೆ ‘ಬೋಧಿವರ್ಧನ ಪ್ರಶಸ್ತಿ’ ನೀಡಲಾಗುತ್ತದೆ ಎಂದು ‘ಸ್ಫೂರ್ತಿಧಾಮ’ದ ಅಧ್ಯಕ್ಷ ಎಸ್. ಮರಿಸ್ವಾಮಿ ತಿಳಿಸಿದ್ದಾರೆ.
‘ಬೋಧಿವೃಕ್ಷ’ ಪ್ರಶಸ್ತಿ ಫಲಕ, ₹1 ಲಕ್ಷ ನಗದು ಹಾಗೂ ‘ಬೋಧಿವರ್ಧನ’ ಪ್ರಶಸ್ತಿ ಫಲಕ, ₹25 ಸಾವಿರ ನಗದು ಹೊಂದಿದೆ. ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ಈ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ.
ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯಂದು ಮಾಗಡಿ ಮುಖ್ಯರಸ್ತೆ ಅಂಜನಾನಗರದಲ್ಲಿರುವ ‘ಸ್ಫೂರ್ತಿಧಾಮ’ದಲ್ಲಿ ನಡೆಯುವ ‘ಅಂಬೇಡ್ಕರ್ ಹಬ್ಬ’ದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಆರ್. ಚಂದ್ರಶೇಖರ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.