ADVERTISEMENT

ಕೆಫೆ ಸ್ಫೋಟಕ್ಕೆ ಮಂಗಳೂರು ಸ್ಫೋಟದ ಲಿಂಕ್‌: ಡಿ.ಕೆ. ಶಿವಕುಮಾರ್‌ ಶಂಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 15:33 IST
Last Updated 2 ಮಾರ್ಚ್ 2024, 15:33 IST
   

ಬೆಂಗಳೂರು: ‘ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಶುಕ್ರವಾರ (ಮಾರ್ಚ್ 1) ನಡೆದ ಸ್ಫೋಟಕ್ಕೂ ಮಂಗಳೂರಿನ ನಾಗುರಿ ಎಂಬಲ್ಲಿ ನ. 19ರಂದು ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಘಟನೆಗೂ ಲಿಂಕ್ ಇರುವಂತೆ ಕಾಣಿಸುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಎರಡೂ ಕಡೆ ಬಳಸಿದ ಸ್ಫೋಟಕ ಸಾಮಗ್ರಿಗಳಲ್ಲಿ ಸಾಮ್ಯತೆ ಇದೆ. ಹೀಗಾಗಿ, ಮಂಗಳೂರು ಮತ್ತು ಶಿವಮೊಗ್ಗ ಪೊಲೀಸರು ಕೂಡ ಬಂದು ಪರಿಶೀಲನೆ ನಡೆಸುತ್ತಿದ್ದಾರೆ’ ಎಂದರು.

‘ರಾಮೇಶ್ವರಂ ಕೆಫೆಯಲ್ಲಿ ನಡೆದ ಘಟನೆಯ ತನಿಖೆಗೆ ಏಳೆಂಟು ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ದುಷ್ಕರ್ಮಿ ಹೇಗೆ ಬಂದ, ಯಾವ ರೀತಿ ಸ್ಫೋಟಕ ಇಟ್ಟು ಹೋದ ಎಂಬ ವಿಡಿಯೊ ತುಣುಕು ಸಿಕ್ಕಿದೆ. ಅವನ ಚಹರೆಯ ಸುಳಿವು ಸಿಕ್ಕಿದೆ. ಈ ಹಂತದಲ್ಲಿ ಈ ತನಿಖೆಯ ಮಾಹಿತಿ ಬಹಿರಂಗಪಡಿಸುವುದಿಲ್ಲ. ತನಿಖೆ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿದ್ದೇವೆ. ಘಟನೆಗೆ ಕಾರಣರಾಗಿರುವವರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಬಿಜೆಪಿ ನಾಯಕರು ಏನೇ ಟೀಕೆ ಮಾಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ಬೆಂಗಳೂರಿನ ಹೆಸರು ಹಾಳು ಮಾಡಲು ಬಿಜೆಪಿಯವರು ಪ್ರಯತ್ನಿಸುತ್ತಿರುವುದು ನಮ್ಮ ಗಮನದಲ್ಲಿದೆ. ನಾವು ಮಾತ್ರ ಎಲ್ಲ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತೇವೆ’ ಎಂದರು.

‘ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿ ವತಿಯಿಂದ ಭರಿಸಲಾಗುವುದು. ಪರಿಹಾರ ನೀಡುವ ಸಂದರ್ಭ ಬಂದರೆ ಅದನ್ನೂ ನೀಡುತ್ತೇವೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.