ADVERTISEMENT

ಮಂಗಳೂರು | ಜನನಿಬಿಡ ಸ್ಥಳದಲ್ಲೇ ಸ್ಫೋಟಕ್ಕೆ ವಿಫಲ ಯತ್ನ ನಡೆಸಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 1:21 IST
Last Updated 21 ಜನವರಿ 2020, 1:21 IST
ಬಾಂಬ್‌ ಇದ್ದ ಬ್ಯಾಗ್‌ ಅನ್ನು ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯಗೊಳಿಸಲು ಕೊಂಡೊಯ್ಯುತ್ತಿರುವ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ– ಪ್ರಜಾವಾಣಿ ಚಿತ್ರ
ಬಾಂಬ್‌ ಇದ್ದ ಬ್ಯಾಗ್‌ ಅನ್ನು ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯಗೊಳಿಸಲು ಕೊಂಡೊಯ್ಯುತ್ತಿರುವ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ– ಪ್ರಜಾವಾಣಿ ಚಿತ್ರ   

ಮಂಗಳೂರು: ಇಲ್ಲಿನ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲೇ ಸೋಮವಾರ ಬೆಳಿಗ್ಗೆ ‘ಬಾಕ್ಸ್‌ ಬಾಂಬ್‌’ ಇರಿಸಿರುವ ದುಷ್ಕರ್ಮಿಗಳು, ಜನನಿಬಿಡ ಸ್ಥಳದಲ್ಲೇ ಸ್ಫೋಟಕ್ಕೆ ಯತ್ನ ನಡೆಸಿದ್ದಾರೆ.

ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿಯ ಟಿಕೆಟ್‌ ಕೌಂಟರ್‌ ಸಮೀಪದಲ್ಲಿದ್ದ ಕುರ್ಚಿಯ ಮೇಲೆ ಬ್ಯಾಗ್‌ ಒಂದರಲ್ಲಿ ಇರಿಸಿದ್ದ ಭಾರಿ ಪ್ರಮಾಣದ ಸ್ಫೋಟಕವುಳ್ಳ ಬಾಂಬ್‌ ಸೋಮವಾರ ಬೆಳಿಗ್ಗೆ 9 ಗಂಟೆಗೆ ಪತ್ತೆಯಾಯಿತು. ನಗರ ಪೊಲೀಸರು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ (ಸಿಐಎಸ್‌ಎಫ್‌) ಮತ್ತು ಬಾಂಬ್‌ ಪತ್ತೆ ಹಾಗೂ ನಿಷ್ಕ್ರಿಯ ದಳದ (ಬಿಡಿಡಿಎಸ್‌) ಸಿಬ್ಬಂದಿ ಇಡೀ ದಿನ ಕಾರ್ಯಾಚರಣೆ ನಡೆಸಿ ಬಾಂಬ್‌ ಅನ್ನು ಹೊರಕ್ಕೆ ಸಾಗಿಸಿ, ನಿಷ್ಕ್ರಿಯಗೊಳಿಸಿದರು.

ಬೆಳಿಗ್ಗೆ 9 ಗಂಟೆ ಸುಮಾರಿಗೆ ‘ಬ್ಯಾಕ್‌ ಪ್ಯಾಕ್‌’ ಮಾದರಿಯ ಬ್ಯಾಗ್‌ ಒಂದು ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿ ಕುರ್ಚಿಯ ಮೇಲೆ ಶಂಕಾಸ್ಪದ ರೀತಿಯಲ್ಲಿ ಇರುವುದನ್ನು ಅಲ್ಲಿನ ಭದ್ರತಾ ಉಸ್ತುವಾರಿ ಹೊತ್ತಿರುವ ಸಿಐಎಸ್‌ಎಫ್‌ ಸಿಬ್ಬಂದಿ ಗುರುತಿಸಿದ್ದರು. ತಕ್ಷಣವೇ ಬ್ಯಾಗ್‌ ಅನ್ನು ಹೊರಕ್ಕೆ ಸಾಗಿಸಿ ಪೊಲೀಸರು ಮತ್ತು ಬಿಡಿಡಿಎಸ್‌ ತಂಡಕ್ಕೆ ಮಾಹಿತಿ ನೀಡಿದರು.

ADVERTISEMENT

ಸ್ಥಳಕ್ಕೆ ಬಂದ ಬಾಂಬ್‌ ನಿಷ್ಕ್ರಿಯ ದಳದ ಸೂರ್ಯ ಎಂಬ ಹೆಸರಿನ ಶ್ವಾನ, ಬ್ಯಾಗ್‌ನಲ್ಲಿ ಸ್ಫೋಟಕ ಇರುವುದನ್ನು ಖಚಿತಪಡಿಸಿತು. ನಂತರ ಶೋಧಕದ ನೆರವಿನಿಂದ ಬ್ಯಾಗ್‌ ಅನ್ನು ತಪಾಸಣೆ ನಡೆಸಿದ ಬಿಡಿಡಿಎಸ್‌ ತಂಡ, ಬಾಂಬ್‌ ಇರುವುದನ್ನು ದೃಢಪಡಿಸಿತು. 10 ಗಂಟೆಯ ವೇಳೆಗೆ ಬಾಂಬ್‌ ಇದ್ದ ಬ್ಯಾಗ್‌ ಅನ್ನು ‘ಥ್ರೆಟ್‌ ಕಂಟೇನ್ಮೆಂಟ್‌’ ವಾಹನದೊಳಕ್ಕೆ ಇರಿಸಲಾಯಿತು.

ಮಧ್ಯಾಹ್ನ 2 ಗಂಟೆಗೆ ಥ್ರೆಟ್‌ ಕಂಟೇನ್ಮೆಂಟ್‌ ವಾಹನವನ್ನು ವಿಮಾನ ನಿಲ್ದಾಣದಿಂದ ಸ್ಥಳಾಂತರಿಸಲಾಯಿತು. 2.30ಕ್ಕೆ ವಾಹನ ಕೆಂಜಾರು ಮೈದಾನ ತಲುಪಿತು. ಬಾಂಬ್‌ನಲ್ಲಿದ್ದ ಟೈಮರ್‌ ಸ್ಥಗಿತವಾಗಿದ್ದ ಕಾರಣದಿಂದ ನಿಷ್ಕ್ರಿಯಗೊಳಿಸಲು ಸಾಧ್ಯವಾಗಲಿಲ್ಲ. ಬಾಂಬ್‌ ನಿಷ್ಕ್ರಿಯ ದಳದ ತಂಡವು ಬಾಂಬ್‌ ಇದ್ದ ಬ್ಯಾಗ್‌ ಅನ್ನೇ ಸಂಜೆ 6 ಗಂಟೆಗೆ ಸ್ಫೋಟಗೊಳಿಸುವ ಮೂಲಕ ಅದನ್ನು ನಾಶಪಡಿಸಿತು.

ಆಟೊದಲ್ಲಿ ಬಂದಿದ್ದ ಶಂಕಿತ:ಸೋಮವಾರ ಬೆಳಿಗ್ಗೆ 9 ಗಂಟೆಗೂ ಮೊದಲು ಶಂಕಿತ ವ್ಯಕ್ತಿಯೊಬ್ಬ ಆಟೊ ರಿಕ್ಷಾದಲ್ಲಿ ವಿಮಾನ ನಿಲ್ದಾಣದ ಪ್ರವೇಶ ದ್ವಾರಕ್ಕೆ ಬಂದು ಹೋಗಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಪ್ಯಾಂಟ್‌, ಷರ್ಟ್‌ ಧರಿಸಿದ್ದ ಶಂಕಿತ ವ್ಯಕ್ತಿ ತಲೆಗೆ ಟೋಪಿ ಹಾಕಿಕೊಂಡಿದ್ದಾನೆ. ಈತನೇ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಶಂಕಿತ ವ್ಯಕ್ತಿ ಮತ್ತು ಆತ ಬಂದಿದ್ದ ಆಟೊ ರಿಕ್ಷಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ಆರೋಪಿಯ ಪತ್ತೆಗೆ ನೆರವಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಪ್ಪಿದ ಅಪಾಯ:ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಒಳಕ್ಕೆ ಹೋಗಲು ಮತ್ತು ಹೊರಕ್ಕೆ ಬರಲು ಒಂದೇ ದ್ವಾರವಿದೆ. ಅಲ್ಲಿಂದಲೇ ಎಲ್ಲರೂ ಸಂಚರಿಸಬೇಕಿದೆ. ಬಾಂಬ್‌ ಪತ್ತೆಯಾದ ಸ್ಥಳವು ಪ್ರವೇಶ ದ್ವಾರದ ಕೆಲವೇ ಮೀಟರ್‌ಗಳ ದೂರದಲ್ಲಿದೆ.

ಹೆಚ್ಚಿನ ಪ್ರಯಾಣಿಕರು ಇದೇ ಸ್ಥಳದಲ್ಲಿ ವಾಹನಗಳನ್ನು ಏರಲು ಮತ್ತು ಇಳಿಯಲು ಬರುತ್ತಾರೆ. ಅಂತರರಾಷ್ಟ್ರೀಯ ವಿಮಾನಗಳು ಬಂದಿಳಿದಾಗ ನೂರಾರು ಜನರು ಪ್ರವೇಶದ್ವಾರದ ಎದುರು ಜಮಾಯಿಸುತ್ತಾರೆ. ಅಂತಹ ಸಮಯದಲ್ಲಿ ಸ್ಫೋಟ ಸಂಭವಿಸಿದ್ದಾರೆ ಭಾರಿ ಪ್ರಮಾಣದ ಪ್ರಾಣಹಾನಿ ಸಂಭವಿಸುವ ಅಪಾಯವಿತ್ತು.

ತನಿಖೆಗೆ ಮೂರು ತಂಡ: ಘಟನೆ ಕುರಿತು ಪತ್ರಕರ್ತರ ಜೊತೆ ಮಾತನಾಡಿದ ಕಮಿಷನರ್‌, ‘ಮಧ್ಯ ವಯಸ್ಯ ವ್ಯಕ್ತಿಯೊಬ್ಬ ಬಾಂಬ್‌ ಇದ್ದ ಬ್ಯಾಗ್‌ ಅನ್ನು ಇರಿಸಿ ಹೋಗಿರುವ ಮಾಹಿತಿ ಲಭಿಸಿದೆ. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ. ಬ್ಯಾಗ್‌ ಇರಿಸಿದ್ದ ಆರೋಪಿ ಮತ್ತು ಆತನ ಹಿಂದಿರುವವರನ್ನು ಶೀಘ್ರದಲ್ಲೇ ಪತ್ತಹೆಚ್ಚಿ ಬಂಧಿಸುವ ವಿಶ್ವಾಸವಿದೆ. ಸ್ಫೋಟ ಯತ್ನದ ಹಿಂದಿರುವ ಕಾರ್ಯಯೋಜನೆಯನ್ನೂ ಬಯಲಿಗೆ ಎಳೆಯಲಾಗುವುದು’ ಎಂದರು.

ಸಿಐಎಸ್‌ಎಫ್‌ ಸಿಬ್ಬಂದಿ ತಕ್ಷಣವೇ ಅನುಮಾನಾಸ್ಪದ ಬ್ಯಾಗ್‌ ಪತ್ತೆ ಮಾಡಿರುವುದರಿಂದ ಪ್ರಾಣಹಾನಿ ತಪ್ಪಿದೆ. ಪೊಲೀಸರು ಮತ್ತು ಬಾಂಬ್‌ ನಿಷ್ಕ್ರಿಯ ದಳದ ಕಾರ್ಯಾಚರಣೆಯಿಂದ ಯಾವುದೇ ರೀತಿಯ ತೊಂದರೆ ಇಲ್ಲದಂತೆ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಯಿತು ಎಂದು ಹೇಳಿದರು.

‘ಬಾಕ್ಸ್‌ ಬಾಂಬ್‌’ನಲ್ಲಿ ಏನಿತ್ತು?
‘ಟಿಫಿನ್‌ ಬಾಕ್ಸ್‌ ಮಾದರಿಯ ನಾಣ್ಯದ ಹುಂಡಿಯನ್ನು ಬಾಂಬ್‌ ತಯಾರಿಕೆಗೆ ಬಳಸಲಾಗಿತ್ತು. ಅದರಲ್ಲಿ ಸ್ಫೋಟಕದ ಪುಡಿ, ತಂತಿ ಮತ್ತು ಟೈಮರ್‌ ಒಳಗೊಂಡ ಸುಧಾರಿತ ಸ್ಫೋಟಕ ಸಾಧನ ಹಾಗೂ ಲೋಹದ ತುಣುಕುಗಳಿದ್ದವು’ ಎಂದು ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಮಾಹಿತಿ ನೀಡಿದರು.

ಬ್ಯಾಕ್‌ ಪ್ಯಾಕ್‌ ಬ್ಯಾಗ್‌ನ ಒಳಗೆ ಬಾಕ್ಸ್‌ ಬಾಂಬ್‌ ಇರಿಸಲಾಗಿತ್ತು. ಬ್ಯಾಗ್‌ನ ತೂಕ 8 ಕೆ.ಜಿ.ಗೂ ಹೆಚ್ಚಿತ್ತು ಎಂದು ತಿಳಿಸಿದರು.

‘ಇಂಡಿಗೊ’ ಸ್ಫೋಟದ ಬೆದರಿಕೆ
ಬಾಂಬ್‌ ಪತ್ತೆಯಾದ ಬೆನ್ನಲ್ಲೇ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ ವಿಮಾನದಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ವಿಮಾನಯಾನ ನಿಯಂತ್ರಣ ಕೊಠಡಿಗೆ (ಎಟಿಸಿ) ಹುಸಿ ಕರೆ ಬಂದಿತು. ಇದರಿಂದ ಇಡೀ ದಿನ ವಿಮಾನ ನಿಲ್ದಾಣದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು.

‘ಮಧ್ಯಾಹ್ನ 3.15ಕ್ಕೆ ಬೆಂಗಳೂರಿಗೆ ಹೊರಡುವ ವಿಮಾನದಲ್ಲಿ ಬಾಂಬ್‌ ಇರಿಸಿರುವುದಾಗಿ ಅನಾಮಿಕನೊಬ್ಬ ಎಟಿಸಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ತಕ್ಷಣವೇ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಶೋಧ ನಡೆಸಿದರು. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ’ ಎಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್‌ ತಿಳಿಸಿದರು.

ತಪಾಸಣೆ ಪೂರ್ಣಗೊಂಡ ಬಳಿಕ ರಾತ್ರಿ ಬೆಂಗಳೂರಿಗೆ ತೆರಳಿತು.

ಎಲ್ಲೆಡೆ ಕಟ್ಟೆಚ್ಚರ: ಗೃಹ ಸಚಿವ
ಹಾವೇರಿ:
‘ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವುದಾಗಿ ಗುಪ್ತಚರ ಮಾಹಿತಿ ಇರುವುದರಿಂದ ವಿಮಾನ ನಿಲ್ದಾಣ ಸೇರಿದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿಗ್ಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾಗಿದ್ದು, ಅದನ್ನು ತಂದಿಟ್ಟಿರುವ ವ್ಯಕ್ತಿಯನ್ನು ಸಿಸಿಟಿವಿಯಲ್ಲಿ ಗುರುತಿಸಲಾಗಿದೆ. ಶೀಘ್ರ ಪತ್ತೆ ಮಾಡಿ, ಗಂಭೀರ ಕ್ರಮಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.