ADVERTISEMENT

ಬಾಂಬ್ ಬೆದರಿಕೆ: ವಿದೇಶಿ ಕಂಪನಿಗೆ ಪೊಲೀಸರ ಪತ್ರ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2023, 0:30 IST
Last Updated 3 ಡಿಸೆಂಬರ್ 2023, 0:30 IST
   

ಬೆಂಗಳೂರು: ನಗರ ಹಾಗೂ ಗ್ರಾಮಾಂತರ ವಿಭಾಗದ 68 ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್ ಬಂದಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಇ–ಮೇಲ್ ನಿರ್ವಹಣೆ ಮಾಡುತ್ತಿದ್ದ ವಿದೇಶಿ ಕಂಪನಿಗೆ ಪತ್ರ ಬರೆದಿದ್ದಾರೆ.

ಬಾಂಬ್ ಬೆದರಿಕೆ ಆರೋಪಿ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಕಮಿಷನರ್ ಸತೀಶ್‌ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಸೈಬರ್ ಕ್ರೈಂ ಠಾಣೆ ಪೊಲೀಸರು ತಂಡದಲ್ಲಿದ್ದು, ತಾಂತ್ರಿಕ ಪುರಾವೆ ಆಧರಿಸಿ ತನಿಖೆ ಮುಂದುವರಿಸಿದ್ದಾರೆ.

‘khariijites@beeble.com ಹಾಗೂ khharijites@beeble.com ಇ–ಮೇಲ್‌ಗಳಿಂದ ಬೆದರಿಕೆ ಸಂದೇಶ ಬಂದಿತ್ತು. ಸೈಪ್ರಸ್‌ ಸರ್ವರ್ ನಿರ್ವಹಣೆ ಕಂಪನಿಯಲ್ಲಿ ಎರಡೂ ಇ–ಮೇಲ್‌ಗಳು ನೋಂದಣಿ ಆಗಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಇ–ಮೇಲ್ ನೋಂದಣಿ ಯಾರ ಹೆಸರಿನಲ್ಲಿದೆ? ವಿಳಾಸವೇನು? ಎಂಬುದನ್ನು ತಿಳಿಯಲು ಸೈಪ್ರಸ್ ಕಂಪನಿಗೆ ಪತ್ರ ಬರೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ. ಸ್ಥಳೀಯರು ಕೃತ್ಯ ಎಸಗಿರುವ ಅನುಮಾನವಿದ್ದು, ಪುರಾವೆಗಳು ಇಲ್ಲ. ಆದರೆ, ವಿದೇಶದಿಂದ ಸಂದೇಶ ಬಂದಿರುವುದಕ್ಕೆ ಪುರಾವೆಗಳು ಇವೆ. ಅದೇ ಪುರಾವೆ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.

ವಿಪಿಎನ್, ಐಪಿ ಪರಿಶೀಲನೆ:

‘ಬೆದರಿಕೆ ಸಂದೇಶ ಬಂದಿದ್ದ ಇ–ಮೇಲ್‌ಗಳ ವರ್ಚುವಲ್‌ ಪ್ರೈವೆಟ್ ನೆಟ್‌ವರ್ಕ್ (ವಿಪಿಎನ್‌) ಹಾಗೂ ಇಂಟರ್‌ನೆಟ್ ಪ್ರೋಟೊಕಾಲ್ (ಐ.ಪಿ) ವಿಳಾಸದ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಅವೆರಡೂ ‘ರಿಪಬ್ಲಿಕ್ ಆಫ್ ಸೈಪ್ರಸ್’ ಲೊಕೇಷನ್ ತೋರಿಸುತ್ತಿವೆ’ ಎಂದು ಹೇಳಿದರು.

‘ವಿಪಿಎನ್ ಹಾಗೂ ಐ.ಪಿ ನಕಲು ಮಾಡಿ ಸ್ಥಳೀಯ ವ್ಯಕ್ತಿಗಳೇ ಸಂದೇಶ ಕಳುಹಿಸಿರುವ ಸಾಧ್ಯತೆಯೂ ಇದೆ. ಸೈಪ್ರಸ್ ಕಂಪನಿಯಿಂದ ಉತ್ತರ ಬಂದ ನಂತರವೇ ನಿಖರ ಮಾಹಿತಿ ತಿಳಿಯಲಿದೆ’ ಎಂದು ತಿಳಿಸಿದರು.

2022ರಲ್ಲೂ ಬೆದರಿಕೆ:

2022ರ ಏಪ್ರಿಲ್ 8ರಂದು ನಗರದ 16 ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್ ಬಂದಿತ್ತು. ತನಿಖೆ ನಡೆಸಿದ್ದ ಪೊಲೀಸರು, ವಿದೇಶದಿಂದ ಇ–ಮೇಲ್ ಬಂದಿದ್ದನ್ನು ಪತ್ತೆ ಮಾಡಿದ್ದರು. ಇ–ಮೇಲ್ ಬಗ್ಗೆ ಮಾಹಿತಿ ಕೋರಿ ವಿದೇಶಿ ಕಂಪನಿಗೆ ಪತ್ರ ಬರೆದಿದ್ದರು. ಆದರೆ, ಇದುವರೆಗೂ ಕಂಪನಿಯಿಂದ ಉತ್ತರ ಬಂದಿಲ್ಲ. ಹೀಗಾಗಿ, ಹಳೇ ಪ್ರಕರಣದ ತನಿಖೆ ಅರ್ಧಕ್ಕೆ ನಿಂತಿದೆ. ಇದರ ಬೆನ್ನಲ್ಲೇ ಇದೀಗ 68 ಶಾಲೆಗಳಿಗೆ ಪುನಃ ಬೆದರಿಕೆ ಸಂದೇಶ ಬಂದಿದೆ.

‘2022ರಲ್ಲಿ ತಮಿಳುನಾಡಿನ ಬಾಲಕನೊಬ್ಬ ಅಭಿವೃದ್ಧಿಪಡಿಸಿದ್ದ ಸಾಫ್ಟ್‌ವೇರ್‌ ಖರೀದಿಸಿದ್ದ ವಿದೇಶಿ ಪ್ರಜೆಯೊಬ್ಬ ಇ–ಮೇಲ್ ಕಳುಹಿಸಿದ್ದ ಬಗ್ಗೆ ಮಾಹಿತಿ ಇತ್ತು. ಆದರೆ, ಆ ಬಾಲಕ ಹಾಗೂ ವಿದೇಶಿ ಪ್ರಜೆ ಇದುವರೆಗೂ ಪತ್ತೆ ಆಗಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಭಯ ಹುಟ್ಟಿಸಲು ಕೃತ್ಯ:

‘ಶಾಲೆ ಮಕ್ಕಳು, ಪೋಷಕರು ಹಾಗೂ ಶಿಕ್ಷಕರನ್ನು ಭಯಗೊಳಿಸಿ ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಆರೋಪಿಗಳು ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.