ಬೆಂಗಳೂರು: ನರೇಂದ್ರ ಮೋದಿ ಅವರಿಗೆ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುವ ರಾಜಕೀಯ ಮುತ್ಸದ್ದಿತನವಿದ್ದು, ಎನ್‌ಡಿಎ ಒಕ್ಕೂಟದ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ ಎಂದು ಹಾವೇರಿ–ಗದಗ ಸಂಸದ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಲೋಕಸಭೆಗೆ ಬಹಳ ವಿಶೇಷ ಸಂದರ್ಭದಲ್ಲಿ ಆಯ್ಕೆಯಾಗಿದ್ದೇನೆ. ಪ್ರಧಾನಿ ಹಾಗೂ ಪಕ್ಷದ ಹಿರಿಯರ ಮಾತಿನಂತೆ ಸ್ಪರ್ಧೆ ಮಾಡಿದೆ. ಅವರ ಲೆಕ್ಕಾಚಾರ ಸರಿಯಾಗಿದೆ’ ಎಂದು ಹೇಳಿದರು.
‘2014ರಲ್ಲಿ ಪಕ್ಷಕ್ಕೆ ಬಹುಮತ ತಂದುಕೊಟ್ಟರು. ಎರಡನೇ ಬಾರಿ ಬಹುಮತವನ್ನು ಹೆಚ್ಚಿಸಿ ಎನ್‌ಡಿಎ ವಿಸ್ತಾರ ಮಾಡಿದ್ದಾರೆ. ಮೂರನೇ ಬಾರಿ ಎನ್‌ಡಿಎ ಒಕ್ಕೂಟಕ್ಕೆ ಬಹುಮತ ತಂದುಕೊಟ್ಟಿದ್ದಾರೆ. ಇಂಡಿ ಘಟಬಂಧನದಲ್ಲಿ ಯಾವುದೇ ಬೆಳವಣಿಗೆ ಇಲ್ಲ. ಕಾಂಗ್ರೆಸ್ ನಂಬಿ ಹೋಗುವ ಕೆಲಸವನ್ನು ನಿತೀಶ್ ಕುಮಾರ್ ಅಥವಾ ಚಂದ್ರಬಾಬು ನಾಯ್ಡು ಅವರು ಮಾಡುವುದಿಲ್ಲ’ ಎಂದು ಹೇಳಿದರು.
‘ಮಿತ್ರ ಪಕ್ಷಗಳ ಹೆಗಲ ಮೇಲೆ ಕೂತು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಅವರಿಗೆ ಸ್ವಂತ ಬಲವಿಲ್ಲ. ಮಿತ್ರ ಪಕ್ಷಗಳ ನೆರವಿನಿಂದ ಅಷ್ಟು ಸ್ಥಾನಗಳನ್ನು ಗೆದ್ದಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ದಕ್ಷಿಣ ಕರ್ನಾಟಕದಲ್ಲಿ ಉತ್ತಮ ಫಲ ನೀಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.