ಬೆಂಗಳೂರು: ‘ದ್ರಾವಿಡದ ನಮ್ಮೆಲ್ಲಾ ಭಾಷೆಗಳ ಮಧ್ಯೆ ಹಲವು ಸಾಮ್ಯತೆಗಳಿದ್ದರೂ, ಅವು ಭಿನ್ನ–ಭಿನ್ನವಾಗಿಯೇ ಇವೆ. ಪರಸ್ಪರ ವೈಶಿಷ್ಟ್ಯ ಕಾಯ್ದುಕೊಂಡಿವೆ’ ಎಂದು ಮಾತು ಆರಂಭಿಸಿದ್ದು ಮಲಯಾಳ ಮತ್ತು ಇಂಗ್ಲಿಷ್ ಕವಿ ಕೆ.ಸಚ್ಚಿದಾನಂದನ್. ಈ ಮಾತಿಗೆ ಕನ್ನಡ, ತೆಲುಗು, ತಮಿಳು ಬರಹಗಾರರ ಒಮ್ಮತ; ಜತೆಗೆ ಭಿನ್ನಮತ.
ಹೀಗೆ ದ್ರಾವಿಡ ನುಡಿಗಳ ಕವಿ–ಕತೆಗಾರರನ್ನು ಒಂದೇ ವೇದಿಕೆಯಲ್ಲಿ ಕೂಡಿಸಿ, ಭಾಷಾ ಬಾಂಧವ್ಯದ ನೇಯ್ಗೆಗೆ ಅನುವು ಮಾಡಿಕೊಟ್ಟಿದ್ದು ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’. ಇಂಥದ್ದೊಂದು ಪ್ರಯತ್ನ ಇದೇ ಮೊದಲು. ದ್ರಾವಿಡ ಭಾಷೆಗಳ ಕೊಡು–ಕೊಳ್ಳುವಿಕೆ, ಸಾಗುತ್ತಿರುವ ಮತ್ತು ಸಾಗಬೇಕಾದ ಹಾದಿ ಏನು ಎಂಬುದರ ಮೂರು ದಿನಗಳ ಮಥನಕ್ಕೆ ‘ತೆಂಕಣ ನುಡಿ ಕೌದಿ’ ಗೋಷ್ಠಿಯೇ ನಡೆ ಬಿಂದುವಿನಂತಿತ್ತು.
ಗೋಷ್ಠಿ ದ್ರಾವಿಡ ನುಡಿಗಳಾದ್ದಾದರೂ, ಮಾತುಕತೆ ನಡೆದದ್ದು ಇಂಗ್ಲಿಷ್‌ನಲ್ಲಿ. ಕಡೆಗೆ, ‘ಮುಂದಿನ ಬಾರಿ ಎಲ್ಲರಿಗೂ ಮನದಟ್ಟಾಗುವಂತೆ ನಮ್ಮದೇ ನುಡಿಗಳನ್ನಾಡುವ ಮಟ್ಟಿಗೆ ದ್ರಾವಿಡರು ಪರಸ್ಪರ ಬೆಸೆಯಬೇಕು’ ಎಂಬ ಅಭಿಮತಕ್ಕೆ ಬಂದು ನಿಂತಿದ್ದು ಗೋಷ್ಠಿಯ ಸೊಬಗು.
ಸಚ್ಚಿದಾನಂದನ್, ‘ಕನ್ನಡದ ವಚನಗಳನ್ನು ಮಲಯಾಳದಲ್ಲಿ ಕಾಣಲು ಸಾಧ್ಯವೇ? ಅಂತೆಯೇ ತಮಿಳಿನ ಮುರ‍್ರಕಥೈ ಕನ್ನಡದಲ್ಲಿ ಉಂಟೇ?’ ಎಂದಾಗ, ‘ದಕ್ಷಿಣವು ಒಂದೇ ಸಾಂಸ್ಕೃತಿಕ ದೇಶವಾದರೂ, ಭಾಷೆಯಿಂದ ಬೇರೆ–ಬೇರೆಯೆ’ ಎಂದು ತಮಿಳು ಕತೆಗಾರ ಬಿ.ಜಯಮೋಹನ್ ದನಿಗೂಡಿಸಿದರು.
‘ನಮ್ಮ ನಾಲ್ಕೂ ಭಾಷೆ ಮತ್ತು ಸಾಹಿತ್ಯಗಳನ್ನು ಪ್ರತ್ಯೇಕ ಎಂಬಂತೆ ನೋಡಲಾಗುತ್ತಿದೆ. ಆದರೆ ಇವು ಪರಸ್ಪರ ಪ್ರಭಾವದಲ್ಲಿ ಬೆಳೆದಿವೆ, ಬೆಳೆಯುತ್ತಿವೆ’ ಎಂಬುದು ಕನ್ನಡ ಕವಿ, ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಅವರ ಭಿನ್ನಮತ. ‘ತಮಿಳಿನ ಶಿಲಪ್ಪದಿಕಾರಂ ಮಾನವನ ಮೋಕ್ಷದ ವಿಚಾರವನ್ನು ಅನುಸಂಧಾನ ಮಾಡುತ್ತದೆ. ಶಿಲಪ್ಪದಿಕಾರಂನ ರಚನೆಯಾದ ಎಷ್ಟೋ ಶತಮಾನಗಳ ನಂತರ ಆದಿಕವಿ ಪಂಪ ತನ್ನ ಆದಿಪುರಾಣದಲ್ಲಿ ಮಾಡಿದ್ದೂ ಮೋಕ್ಷದ ಚರ್ಚೆಯನ್ನೇ’ ಎಂದು ಪ್ರತಿಪಾದಿಸಿದರು.
‘ಜಾಗತೀಕರಣ ಮತ್ತು ನಗರದೆಡೆಗಿನ ವಲಸೆ ಇಂದಿನ ದ್ರಾವಿಡ ಸಾಹಿತ್ಯಗಳನ್ನು ಪ್ರಭಾವಿಸುತ್ತಿವೆ. ಕನ್ನಡವನ್ನೇ ಪರಿಗಣಿಸಿದರೆ, ಹೊಸ ತಲೆಮಾರಿನ ಬರಹಗಾರರು ಗ್ರಾಮೀಣ ಪ್ರದೇಶದವರೇ ಆಗಿದ್ದಾರೆ. ಬೆಂಗಳೂರಿಗರು ಕೂತು ಕನ್ನಡದಲ್ಲಿ ಬರೆಯುವುದು ತೀರಾ ಕಡಿಮೆ. ನಗರ ಮತ್ತು ಗ್ರಾಮೀಣ ಎಂಬ ಅಂತರವು ಭಾಷೆ ಮತ್ತು ಸಾಹಿತ್ಯದಲ್ಲೂ ಢಾಳಾಗಿ ತಲೆದೋರುತ್ತಿದೆ. ಹೊಸತಲೆಮಾರಿನವರು ಒಂದೆರಡು ಸಂಕಲನಗಳ ನಂತರ ಬರೆದಿದ್ದನ್ನೇ ಬರೆಯುತ್ತಿದ್ದಾರೆ. ದ್ರಾವಿಡದ ಎಲ್ಲಾ ಭಾಷೆಗಳೂ ಈ ಸವಾಲು ಎದುರಿಸುತ್ತಿವೆ’ ಎಂದು ಕನ್ನಡಿಗ ಸಾಹಿತಿ ವಿವೇಕ ಶಾನಭಾಗ ಕಳವಳ ಮುಂದಿಟ್ಟರು.
ಚರ್ಚೆಯನ್ನು ಮತ್ತೊಂದು ಹಾದಿಗೆ ಹೊರಳಿಸಿದ ತೆಲುಗು ಕವಯತ್ರಿ ವೋಲ್ಗಾ (ಲಲಿತಾ ಕುಮಾರಿ), ‘ದ್ರಾವಿಡ ಭಾಷಾ ಸಂಸ್ಕೃತಿಗಳು ಹಲವು ವಿಚಾರದಲ್ಲಿ ಸಾಮ್ಯತೆ ಇದ್ದರೂ, ಸಾಹಿತ್ಯವನ್ನು ಪರಸ್ಪರ ಹಂಚಿಕೊಳ್ಳುವಲ್ಲಿ ಹಿಂದೆ ಬಿದ್ದಿವೆ. ನಮ್ಮಲ್ಲಿಗೆ ಇಂಗ್ಲಿಷ್, ರಷ್ಯನ್, ಫ್ರೆಂಚ್, ಬಂಗಾಳಿ ಸಾಹಿತ್ಯಗಳು ಭಾಷಾಂತರವಾಗಿ ಬಂದಿವೆ. ಆದರೆ, ದ್ರಾವಿಡ ಭಾಷೆಗಳ ಮಧ್ಯೆಯೇ ಭಾಷಾಂತರವಾಗಿದ್ದು ತೀರಾ ಕಡಿಮೆ. ಇದನ್ನು ಪಟ್ಟು ಹಿಡಿದು ಮಾಡಬೇಕಾದ ಅಗತ್ಯವಿದೆ. ಈ ಮೂಲಕ ನಾವು ಪರಸ್ಪರ ಬೆರೆಯುವ ಕೆಲಸವಾಗಬೇಕು’ ಎಂದರು.
ವೇದಿಕೆಯಾಚೆಯ ಸಂವಾದ
ದ್ರಾವಿಡ ಭಾಷೆಗಳ ಬರಹಗಾರರು ಮತ್ತು ಓದುಗರನ್ನು ಒಂದೇ ವೇದಿಕೆಗೆ ತಂದರೂ ಸ್ವಾರಸ್ಯಕರ ಮಾತುಕತೆ ನಡೆದದ್ದು ವೇದಿಕೆಯಾಚೆಯೇ. ನಗರದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ರೂಪಿಸಲಾಗಿದ್ದ ನಾಲ್ಕು ವೇದಿಕೆಗಳಲ್ಲಿ ಏಕಕಾಲಕ್ಕೆ ಗೋಷ್ಠಿಗಳು ನಡೆಯುತ್ತಿದ್ದವು. ಒಂದು ವೇದಿಕೆಯಲ್ಲಿ ಒಂದೆಡೆ ಕನ್ನಡದ ಗೋಷ್ಠಿಯಿದ್ದರೆ ಮತ್ತೊಂದೆಡೆ ತಮಿಳು. ಒಮ್ಮೆ ಮಲಯಾಳದ ಮಾತುಕತೆಯಾದರೆ ಇನ್ನೊಮ್ಮೆ ತೆಲುಗು ಚರ್ಚೆ. ದ್ರಾವಿಡ ಭಾಷೆಯ ಹೆಸರಾಂತ ಬರಹಗಾರರು ಭಾಗಿಯಾಗಿದ್ದ ಸಾಹಿತ್ಯ ಉತ್ಸವದಲ್ಲಿ ಅವರನ್ನು ಕಣ್ತುಂಬಿಕೊಳ್ಳಲೆಂದೇ ಓದುಗರು ಕಿಕ್ಕಿರಿದು ತುಂಬಿದ್ದರು. ಒಂದೇ ಭಾಷೆಗೆ ಸಂಬಂಧಿಸಿದ ಗೋಷ್ಠಿಗಳು ನಡೆಯುವಾಗಲೆಲ್ಲಾ ಓದುಗರು ಸಭಾಂಗಣಗಳಲ್ಲಿ ನಿಂತು ಬರಹಗಾರರ ಮಾತಿಗೆ ಕಿವಿಯಾದರು. ಗೋಷ್ಠಿ ಮುಗಿಸಿ ಹೊರಬಂದಾಗ ತಮ್ಮೊಂದಿಗೆ ಮಾತನಾಡಲು ಮುಗಿಬಿದ್ದ ಓದುಗರನ್ನು ಬರಹಗಾರರು ಹಸನ್ಮುಖಿಯಾಗಿಯೇ ಎದುರುಗೊಂಡರು. ಲೇಖಕ–ಸಹೃದಯರ ಸಂವಾದಕ್ಕೆ ಎಡೆಮಾಡಿಕೊಟ್ಟದ್ದು ಊಟದ ಅಂಗಳ. ಅಲ್ಲಲ್ಲಿ ಹಾಕಿದ್ದ ಮೇಜುಗಳಲ್ಲಿ ಕೈಯೂರಿ ಕಾಫಿ–ಟೀ ಹೀರುತ್ತಲೇ ಹರಟೆ. ಈಚೆಗೆ ಬಂದ ಹೊಸ ಕಥಾಸಂಕಲನ ಸಿನೆಮಾ ವಿಮರ್ಶೆ ಕೃತಕ ಬುದ್ಧಿಮತ್ತೆ ಬೆಂಗಳೂರಿನ ಸಂಚಾರ ದಟ್ಟಣೆಯೂ ಮಾತಿನ ಮಧ್ಯೆ ಬಂದುಹೋದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.