ADVERTISEMENT

ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದ ರಾಜಕಾರಣಿ ಜಾರ್ಜ್ ಫರ್ನಾಂಡಿಸ್: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 9:17 IST
Last Updated 25 ಸೆಪ್ಟೆಂಬರ್ 2022, 9:17 IST
‘ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡಿಸ್’ ಪುಸ್ತಕವನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು.
‘ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡಿಸ್’ ಪುಸ್ತಕವನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು.   

ಬೆಂಗಳೂರು: ‘ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್ ಫರ್ನಾಂಡಿಸ್ ಅವರು ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದ ರಾಜಕಾರಣಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣ್ಣಿಸಿದರು.

ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಜೀವನ ಚರಿತ್ರೆ ಕುರಿತಾದ ‘ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡಿಸ್‘ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕಾಂಗ್ರೆಸ್ ವಿರುದ್ದ ಹೋರಾಡಿದರೂ ಜಾರ್ಜ್‌ ಅವರಿಗೆ ರಾಜಕೀಯ, ಸೈದ್ಧಾಂತಿಕ ಬದ್ದತೆ ಇತ್ತು’ ಎಂದರು.

‘ಜಾರ್ಜ್ ನನಗೆ 71, 72ರಿಂದಲೂ ಪರಿಚಯ. ಅಂತಿಮ ಕಾನೂನು ಓದುವಾಗ ಒಮ್ಮೆ ಮೈಸೂರಿಗೆ ಬಂದಿದ್ದರು. ಆಗ ನಾನು ರೈತ ಸಂಘದಲ್ಲಿದ್ದೆ. ಆಗ ಜಾರ್ಜ್ ಫರ್ನಾಂಡಿಸ್ ಅವರ ಪರಿಚಯವಾಯಿತು. ಅಲ್ಲಿಂದ‌ 1999ರವರಗೆ ಒಡನಾಟ ಇತ್ತು. ನಾನು ರಾಜಕೀಯವಾಗಿ ಬೆಳೆಯಲು ಕಾರಣರಾದವರಲ್ಲಿ ಜಾರ್ಜ್ ಫರ್ನಾಂಡಿಸ್ ಕೂಡ ಒಬ್ಬರು‘ ಎಂದರು.

ADVERTISEMENT

‘ಮೊರಾರ್ಜಿ ಪ್ರಧಾನಿಯಾಗಿದ್ದಾಗ ಜಾರ್ಜ್ ಫರ್ನಾಂಡಿಸ್ ಕೈಗಾರಿಕಾ ಸಚಿವರಾಗಿದ್ದರು. ಆಗಲೂ ಮೈಸೂರಿಗೆ ಬಂದಿದ್ದರು. ನಾನು ಮೈಸೂರಿನ ಸ್ನೇಹಿತರನ್ನು ಸೇರಿಸಿ ಕೊಕೊ ಕೋಲಾ ಕಂಪನಿ ವಿರುದ್ದ ಹೋರಾಟ ಮಾಡಿದ್ದೆ. ಅಂದು ಯಾರೂ ಇನ್ನು ಮುಂದೆ ಕೊಕೊ ಕೋಲಾ ಕುಡಿಯುವುದಿಲ್ಲವೆಂದು ಪ್ರಮಾಣ ಮಾಡಿ ಎಂದು ಪ್ರಮಾಣ ಮಾಡಿಸಿದ್ದೆ. ಅಂದಿನಿಂದ ಇಲ್ಲಿಯವರೆಗೂ ಕೊಕೊಕೋಲಾ ಕುಡಿದಿಲ್ಲ, ಮುಂದೆಯೂ ಕುಡಿಯಲ್ಲ‌’ ಎಂದು ಕೊಕೊ ಕೋಲಾ ಕುಡಿಯದಿರುವುದಕ್ಕೆ ಕಾರಣವನ್ನು ಸಿದ್ದರಾಮಯ್ಯ ಬಿಚ್ಚಿಟ್ಟರು.

‘ಖಾಲಿ ಕೈನಲ್ಲಿ ಮುಂಬೈಗೆ ಹೋಗಿದ್ದ ಜಾರ್ಜ್‌ ಫರ್ನಾಂಡಿಸ್, ಕಾರ್ಮಿಕ ಸಂಘಟನೆ ಮಾಡಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದರು. ಕಾಂಗ್ರೆಸ್‌ನ ಪ್ರಭಾವಿ ಹಿರಿಯ ನಾಯಕನನ್ನೇ ಅವರು ಸೋಲಿಸಿದ್ದರು. ಅದಕ್ಕೆ ಜಾರ್ಜ್‌ ಅವರನ್ನು ಜೈಯಂಟ್ ಕಿಲ್ಲರ್ಎಂದು ಕರೆಯುತ್ತಿದ್ದರು. ಜಾರ್ಜ್ ಒಮ್ಮೆ ಕಾರ್ಮಿಕ ಹೋರಾಟಕ್ಕೆ ಕರೆ ಕೊಟ್ಟರೆ ಇಡೀ ಮುಂಬೈ ಸ್ತಬ್ಧವಾಗುತ್ತಿತ್ತು’ ಎಂದೂ ಹೇಳಿದರು,

ನಿವೃತ್ತ ನ್ಯಾಯಮೂರ್ತಿಗಳಾದ ಎಂ.ಎನ್. ವೆಂಕಟಾಚಲಯ್ಯ, ಎನ್.ಸಂತೋಷ್ ಹೆಗ್ಡೆ, ಲೇಖಕ ಡಾ. ರಾಹುಲ್ ರಾಮಗುಂಡಂ, ಮೈಕಲ್.ಬಿ. ಫರ್ನಾಂಡಿಸ್, ಪತ್ರಕರ್ತ ಬಿ.ಎಂ. ಹನೀಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.