ADVERTISEMENT

ಶಿರೂರು ಮಠದಲ್ಲಿ ಸಿಕ್ಕ ಬಾಟಲ್‌ ಮೇಲೆ ಸಂಶಯ, ಸಾವಿನ ಹಿಂದೆ ಭೂಮಾಫಿಯಾ?

​ಪ್ರಜಾವಾಣಿ ವಾರ್ತೆ
Published 22 ಜುಲೈ 2018, 10:04 IST
Last Updated 22 ಜುಲೈ 2018, 10:04 IST
   

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರು ಮೃತಪಡುವುದಕ್ಕೂ ಮುನ್ನ ಉಳಿದುಕೊಂಡಿದ್ದು ಹಿಡಿಯಡಕದ ಮೂಲಮಠದಲ್ಲಿ ಆರೋಗ್ಯ ವರ್ಧಕ ಪೇಯದ ಬಾಟಲ್‌ವೊಂದು ಪೊಲೀಸರು ಕೈಗೆ ಸಿಕ್ಕಿದೆ ಎನ್ನಲಾಗಿದ್ದು, ಇದರಲ್ಲಿ ವಿಷವಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಮೊರಿನ್‌ಝಿ (morinzhi) ಎಂಬ ಹೆಸರಿನ ಬಾಟಲ್ ಇದ್ದಾಗಿದ್ದು, ನೋನಿ ಹಣ್ಣಿನಿಂದ ತಯಾರಿಸಿದ ಪೇಯವನ್ನು ಒಳಗೊಂಡಿರುತ್ತದೆ. ಸ್ವಾಮೀಜಿಗೆ ಮೊರಿನ್‌ಝಿ ಸೇವನೆ ಮಾಡುವ ಹವ್ಯಾಸ ಇತ್ತು ಎಂದು ಮಠದ ಮೂಲಗಳು ತಿಳಿಸಿವೆ. ಬಾಟಲ್‌ನಲ್ಲಿ ಬಹುತೇಕ ಪೇಯ ಖಾಲಿಯಾಗಿರುವುದು ಕಂಡುಬಂದಿದೆ.

ಆದರೆ, ಮೊರಿನ್‌ಝಿ ಬಾಟಲ್‌ನಲ್ಲಿ ವಿಷ ಇತ್ತೇ ಎಂಬುದು ಮಾತ್ರ ಖಚಿತವಾಗಿಲ್ಲ. ಪೊಲೀಸರು ಕೂಡ ಮಠದಲ್ಲಿ ಆರೋಗ್ಯ ವರ್ಧಕ ಪೇಯದ ಬಾಟಲ್‌ ಸಿಕ್ಕಿರುವುದನ್ನು ಇದುವರೆಗೂ ಖಚಿತಪಡಿಸಿಲ್ಲ.

ADVERTISEMENT

ಈ ಮಧ್ಯೆ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು, ಹಲವು ಆಯಾಮಗಳಲ್ಲಿ ತನಿಖೆನಡೆಸುತ್ತಿದ್ದಾರೆ ಎನ್ನಲಾಗಿದೆ. ಮಠಕ್ಕೆ ಬಾಟಲ್‌ ಹೇಗೆ ಬಂತು. ಸ್ವಾಮೀಜಿ ಎಂದಿನಿಂದ ಸೇವಿಸುತ್ತಿದ್ದರು. ಅವರ ಜತೆಗಿನ ಒಡನಾಟದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಇದುವರೆಗೂ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಶಿರೂರು ಶ್ರೀಗಳ ಅನುಮಾನಾಸ್ಪದ ಸಾವಿನಲ್ಲಿ ಭೂ ಮಾಫಿಯಾ ಕೈವಾಡ ಇರುವ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಶ್ರೀಗಳು ಸಾವಿಗೂ ಮುನ್ನ ಭೂತಕೋಲದ ದೈವದ ಎದುರು ಮುಂಬೈ ಮೂಲದ ಇಬ್ಬರು ಉದ್ಯಮಿಗಳು ₹ 26 ಕೋಟಿ ನೀಡಬೇಕು. ಅದನ್ನು ಕೊಡಿಸು ದೈವವೇ ಎಂದು ಬೇಡಿಕೊಂಡಿದ್ದ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ವಿಡಿಯೊಮಾಹಿತಿ ಆಧರಿಸಿ ಮುಂಬೈ ಮೂಲದ ಆ ಇಬ್ಬರು ಉದ್ಯಮಿಗಳು ಯಾರು ಎಂಬ ಶೋಧ ನಡೆಯುತ್ತಿದೆ. ಜತೆಗೆ, ಶ್ರೀಗಳ ಜತೆಗೆ ವ್ಯಾವಹಾರಿಕ ನಂಟು ಹೊಂದಿದ್ದ ಉದ್ಯಮಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಮಧ್ಯೆ ಉಡುಪಿಯಲ್ಲಿರುವ ಶಿರೂರು ಮಠದ ಮಾಲೀಕತ್ವದಲ್ಲಿರುವ ಕನಕಮಾಲ್‌ ನಿರ್ಮಾಣಕ್ಕೆ ಪಡೆದಿದ್ದ ಸಾಲಕ್ಕೆ ಪ್ರತಿಯಾಗಿ ಸಾಲ ಕಟ್ಟಲಾಗದ ಬಗ್ಗೆ ಸ್ವಾಮೀಜಿ ನೊಂದುಕೊಂಡಿದ್ದರು. ಈ ವಿಚಾರವಾಗಿ ಬಿಲ್ಡರ್‌ಗಳ ಜತೆಗೆ ವೈಮನಸ್ಸಿತ್ತು. ಕೊನೆಗೆ ಅದು ಬಗೆಹರಿಯುವ ಹಂತ ತಲುಪಿ, ಸ್ವಾಮೀಜಿಗೆ ₹10 ರಿಂದ 12 ಕೋಟಿ ಕೊಡುವುದಾಗಿ ಬಿಲ್ಡರ್‌ ಒಪ್ಪಿಕೊಂಡಿದ್ದರು. ಈ ವಿಚಾರವನ್ನು ಎಸ್‌ಪಿ ಅವರಿಗೆ ತಿಳಿಸಿರುವುದಾಗಿ ಕೇಮಾರು ಮಠದ ಸ್ವಾಮೀಜಿ ಹೇಳಿಕೆ ನೀಡಿದ್ದರು. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.