ಶಿವಮೊಗ್ಗ: ಇಲ್ಲಿನ ರೈಲ್ವೆ ನಿಲ್ದಾಣದ ವಾಹನಗಳ ನಿಲುಗಡೆ ಸ್ಥಳದಲ್ಲಿ ಭಾನುವಾರ ವಾರಸುದಾರರಿಲ್ಲದ ಎರಡು ಕಬ್ಬಿಣದ ಪೆಟ್ಟಿಗೆಗಳು (ಬಾಕ್ಸ್) ಪತ್ತೆಯಾಗಿವೆ. ಇದು ಅನುಮಾನಕ್ಕೆ ಕಾರಣವಾಗಿದ್ದು, ಸ್ಥಳದಲ್ಲಿ ಆತಂಕ ಸೃಷ್ಟಿಸಿತ್ತು.
ಬಾಕ್ಸ್‌ಗಳನ್ನು ಗೋಣಿ ಚೀಲದಲ್ಲಿ ಸುತ್ತಲಾಗಿದ್ದು, ಚೀಲದ ಮೇಲೆ ‘ಬಾಂಗ್ಲಾದೇಶ’ ಎಂದು ಬರೆಯಲಾಗಿದೆ. ಬಾಂಬ್ ಪತ್ತೆ ದಳ ಮತ್ತು ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೊದಲು ಬಾಕ್ಸ್‌ಗಳನ್ನು ಗಮನಿಸಿದ ಆಟೊ ಚಾಲಕರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಇನ್‌ಸ್ಪೆಕ್ಟರ್ ಬಿ.ಎನ್. ಕುಬೇರಪ್ಪ ಅವರ ಗಮನಕ್ಕೆ ತಂದಿದ್ದಾರೆ. ಸ್ಥಳ ಪರಿಶೀಲಿಸಿದ ಆರ್‌ಪಿಎಫ್ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಕ್ಸ್‌ಗಳಿಗೆ ಬೀಗ ಹಾಕಿದ್ದು, ಒಳಗೆ ಏನಿದೆ ಎಂಬುದು ತಿಳಿದುಬಂದಿಲ್ಲ. ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ತಂಡದ ಸಿಬ್ಬಂದಿ ಬರಬೇಕಿದೆ. ರಾತ್ರಿ ವೇಳೆಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಾಕ್ಸ್‌ಗಳಿದ್ದ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರನ್ನು ನಿಯಂತ್ರಿಸಲಾಗಿದೆ. ಬಂದೋಬಸ್ತ್‌ಗೆ ಪೊಲೀಸರನ್ನು ನಿಯೋಜಿಸಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ ಅವರೂ ಪರಿಶೀಲಿಸಿದ್ದಾರೆ.
ತಿಪಟೂರಿನಲ್ಲಿ ಇಬ್ಬರು ವಶಕ್ಕೆ
ತುಮಕೂರು: ಶಿವಮೊಗ್ಗ ರೈಲು ನಿಲ್ದಾಣದ ವಾಹನ ನಿಲುಗಡೆ ಸ್ಥಳದಲ್ಲಿ ಪತ್ತೆಯಾಗಿದ್ದ ಎರಡು ಬಾಕ್ಸ್‌ಗಳ ಪ್ರಕರಣಕ್ಕೆ ಸಂಬಂಧಿಸಿ ತಿಪಟೂರಿನ ಇಬ್ಬರನ್ನು ಶಿವಮೊಗ್ಗ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
ತಿಪಟೂರಿನ ಗಾಂಧಿನಗರದ ನಿವಾಸಿ ನಸರುಲ್ಲಾ ಭೋವಿ ಕಾಲೊನಿಯ ನಿವಾಸಿ ಜಬಿವುಲ್ಲಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಬಾಕ್ಸ್ ಇಡಲು ಬಳಸಿದ್ದ ಕಾರಿನ ಚಾಲಕರು ಎಂದು ತಿಳಿದು ಬಂದಿದೆ.
ಶಿವಮೊಗ್ಗ ರೈಲು ನಿಲ್ದಾಣದಿಂದ ಕಾರು ತಿಪಟೂರಿಗೆ ಬಂದಿರುವ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ‘ಶಿವಮೊಗ್ಗ ಜಿಲ್ಲಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.