ADVERTISEMENT

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ: ಸಿ.ಎಂ ಆಹ್ವಾನ ತಿರಸ್ಕರಿಸಿದ B.R ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 14:49 IST
Last Updated 18 ಅಕ್ಟೋಬರ್ 2023, 14:49 IST
ಬಿ.ಆರ್. ಪಾಟೀಲ
ಬಿ.ಆರ್. ಪಾಟೀಲ   

ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಆಹ್ವಾನವನ್ನು ಆಳಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಆರ್‌. ಪಾಟೀಲ ತಿರಸ್ಕರಿಸಿದ್ದಾರೆ.

ರಾಜ್ಯ ಸರ್ಕಾರದ ನಡೆಯ ವಿರುದ್ಧ ಆರಂಭದಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿರುವ ಪಾಟೀಲರಿಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲು ಸಿದ್ದರಾಮಯ್ಯ ಮುಂದಾಗಿದ್ದರು ಎನ್ನಲಾಗಿದೆ. ಆದರೆ, 'ನನಗೆ ಆ ಸ್ಥಾನ ಬೇಡ’ ಎಂದು ಪಾಟೀಲರು ನೇರವಾಗಿ ಮುಖ್ಯಮಂತ್ರಿ ಅವರಿಗೇ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

35 ವರ್ಷಗಳ ಬಳಿಕ ಆಳಂದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಗೆದ್ದಿದೆ. ಹಿರಿಯ ಶಾಸಕರಾಗಿರುವ ಪಾಟೀಲರನ್ನು ಸಚಿವರನ್ನಾಗಿ ಮಾಡಬೇಕೆಂಬ ಕೂಗು ಕ್ಷೇತ್ರದಲ್ಲಿದೆ. ಪಾಟೀಲರನ್ನು ಬೆಂಬಲಿಸಿದರೆ ಮಂತ್ರಿ ಮಾಡಲಾಗುವುದು ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ, ಸೂಕ್ತ ಸ್ಥಾನಮಾನ ಸಿಗದೇ ಇರುವುದರಿಂದ ಸಿದ್ದರಾಮಯ್ಯ ವಿರುದ್ಧ ಪಾಟೀಲರು ಮುನಿಸಿಕೊಂಡಿದ್ದಾರೆ.

ADVERTISEMENT

ರಾಜ್ಯ ಯೋಜನಾ ಮಂಡಳಿಯ (ಈಗ ರಾಜ್ಯ ಪರಿವರ್ತನಾ ಸಂಸ್ಥೆ) ಉಪಾಧ್ಯಕ್ಷ ಸ್ಥಾನ ನೀಡುವುದಾದರೆ ಒಪ್ಪಿಕೊಳ್ಳಲು ಪಾಟೀಲರು ಸಿದ್ಧರಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಬಳಿಯೂ ಹೇಳಿಕೊಂಡಿದ್ದರು ಎಂದು ಗೊತ್ತಾಗಿದೆ. ಆದರೆ, ಆ ಸ್ಥಾನವನ್ನು ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ನೀಡಲು ಮುಖ್ಯಮಂತ್ರಿ ಒಲವು ಹೊಂದಿದ್ದರು. ಅಲ್ಲದೆ, ಈ ಬಗ್ಗೆ ಪಾಟೀಲರ ಬಳಿಯೂ ಹೇಳಿಕೊಂಡಿದ್ದರು. ಆದರೆ, ಆ ಸ್ಥಾನ ವಹಿಸಿಕೊಳ್ಳಲು ರಾಯರಡ್ಡಿ ತಯಾರಾಗಲಿಲ್ಲ ಎನ್ನಲಾಗಿದೆ.

ನಂತರ ಎಂ.ವಿ. ರಾಜೀವ್‌ ಗೌಡ ಅವರನ್ನು ಯೋಜನಾ ಮಂಡಳಿಯ (ಈಗ ರಾಜ್ಯ ಪರಿವರ್ತನಾ ಸಂಸ್ಥೆ) ಉಪಾಧ್ಯಕ್ಷರನ್ನಾಗಿ ನೇಮಿಸಿ, ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ.

‘ಪಕ್ಷದ ಹಿರಿಯ ಶಾಸಕರ ಪೈಕಿ ನಾನೂ ಒಬ್ಬ. ಸಿದ್ದರಾಮಯ್ಯ, ಆರ್‌.ವಿ. ದೇಶಪಾಂಡೆ ಮತ್ತು ನಾನು ಒಟ್ಟಿಗೆ (1983)  ವಿಧಾನಸಭೆಗೆ ಬಂದವರು. ನಮಗಿಂತ ಮೊದಲು (1978ರಲ್ಲಿ) ಬಂದ ಎಂ.ವೈ. ಪಾಟೀಲರು ಮತ್ತು ಟಿ.ಬಿ. ಜಯಚಂದ್ರ ಕೂಡಾ ಇದ್ದಾರೆ. ಮುಖ್ಯಮಂತ್ರಿಯ ಅಡಿಯಲ್ಲಿ ಕೆಲಸ ಮಾಡಲು ಸಿದ್ಧ. ಅವರನ್ನು ಹೊರತುಪಡಿಸಿ, ಇನ್ನೊಬ್ಬರ ಅಡಿಯಲ್ಲಿ ಕೆಲಸ ಮಾಡುವುದಿಲ್ಲ (ಗಡಿ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಮತ್ತು ಸಂಸ್ಕೃತಿ ಸಚಿವರ ಅಡಿಯಲ್ಲಿದೆ). ಈ ವಯಸ್ಸಿನಲ್ಲಿ (ಹಿರಿತನ) ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕೇ?’ ಎಂದು ಪಾಟೀಲರು ತಮ್ಮ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ ಎಂದೂ ಗೊತ್ತಾಗಿದೆ.

‘ಸಿದ್ದರಾಮಯ್ಯ ಅವರ ‘ಅಹಿಂದ’ ಹೋರಾಟದಲ್ಲಿ ನಾನು ಮುಂಚೂಣಿಯಲ್ಲಿದ್ದೆ. ನನ್ನ ಸಮುದಾಯದ (ಲಿಂಗಾಯತ) ವಿರೋಧವನ್ನೂ ಲೆಕ್ಕಿಸದೆ ಸಾಥ್‌ ನೀಡಿದ್ದೆ. ಕ್ಷೇತ್ರದ ಮತದಾರರು ಕೆಲಸ ಮಾಡಲು ನನಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದಾರೆ. ಮೊದಲಿನಿಂದಲೂ ರೈತ ಹೋರಾಟದಲ್ಲಿ ಇದ್ದೇನೆ. ನನ್ನದೇ ಹಾದಿಯಲ್ಲಿ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡು ಸಕ್ರಿಯವಾಗಿ ಇರುತ್ತೇನೆ’ ಎಂದೂ ಹೇಳಿಕೊಂಡಿದ್ದಾರೆ.

‘ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಎಲ್ಲ ವಿಷಯದಲ್ಲೂ ಶರಣಾಗತಿ ಆಗಲು ಸಾಧ್ಯವಿಲ್ಲ. ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಅಕ್ರಮ ಮದ್ಯ ಮಾರಾಟ ತಡೆ ವಿಚಾರದಲ್ಲಿ ನನ್ನ ಹೋರಾಟ ನಿರಂತರವಾಗಿ ಮುಂದುವರೆಯಲಿದೆ. ಭಿಕ್ಷೆ ಬೇಡಿ ಅಧಿಕಾರ ಕೇಳುವ ಜಾಯಮಾನ ನನ್ನದಲ್ಲ’ ಎಂದು ಪಾಟೀಲರು ಇತ್ತೀಚೆಗೆ ಮುಖ್ಯಮಂತ್ರಿ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಅನುದಾನ ಬೇಡಿಕೆ, ವರ್ಗಾವಣೆ ಶಿಫಾರಸು ಸೇರಿದಂತೆ ಶಾಸಕರ ಬೇಡಿಕೆಗಳಿಗೆ ಸಚಿವರು ಸ್ಪಂದಿಸುತ್ತಿಲ್ಲವೆಂದು ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿಯೂ ಧ್ವನಿ ಎತ್ತಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿ.ಆರ್‌. ಪಾಟೀಲ ಅವರಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.