ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರಕ್ಕೆ 84 ಅಡಿ ಎತ್ತರದ ಅತ್ಯಂತ ಸೂಕ್ಷ್ಮ ಕೆತ್ತನೆಯ ‘ಬ್ರಹ್ಮರಥ’ ಉಡುಪಿ ಜಿಲ್ಲೆಯ ಕೋಟೇಶ್ವರದ ‘ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ’ದಲ್ಲಿ ನಿರ್ಮಾಣಗೊಳ್ಳಲಿದೆ!
ರಥ ನಿರ್ಮಾಣ ಕುರಿತಂತೆ ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಅವರ ಪುತ್ರ ರಾಜಗೋಪಾಲ ಆಚಾರ್ಯ ಜೊತೆ ಪಂಪಾ ಕ್ಷೇತ್ರ (ಹಂಪಿ) ಕಿಷ್ಕಿಂದಾಪುರಿಯ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಮಾತುಕತೆ ನಡೆಸಿದ್ದಾರೆ.
ಇದೇ 20ರಂದು ರಾಜಗೋಪಾಲ ಆಚಾರ್ಯ ಅವರು ಕಿಷ್ಕಿಂದೆಗೆ ತೆರಳಿ, ರಥದ ವಿನ್ಯಾಸದ ಕುರಿತು ಚರ್ಚಿಸಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಿರ್ಮಿಸಿಕೊಟ್ಟ ರಥದ ಮಾಹಿತಿಯನ್ನು ಈಗಾಗಲೇ ಪಡೆದುಕೊಂಡಿರುವ ಸ್ವಾಮೀಜಿ, ಅದರಲ್ಲಿ ಏನು ಬದಲಾವಣೆ ಮಾಡಬೇಕೆಂಬ ಬಗ್ಗೆ ಸಲಹೆ ನೀಡಲಿದ್ದಾರೆ. ಮೇ ತಿಂಗಳಲ್ಲಿ ಶುಭ ಮುಹೂರ್ತದಲ್ಲಿ ರಥ ನಿರ್ಮಾಣ ಆರಂಭವಾಗಲಿದೆ. ಎರಡು ವರ್ಷದಲ್ಲಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ರಾಮಮಂದಿರದ ಜೊತೆಗೇ ಸಮರ್ಪಣೆ ಆಗಲಿದೆ.
ರಥ ನಿರ್ಮಾಣಕ್ಕೆ ಅಗತ್ಯವಾದ ಮರ (ಸಾಗವಾನಿ ಮತ್ತು ಬೋಗಿ) ಸೇರಿದಂತೆ ಅಗತ್ಯ ವಸ್ತುಗಳನ್ನು ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಒದಗಿಸಲಿದೆ. ಅತ್ಯಂತ ಸುರಕ್ಷಿತವಾಗಿ ರಥ ನಿರ್ಮಿಸಲು, ತಮ್ಮ ಶಿಲ್ಪಕಲಾ ಕೇಂದ್ರದ ಬಳಿಯಲ್ಲಿ ಪ್ರತ್ಯೇಕ ಕಾರ್ಖಾನೆಯನ್ನು ರಾಜಗೋಪಾಲ ಆಚಾರ್ಯ ಅವರು ನಿರ್ಮಿಸುತ್ತಿದ್ದಾರೆ. ಅದರ ಕೆಲಸ ಏಪ್ರಿಲ್‌ನಲ್ಲಿ ಪೂರ್ಣಗೊಳ್ಳಲಿದೆ.
ಲಕ್ಷ್ಮೀನಾರಾಯಣ ಆಚಾರ್ಯ ಅವರ ನೇತೃತ್ವದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ಕ್ಷೇತ್ರಗಳಿಗೆ 127ಕ್ಕೂ ಹೆಚ್ಚು ರಥಗಳು ನಿರ್ಮಾಣಗೊಂಡಿವೆ. ಕೋಟೇಶ್ವರದ ಕೋಟಿಲಿಂಗೇಶ್ವರ ನಿಗೆ ನಿರ್ಮಿಸಿಕೊಟ್ಟ 63 ಅಡಿ ಎತ್ತರದ ರಥವನ್ನು ವೀಕ್ಷಿಸಿದ ಬಳಿಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ, ಅಯೋಧ್ಯೆಯ ರಾಮನಿಗಾಗಿ ರಥ ನಿರ್ಮಾಣ ಕೆಲಸವನ್ನು ರಾಜಗೋಪಾಲ ಆಚಾರ್ಯ ಅವರಿಗೆ ವಹಿಸಿದ್ದಾರೆ.
‘ರಥ ನಿರ್ಮಿಸುವ ಸಂಬಂಧ ಕಿಷ್ಕಿಂದೆ ಗುರುಗಳು 2019ರ ಮಾರ್ಚ್‌ನಲ್ಲೇ ನಮ್ಮನ್ನು ಸಂಪರ್ಕಿಸಿದ್ದರು. ಎಲ್ಲಿಗೆ, ಏನು ಎಂದು ಹೇಳಿರಲಿಲ್ಲ. ಅಯೋಧ್ಯೆಗೆ ರಥ ಅರ್ಪಿಸುವ ಉದ್ದೇಶದಿಂದ ಸಂಪರ್ಕಿಸಿದ್ದರು ಎಂದು ನಂತರ ಗೊತ್ತಾಯಿತು. ಈ ಅವಕಾಶ ಸಿಕ್ಕಿದ್ದು ನಮ್ಮ ಸೌಭಾಗ್ಯ. ಬೇರೆ, ಬೇರೆ ರಾಜ್ಯಗಳ 18–20 ಶಿಲ್ಪಿಗಳ ಕೌಶಲದ ಬಗ್ಗೆ ಗುಟ್ಟಾಗಿ ಸಮೀಕ್ಷೆ ನಡೆಸಿದ ಬಳಿಕ ನಮಗೆ ಅವಕಾಶ ನೀಡಿದ್ದಾರೆ’ ಎಂದು ರಾಜಗೋಪಾಲ ಆಚಾರ್ಯ ಸಂಭ್ರಮ ಹಂಚಿಕೊಂಡರು.
‘ರಥಗಳಲ್ಲಿ ವಿಶೇಷತೆ, ವಿಭಿನ್ನತೆ ಬಹಳಷ್ಟು ಇಲ್ಲ. ರಥದಲ್ಲಿ ಉತ್ಸವಮೂರ್ತಿ ಕುಳಿತುಕೊಳ್ಳುವ ದೇವರ ಪೀಠ (ಜಿಡ್ಡೆ) ಸಾಮಾನ್ಯವಾಗಿ 20 ಅಡಿ ಎತ್ತರವಿರುತ್ತದೆ. ರಾಮನಿಗಾಗಿ ನಿರ್ಮಿಸುವ ಪೀಠದ ಎತ್ತರ, ಇಡೀ ರಥದ ಎತ್ತರವನ್ನು ಅವಲಂಬಿಸಿ ನಿರ್ಣಯಿ
ಸಲಾಗುತ್ತದೆ. ಶ್ರೀರಾಮಚಂದ್ರನಿಗೆ ನಿರ್ಮಿಸುವ ರಥ, ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮಮಂದಿರದ ಶಿಖರದ ತುದಿ
ಯವರೆಗೆ, ಅಂದರೆ 84 ಅಡಿ ಎತ್ತರ ಇರಬೇಕು. ಇಡೀ ದೇಶದಲ್ಲೇ ಭವ್ಯವಾಗಿ ನಿರ್ಮಾಣವಾಗಲಿರುವ ಮಂದಿರಕ್ಕೆ, ಅರ್ಪಣೆಯಾಗಲಿರುವ ರಥ ಕೂಡಾ ಭವ್ಯವಾಗಿರಬೇಕೆಂದು ಗುರುಗಳು ಅಭಿಪ್ರಾಯಪಟ್ಟಿದ್ದಾರೆ. ಗುರುಗಳ ಜೊತೆ ಚರ್ಚಿಸಿ, ರಥದ ನಕ್ಷೆ ಸಿದ್ಧಪಡಿಸುತ್ತೇವೆ. ಅವರು ತಮ್ಮ ಅನುಯಾಯಿಗಳ ಜೊತೆ ನಮ್ಮ ಕಾರ್ಯಾಗಾರಕ್ಕೆ ಬಂದು ಎಲ್ಲವನ್ನೂ ನೋಡಿಕೊಂಡು ಹೋಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.