ADVERTISEMENT

ಕುಮಾರಸ್ವಾಮಿ ಹೇಳಿಕೆಗೆ ಬ್ರಾಹ್ಮಣ ಮಹಾಸಭಾ ಖಂಡನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 21:39 IST
Last Updated 6 ಫೆಬ್ರುವರಿ 2023, 21:39 IST
   

ಬೆಂಗಳೂರು: ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧ ಮಾಡಿದ ಟೀಕೆಗಳನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡಿಸಿದೆ.

ಗಾಂಧೀಜಿ ಅವರನ್ನು ಕೊಂದ ಸಮುದಾಯ, ಮಹಾರಾಷ್ಟ್ರ ಮೂಲದ ಪೇಶ್ವೆ ವಂಶಸ್ಥರು ಎಂದು ಟೀಕಿಸಿದ್ದಾರೆ. ಜೋಶಿ ಅವರು ದೇಶಸ್ಥರಲ್ಲ, ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದ ಉತ್ತರಾದಿಮಠದ ಅನುಯಾಯಿಗಳು. ಉತ್ತರ ಕರ್ನಾಟಕದ ಮೂಲದವರೇ ವಿನಃ ಮಹಾರಾಷ್ಟ್ರಕ್ಕೆ ಸೇರಿದವರಲ್ಲ. ಅರ್ಹತೆಯೇ ಮಾನದಂಡವಾದಲ್ಲಿ ಜೋಶಿ ಅವರು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದ್ದಾರೆ.

ಹಿಂದೆ ನಡೆದು ಹೋದ ಗಾಂಧಿ ಹತ್ಯೆಯನ್ನೇ ಗುರಿಯಾಗಿಟ್ಟುಕೊಂಡು ಚಿತ್ಪಾವನ ಬ್ರಾಹ್ಮಣ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ನೂರಾರು ವರುಷಗಳ ಹಿಂದೆಯೇ ಕರ್ನಾಟಕಕ್ಕೆ ಬಂದು ನೆಲೆಸಿರುವ ದೇಶಸ್ಥ ಬ್ರಾಹ್ಮಣರು ನಮ್ಮ ನಾಡುನುಡಿ ಜತೆ ಬೆರೆತು ಕನ್ನಡಿಗರೇ ಆಗಿದ್ದಾರೆ. ಉದಾಹರಣೆಗೆ ವರ ಕವಿ ಬೇಂದ್ರೆ, ಆಲೂರ ವೆಂಕಟರಾಯರು ಪ್ರಮುಖರು. ದಾರಿ ತಪ್ಪಿದ ನಾಥುರಾಂ ಗೋಡ್ಸೆ ಎಂಬ ದೇಶ ಭಕ್ತನೊಬ್ಬ ಗಾಂಧಿ ಕೊಂದನೆಂದು ಆ ಸಮುದಾಯಕ್ಕೆ ಸೇರಿದ ಎಲ್ಲರನ್ನು ದೋಷಿಗಳಂತೆ ನೋಡುವುದು ಸಮಂಜಸವಲ್ಲ ಎಂದಿದ್ದಾರೆ.

ADVERTISEMENT

ಕುಮಾರಸ್ವಾಮಿ, ದೇವೇಗೌಡರ ಕುಟುಂಬ ಸನಾತನ ಧರ್ಮಕ್ಕೆ ಗೌರವ ಕೊಟ್ಟಿದ್ದಾರೆ. ಶೃಂಗೇರಿ ಮಠದ ಪರಂಪರೆಯಲ್ಲಿ ಭಕ್ತಿ, ಶ್ರದ್ಧೆ ಹೊಂದಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ನಗರದ ಮಧ್ಯ ಭಾಗದಲ್ಲಿ ನಿವೇಶನ ಮಂಜೂರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ ಮಾಡಿದ್ದಾರೆ. ಹಾಗಾಗಿ, ಅವರ ಬಗ್ಗೆ ವಿಪ್ರ ಸಮುದಾಯಕ್ಕೆ ಸದಾಶಯವಿದೆ. ರಾಜಕೀಯ ವಿರೋಧಿಗಳ ಟೀಕೆಯ ಭರದಲ್ಲಿ ಸಮುದಾಯದ ಹೆಸರು ಬಳಕೆ ಮಾಡುವುದು ವ್ಯಕ್ತಿತ್ವಕ್ಕೆ ಗೌರವ ತರುವ ವಿಷಯವಲ್ಲ ಎಂದು ಹೇಳಿದ್ದಾರೆ.ಕುಮಾರಸ್ವಾಮಿ ಎಲ್ಲಾ ಸಮುದಾಯ ಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದರು.

ಬಸವನಗುಡಿ ಮಹಾಸಭಾ ಖಂಡನೆ: ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಬಸವನಗುಡಿ ಬ್ರಾಹ್ಮಣ ಮಹಾಸಭಾ ಖಂಡಿಸಿದೆ.

ಸ್ವತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣರ ಕೊಡುಗೆ ಅಪಾರ. ಜಾತ್ಯತೀತ ಜನತಾದಳ ಎಂದು ಹೆಸರು ಇಟ್ಟುಕೊಂಡು ಜಾತಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಬ್ರಾಹ್ಮಣ ಸಮುದಾಯದ ಒಳಪಂಗಡಗಳ ಮಧ್ಯೆ ಮನಸ್ತಾಪ ಸೃಷ್ಟಿಸುವ ಉದ್ದೇಶ ಒಳ್ಳೆಯದಲ್ಲ, ಅದರಲ್ಲಿ ಯಶಸ್ವಿಯಾಗುವುದಿಲ್ಲ. ತಕ್ಷಣವೇ ಸಮುದಾದ ಕ್ಷಮೆ ಕೋರಬೇಕು ಎಂದು ಬಸವನಗುಡಿ ಬ್ರಾಹ್ಮಣ ಮಹತ್ವದ ಪ್ರಧಾನ ಕಾರ್ಯದರ್ಶಿ ರಥಯಾತ್ರೆ ಸುರೇಶ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.