ಬೆಂಗಳೂರು: ಎರಡನೇ ದರ್ಜೆ ಗುತ್ತಿಗೆ ಪರವಾನಗಿ ಕೋರಿದ್ದ ಅರ್ಜಿ ನೋಂದಣಿ ಮಾಡಿಸಲು ಗುತ್ತಿಗೆದಾರರಿಂದ ₹9,000 ಲಂಚ ಪಡೆದಿದ್ದ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯು ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶೇಖರ್ ಕೆ. ಎಂಬುವವರಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹ 25,000 ದಂಡ ವಿಧಿಸಿದೆ.
2018ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿಕೊಂಡು, ಶೇಖರ್ ಹಾಗೂ ಅವರ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದ ಚೇತನ್ ಎಂ.ಎಂ. ಎಂಬುವವರನ್ನು ಬಂಧಿಸಿತ್ತು. ಚೇತನ್ 2021ರಲ್ಲಿ ಮೃತಪಟ್ಟಿದ್ದು, ಅವರ ವಿರುದ್ಧದ ವಿಚಾರಣೆಯನ್ನು ಕೈಬಿಡಲಾಗಿತ್ತು. ಲಂಚ ಪ್ರಕರಣದಲ್ಲಿ, ‘ಶೇಖರ್ ಅಪರಾಧಿ’ ಎಂದು ಸಾರಿರುವ ನ್ಯಾಯಾಲಯ, ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಡಿಸೆಂಬರ್ 20ರಂದು ಆದೇಶ ಹೊರಡಿಸಿದೆ.
ಲೋಕೋಪಯೋಗಿ ಇಲಾಖೆಯಲ್ಲಿ ಮೂರನೇ ದರ್ಜೆ ಗುತ್ತಿಗೆ ಪರವಾನಗಿ ಹೊಂದಿದ್ದ ಬಸನಗೌಡ ಪೊಲೀಸ್ ಪಾಟೀಲ ಎಂಬುವವರು, ಎರಡನೇ ದರ್ಜೆ ಗುತ್ತಿಗೆ ಪರವಾನಗಿ ಪಡೆಯಲು 2017ರ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ನೋಂದಣಿ ಮಾಡಿಸಲು ಶುಲ್ಕವನ್ನೂ ಪಾವತಿಸಿದ್ದರು. ಆದರೆ, ಅರ್ಜಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ₹15,000 ಲಂಚ ನೀಡುವಂತೆ ಶೇಖರ್ ತಮ್ಮ ಕಚೇರಿಯಲ್ಲಿ ಗುತ್ತಿಗೆ ನೌಕರನಾಗಿದ್ದ ಚೇತನ್ ಮೂಲಕ ಬೇಡಿಕೆ ಇಟ್ಟಿದ್ದರು.
ಆರಂಭದಲ್ಲಿ ₹4,000 ಲಂಚ ನೀಡಿದ್ದ ಅರ್ಜಿದಾರರು, ಪುನಃ ಲಂಚಕ್ಕೆ ಬೇಡಿಕೆ ಹೆಚ್ಚಿದಾಗ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. 2018ರ ಫೆಬ್ರುವರಿ 9ರಂದು ಬಸನಗೌಡ ಪೊಲೀಸ್ ಪಾಟೀಲ ಅವರಿಂದ ₹5,000 ಲಂಚ ಪಡೆಯುತ್ತಿದ್ದಾಗ ಶೇಖರ್ ಮತ್ತು ಚೇತನ್ ಇಬ್ಬರನ್ನೂ ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಅಧಿಕಾರಿಗಳು, ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಎಂಟು ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, 66 ದಾಖಲೆಗಳನ್ನೂ ಪರಿಶೀಲನೆ ನಡೆಸಿತ್ತು. ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ಡಿ.20ರಂದು ಅಂತಿಮ ಆದೇಶ ಹೊರಡಿಸಿದ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್ ಕೆ. ಅವರು, ಪ್ರಕರಣದಲ್ಲಿ ಶೇಖರ್ ವಿರುದ್ಧದ ದೋಷಾರೋಪ ದೃಢಪಟ್ಟಿದೆ ಎಂದು ಘೋಷಿಸಿದರು.
ಅಪರಾಧಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹25,000 ದಂಡ ವಿಧಿಸಿ ಆದೇಶ ಹೊರಡಿಸಿದರು. ದಂಡದ ಮೊತ್ತವನ್ನು ಪಾವತಿಸಲು ಅಪರಾಧಿಯು ವಿಫಲವಾದರೆ, ಹೆಚ್ಚುವರಿಯಾಗಿ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸುವಂತೆ ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.