ADVERTISEMENT

ಲಂಚ ಪ್ರಕರಣ: ₹ 20.70 ಲಕ್ಷ ವಶ

ಭೂಮಾಪನದಲ್ಲಿ ಅನುಕೂಲ ಮಾಡಿಕೊಟ್ಟಿರುವ ಆರೋಪ: ಆನಂದಕುಮಾರ್‌, ರಮೇಶ್‌ ಸೆರೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 22:30 IST
Last Updated 26 ಆಗಸ್ಟ್ 2021, 22:30 IST
ಬೃಹತ್ ಮೊತ್ತದ ಲಂಚ ಪಡೆದಿರುವ ಆರೋಪ
ಬೃಹತ್ ಮೊತ್ತದ ಲಂಚ ಪಡೆದಿರುವ ಆರೋಪ   

ಬೆಂಗಳೂರು: ಸ್ಥಿರಾಸ್ತಿಯೊಂದರ ಗಡಿ ಗುರುತಿಸುವಾಗ ಅನುಕೂಲ ಮಾಡಿಕೊಡಲು ಬೃಹತ್ ಮೊತ್ತದ ಲಂಚ ಪಡೆದಿರುವ ಆರೋಪದ ಮೇಲೆ ಭೂಮಾಪನ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ನಾಲ್ವರ ಮನೆಗಳಲ್ಲಿ ಬುಧವಾರ ರಾತ್ರಿ ಶೋಧ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ₹ 20.70 ಲಕ್ಷ ನಗದು ಮತ್ತು ಒಟ್ಟು ₹ 70 ಲಕ್ಷ ಮೊತ್ತದ ಮೂರು ಚೆಕ್‌ಗಳನ್ನು ವಶಪಡಿಸಿಕೊಂಡಿದೆ.

ಭೂಮಾಪನ ಇಲಾಖೆಯ ಯಲಹಂಕ (ಬೆಂಗಳೂರು ಉತ್ತರ ಹೆಚ್ಚುವರಿ) ತಾಲ್ಲೂಕು ಸಹಾಯಕ ನಿರ್ದೇಶಕ (ಎಡಿಎಲ್‌ಆರ್‌) ಆನಂದಕುಮಾರ್‌ ಅವರ ಜಾಲಹಳ್ಳಿಯ ಮನೆ, ಅವರ ಕಚೇರಿಯ ಗುತ್ತಿಗೆ ನೌಕರ ರಮೇಶ್ ಅವರ ಜಾಲಹಳ್ಳಿ ಸಮೀಪದಲ್ಲಿರುವ ಮನೆ, ಭೂಮಾಪನ ಇಲಾಖೆಯ ಬೆಂಗಳೂರು ನಗರ ಜಿಲ್ಲೆಯ ಉಪ ನಿರ್ದೇಶಕಿ ಕುಸುಮಲತಾ ಅವರ ಕೆಂಗೇರಿಯ ಮನೆ ಮತ್ತು ಎಡಿಎಲ್‌ಆರ್‌ ಕಚೇರಿಯ ಭೂಮಾಪನ ಮೇಲುಸ್ತುವಾರಿ ಅಧಿಕಾರಿ ಶ್ರೀನಿವಾಸ್‌ ಆಚಾರ್‌ ಅವರ ತುಮಕೂರಿನ ಮನೆಗಳಲ್ಲಿ ಶೋಧ ನಡೆಸಲಾಗಿದೆ.

ಈ ಪೈಕಿ ಆನಂದಕುಮಾರ್‌ ಮನೆಯಲ್ಲಿ ₹ 20.70 ಲಕ್ಷ ನಗದು ಪತ್ತೆಯಾಗಿದ್ದರೆ, ರಮೇಶ್‌ ಮನೆಯಲ್ಲಿ ಮೂರು ಚೆಕ್‌ಗಳು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು, ಈ ಇಬ್ಬರನ್ನೂ ಬಂಧಿಸಿದ್ದಾರೆ. ಶ್ರೀನಿವಾಸ್‌ ಆಚಾರ್‌ ಅವರ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

ADVERTISEMENT

ಗೋಮಾಳ ಜಮೀನು ಸೇರಿಸಿ ದಾಖಲೆ ಸೃಷ್ಟಿ: ಯಲಹಂಕ ತಾಲ್ಲೂಕಿನ ಕುದುರೆಗೆರೆ ಗ್ರಾಮದ ಸ್ವತ್ತಿನ ಗಡಿ ವಿವಾದ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗದಾಸನಪುರದ ವ್ಯಕ್ತಿಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌, ಭೂಮಾಪನ ಇಲಾಖೆಗೆ ಆದೇಶಿಸಿತ್ತು. ಇತ್ತೀಚೆಗೆ ಸದರಿ ಸ್ವತ್ತಿನ ಭೂಮಾಪನ ನಡೆಸಿದ್ದ ಅಧಿಕಾರಿಗಳು, ಅಳತೆ ಟಿಪ್ಪಣಿ ತಯಾರಿಸಿದ್ದರು.

‘ಆ ಸ್ವತ್ತಿನ ಮಾಲೀಕರು ನೈಜವಾಗಿ ಹೊಂದಿದ್ದ ಜಮೀನಿನ ಜತೆಗೆ ಪಕ್ಕದ ಗೋಮಾಳ ಜಮೀನು ಹಾಗೂ ನಮ್ಮ ಜಮೀನಿನ ಒಂದಷ್ಟು ಭಾಗವನ್ನೂ ಸೇರಿಸಿ 14 ಎಕರೆಗೆ ಅಳತೆ ಟಿಪ್ಪಣಿ ತಯಾರಿಸಿದ್ದಾರೆ. ಇದಕ್ಕಾಗಿ ₹ 70 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆನಂದ ಕುಮಾರ್‌ ಮತ್ತು ಇತರ ಆರೋಪಿಗಳು, ಈಗಾಗಲೇ ₹ 20 ಲಕ್ಷ ಪಡೆದುಕೊಂಡಿದ್ದಾರೆ’ ಎಂದು ಆರೋಪಿಸಿ ನೆರೆಯ ಜಮೀನಿನ ಮಾಲೀಕರೊಬ್ಬರು ಎಸಿಬಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.