ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಮಧ್ಯೆ ಅಸಮಾಧಾನ ಉಂಟಾಗಿದೆ ಎಂಬ ವಿಷಯ ಪಕ್ಷದ ವಲಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ.
ತುಮಕೂರು ಮತ್ತು ಕುಣಿಗಲ್ ಜನಸಂಕಲ್ಪ ಯಾತ್ರೆಗಳಲ್ಲಿ ಯಡಿಯೂರಪ್ಪ ಭಾಗವಹಿಸಿಲ್ಲ. ಈ ಎರಡೂ ಕಾರ್ಯಕ್ರಮಗಳಿಗೆ ಸರಿಯಾದ ರೀತಿಯಲ್ಲಿ ಆಮಂತ್ರಣ ನೀಡದ ಕಾರಣ ಬೇಸರಗೊಂಡು ಯಡಿಯೂರಪ್ಪ ಅವರು ಭಾಗವಹಿಸಿಲ್ಲ.ಅವರನ್ನು ಆಹ್ವಾನಿಸಬೇಕಾಗುತ್ತದೆ ಎಂಬ ಕಾರಣಕ್ಕೇ, ಚಾಮರಾಜನಗರದ ಪಕ್ಷದ ಕಾರ್ಯಕ್ರಮವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಪರಿವರ್ತಿಸಲಾಯಿತು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದಿವೆ.
ಗುಜರಾತ್ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಪ್ರತ್ಯೇಕವಾಗಿ ತೆರಳಿದ್ದರು. ಬೊಮ್ಮಾಯಿ ವಿಶೇಷ ವಿಮಾನವನ್ನು ಮಾಡಿಕೊಂಡು ತೆರಳಿದ್ದರು. ವಾಪಸ್ ಬರುವಾಗ ಯಡಿಯೂರಪ್ಪ ಅವರನ್ನು ಜೊತೆಗೆ ಕರೆದುಕೊಂಡು ಬರಬಹುದಿತ್ತು. ಆದರೆ, ಒಬ್ಬರೇ ಬಂದರು. ಇದು ಬೊಮ್ಮಾಯಿ ಮತ್ತು ಯಡಿಯೂರಪ್ಪ ಮಧ್ಯೆ ಅಂತರ ಹೆಚ್ಚಾಗುತ್ತಿರುವುದರ ಸೂಚಕ ಎಂದು ಪಕ್ಷದ ಪ್ರಮುಖರೊಬ್ಬರು ಹೇಳಿದರು.
ಈ ಚರ್ಚೆಯ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ‘ಮುಖ್ಯಮಂತ್ರಿ ಮತ್ತು ಯಡಿಯೂರಪ್ಪ ಮಧ್ಯೆ ಯಾವುದೇ ಅಸಮಾಧಾನವಿಲ್ಲ. ಎಲ್ಲ ಜನ ಸಂಕಲ್ಪ ಯಾತ್ರೆಗಳಿಗೂ ಇಬ್ಬರೂ ಹೋಗಿದ್ದಾರೆ. ನಿನ್ನೆ ಗುಜರಾತ್‌ನಿಂದ ಬೊಮ್ಮಾಯಿ ಬರುವಾಗ ಯಡಿಯೂರಪ್ಪ ಅವರನ್ನೂ ‘ಬನ್ನಿ ಒಟ್ಟಿಗೆ ಹೋಗೋಣ’ ಎಂದು ಕರೆದಿದ್ದರು. ‘ಇನ್ನೂ ಇಬ್ಬರನ್ನು ಭೇಟಿ ಮಾಡಿ ಬರಲಿಕ್ಕೆ ಇದೆ’ ಎಂದು ಯಡಿಯೂರಪ್ಪ ಹೇಳಿದ್ದರಿಂದ ಬೊಮ್ಮಾಯಿ ಒಬ್ಬರೇ ವಾಪಸ್ ಬಂದರು’ ಎಂದು ತಿಳಿಸಿದರು.
‘ಯಡಿಯೂರಪ್ಪ ಅವರು ಈಗ ರಾಷ್ಟ್ರ ಮಟ್ಟದ ನಾಯಕ. ಅವರಿಗೆ ದೊಡ್ಡ ಜವಾಬ್ದಾರಿಗಳು ಇರುತ್ತವೆ. ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ. ಬೊಮ್ಮಾಯಿ ಮತ್ತು ಯಡಿಯೂರಪ್ಪ ಒಟ್ಟಾಗಿಯೇ ಆ ಗುರಿಯನ್ನು ಸಾಧಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.