ಬೆಂಗಳೂರು: ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಕಮಲ ಅರಳಿ ನಿಂತಿದ್ದು, ಕೇಸರಿ ಪಡೆಯ ಅಧಿಕಾರ ಹಿಡಿಯುವ ಕನಸು ಬಿ.ಎಸ್.ಯಡಿಯೂರಪ್ಪ ಮೂಲಕ ನನಸಾಗಿದೆ. ಶುಕ್ರವಾರ ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಯಡಿಯೂರಪ್ಪ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಸಚಿವ ಸಂಪುಟ ರಚನೆಯ ಸವಾಲು ಎದುರಾಗಿದೆ. ಅತೃಪ್ತ ಶಾಸಕರು ಅನರ್ಹಗೊಳ್ಳದಿದ್ದರೆ ಅವರಲ್ಲಿ ಬಹುತೇಕರಿಗೆ ಸಚಿವ ಸ್ಥಾನ ನೀಡಬೇಕಾಗಬಹುದು. ಮೈತ್ರಿ ಪಕ್ಷಗಳಿಂದ ಬಂದ ಹೆಚ್ಚಿನವರಿಗೆ ಸಚಿವ ಸ್ಥಾನ ನೀಡಿದರೆ, ಪಕ್ಷದ ಒಳಗೂ ಅಸಮಾಧಾನ ಸೃಷ್ಟಿಯಾಗುವ ಸಾಧ್ಯತೆಗಳಿವೆ.
ಬಿಜೆಪಿಯಲ್ಲೂ ಸಾಕಷ್ಟು ಹಿರಿಯ ಮುಖಂಡರಿದ್ದು, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಇಲ್ಲದೆ ಇರುವುದರಿಂದ ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಪ್ರಾದೇಶಿಕ ಸಮತೋಲನ ಕಾಪಾಡುವುದು, ಉತ್ತರ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೆಚ್ಚಿನ ಶಾಸಕರಿದ್ದು, ಆ ಭಾಗಕ್ಕೂ ಅವಕಾಶ ನೀಡಬೇಕಿದೆ.
ಜತೆಗೆ ದಕ್ಷಿಣ ಭಾಗದಲ್ಲೂ ಕಾಂಗ್ರೆಸ್– ಜೆಡಿಎಸ್ ಎದುರಿಸಿ, ಪಕ್ಷ ಸಂಘಟಿಸಲು ಸಚಿವ ಸ್ಥಾನ ನೀಡಬೇಕಾಗುತ್ತದೆ. ಉತ್ತರ– ದಕ್ಷಿಣ ಎರಡೂ ಭಾಗಕ್ಕೂ ಸಮತೋಲನ ಕಾಯ್ದುಕೊಳ್ಳಲು ಸಾಕಷ್ಟು ಕಸರತ್ತು ಮಾಡಬೇಕಿದೆ.
ಪ್ರಮಾಣ ವಚನ: ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಧಿಕಾರ ಹಾಗೂ ಗೋಪ್ಯತೆಯ ಪ್ರಮಾಣ ಬೋಧಿಸಿದರು. ಹತ್ತುನಿಮಿಷಗಳಲ್ಲಿ ಕಾರ್ಯಕ್ರಮ ಮುಕ್ತಾಯ ಕಂಡಿತು. ಯಡಿಯೂರಪ್ಪ ಅವರು ಹಸಿರು ಶಾಲು ಹೊದ್ದು, ವೇದಿಕೆಗೆ ಬರುತ್ತಿದ್ದಂತೆಗಾಜಿನ ಮನೆಯಲ್ಲಿ ಕಾರ್ಯಕರ್ತರ ಹರ್ಷೋದ್ಗಾರ, ಜೈಕಾರ ಮುಗಿಲು ಮುಟ್ಟಿತ್ತು. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕಾರ್ಯಕರ್ತರ ಜೋರು ಚಪ್ಪಾಳೆ ಕಿವಿಗಪ್ಪಳಿಸಿತು. ಕೆಲವರು ‘ಅಪ್ಪಾಜಿ’ಗೆ ಜೈ ಎಂದರು. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳು ಮೊಳಗಿದವು.
ಅಧಿಕಾರ: ಕೇಂದ್ರ ನಾಯಕರ ಸೂಚನೆಯ ಹಿನ್ನೆಲೆಯಲ್ಲಿ ಶುಕ್ರವಾರವೇ ಅಧಿಕಾರ ವಹಿಸಿಕೊಳ್ಳಲು ನಿರ್ಧರಿಸಿ ಬೆಳಿಗ್ಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾದರು. ಸಂಜೆ 6.30 ಗಂಟೆಗೆ ಮುಹೂರ್ತ ನಿಗದಿಪಡಿಸಿ, ಪ್ರಮಾಣ ವಚನ ಸ್ವೀಕರಿಸುವುದಾಗಿ ಪ್ರಕಟಿಸಿದರು. ಈ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಬಿ.ಎಲ್.ಸಂತೋಷ್, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್ ಭಾಗವಹಿಸಿದ್ದು, ಕೇಂದ್ರದ ನಾಯಕರು ದೂರವೇ ಉಳಿದರು. ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹಾಜರಿದ್ದರೆ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಕಾರ್ಯಕ್ರಮ ಮುಗಿದ ನಂತರ ಬಂದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸದನಕ್ಕೂ ಗೈರು ಹಾಜರಾಗಿದ್ದ ಕಾಂಗ್ರೆಸ್‌ನ ಆರ್.ರೋಷನ್ ಬೇಗ್ ಇಲ್ಲಿ ಕಾಣಿಸಿಕೊಂಡರು. ಶಾಸಕ ಜಿ.ಪರಮೇಶ್ವರ ವಿರುದ್ಧ ತಿರುಗಿ ಬಿದ್ದಿರುವ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಸಹ ಉಪಸ್ಥಿತರಿದ್ದರು.
ಬಹುಮತದ ಸವಾಲು
ಮೈತ್ರಿ ಸರ್ಕಾರ ಪತನಗೊಳಿಸಿದ ಯಡಿಯೂರಪ್ಪ ಅವರಿಗೆ ಈಗ ಬಹುಮತ ಸಾಬೀತುಪಡಿಸುವ ಸವಾಲು ಎದುರಾಗಿದೆ. ರಾಜೀನಾಮೆ ನೀಡಿರುವ ಮೈತ್ರಿ ಕೂಟದ 13 ಶಾಸಕರು ಮುಂಬೈ ಸೇರಿದ್ದು, ಶ್ರೀಮಂತ ಪಾಟೀಲ ಗೈರು ಹಾಜರಾಗುವ ಸಾಧ್ಯತೆ ಇದ್ದು, ಆಗ ಮೈತ್ರಿ ಬಲ 99ಕ್ಕೆ ಕುಸಿಯುತ್ತದೆ. ಬಿಎಸ್‌ಪಿ ಬೆಂಬಲ ನೀಡಿ, ಕೊನೆಗೆ ಸಭಾಧ್ಯಕ್ಷರು ಮತ ಹಾಕಿದರೂ ಈ ಸಂಖ್ಯೆ 101ಕ್ಕೆ ಏರಿಕೆಯಾಗುತ್ತದೆ.
ಈಗಾಗಲೇ ಪಕ್ಷೇತರ ಶಾಸಕ ಎಚ್.ನಾಗೇಶ್ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಆ ಪಕ್ಷದ ಬಲ 106ಕ್ಕೆ ತಲುಪುತ್ತದೆ.
ವಿಧಾನ ಸಭಾಧ್ಯಕ್ಷರ ಮುಂದಿರುವ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಸೋಮವಾರದ ಒಳಗೆ ಇತ್ಯರ್ಥವಾಗದಿದ್ದರೆ, ಬಿಜೆಪಿಗೆ ಬಹುಮತ ಸಾಬೀತುಪಡಿಸುವುದು ಕಷ್ಟಕರವಾಗಲಾರದು ಎಂದು ಹೇಳಲಾಗುತ್ತಿದೆ.
ಪ್ರತಿ ರೈತನಿಗೂ ₹4 ಸಾವಿರ
‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆಗೆ ಪೂರಕವಾಗಿ ಪ್ರತಿ ರೈತನಿಗೂ ಎರಡು ಕಂತುಗಳಲ್ಲಿ ₹ 4,000 ನೀಡಲಾಗುವುದು ಎಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡರು. ಈ ನಿರ್ಧಾರದಿಂದ ಕೇಂದ್ರದ ₹6,000 ಸೇರಿ ವರ್ಷಕ್ಕೆ ₹10,000 ಸಿಗಲಿದೆ.
ಅಲ್ಲದೆ, 2019 ಫೆಬ್ರುವರಿ 30ರ ವರೆಗೆ ಬಾಕಿ ಉಳಿದಿರುವ ನೇಕಾರರ ₹100 ಕೋಟಿ ಸಾಲ ಮನ್ನಾ ಮಾಡಲು ತೀರ್ಮಾನಿಸಲಾಗಿದೆ ಎಂದರು.
* ದ್ವೇಷದ ರಾಜಕಾರಣ ಮಾಡುವುದಿಲ್ಲ. ದೂಷಿಸಿದವರನ್ನೂ ಪ್ರೀತಿಯಿಂದ ಕಾಣುತ್ತೇನೆ. ನಿಂದಿಸಿದವರನ್ನು ಮರೆತು, ಕ್ಷಮಿಸುತ್ತೇನೆ
- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
* ತರಾತುರಿಯಲ್ಲಿ ರಾಜ್ಯಪಾಲರು ಒಪ್ಪಿರುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಆತುರ ಮಾಡಬಾರದಿತ್ತು
- ಸಿದ್ದರಾಮಯ್ಯ,ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.