ADVERTISEMENT

ಕುಂದಗೋಳ, ಚಿಂಚೋಳಿ: ಉಪ ಚುನಾವಣೆ ಗೆದ್ದರೆ ಸರ್ಕಾರ: ಯಡಿಯೂರಪ್ಪ

ಕಾಂಗ್ರೆಸ್‌ – ಜೆಡಿಎಸ್‌ ಆಂತರಿಕ ಗುದ್ದಾಟ

​ಪ್ರಜಾವಾಣಿ ವಾರ್ತೆ
Published 12 ಮೇ 2019, 20:30 IST
Last Updated 12 ಮೇ 2019, 20:30 IST
ಕುಂದಗೋಳ ತಾಲ್ಲೂಕಿನ ಹಿರೇಹರಕುಣಿಯಲ್ಲಿ ನಡೆದ ರೋಡ್ ಶೋನಲ್ಲಿ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ , ಸಂಸದ ಪ್ರಹ್ಲಾದ ಜೋಶಿ, ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ, ಶಾಸಕ ಬಸವರಾಜ ಬೊಮ್ಮಾಯಿ ಇದ್ದಾರೆ –ಪ್ರಜಾವಾಣಿ ಚಿತ್ರ
ಕುಂದಗೋಳ ತಾಲ್ಲೂಕಿನ ಹಿರೇಹರಕುಣಿಯಲ್ಲಿ ನಡೆದ ರೋಡ್ ಶೋನಲ್ಲಿ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ , ಸಂಸದ ಪ್ರಹ್ಲಾದ ಜೋಶಿ, ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ, ಶಾಸಕ ಬಸವರಾಜ ಬೊಮ್ಮಾಯಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಉಪ ಚುನಾವಣೆ ನಡೆಯುತ್ತಿರುವ ಕುಂದಗೋಳ ಕ್ಷೇತ್ರದಲ್ಲಿ ಪ್ರಚಾರದ ಕಾವು ದಿನೇ ದಿನೇ ಏರುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವು ಮುಖಂಡರ ದಂಡು ಭಾನುವಾರ ಕ್ಷೇತ್ರದಲ್ಲಿ ಪ್ರಚಾರ ನಡೆಸಿತು.

ಬಿಜೆಪಿ ಪರವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ಶಾಸಕರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಿದರು. ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಿದರು.

‘ಶಿವಕುಮಾರ್ ಅವರು ಬಿಜೆಪಿ ಮುಖಂಡರು– ಕಾರ್ಯಕರ್ತರನ್ನು ಸೆಳೆಯುತ್ತಿದ್ದಾರೆ’ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಕ್ಷೇತ್ರದ ಕೂಬಿಹಾಳ ತಾಲ್ಲೂಕು ಪಂಚಾಯ್ತಿ ಕಾಂಗ್ರೆಸ್ ಸದಸ್ಯ ಈಶ್ವರಪ್ಪ ಯಲಿವಾಳ ಹಾಗೂ ದ್ಯಾವನೂರು ಗ್ರಾಮ ಪಂಚಾಯ್ತಿಯ ಕೆಲ ಸದಸ್ಯರು ಯಡಿಯೂರಪ್ಪ ಸಮ್ಮುಖದಲ್ಲಿ ಗುರುವಾರ ಬಿಜೆಪಿ ಸೇರಿದರು.

ADVERTISEMENT

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ಕುಂದಗೋಳ ಹಾಗೂ ಚಿಂಚೋಳಿಯಲ್ಲಿ ಬಿಜೆಪಿ ಗೆದ್ದರೆ, ರಾಜ್ಯದಲ್ಲಿ ನಾವೇ ಸರ್ಕಾರ ರಚನೆ ಮಾಡುತ್ತೇವೆ’ ಎಂದರು.

‘ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಅವರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ನಾವು ಹೊಣೆಯಲ್ಲ’ ಎಂದರು.

‘ಡಿಕೆಶಿ ಪೇಪರ್ ಟೈಗರ್’:‘ಸಚಿವ ಡಿ.ಕೆ. ಶಿವಕುಮಾರ್ ಪೇಪರ್ ಟೈಗರ್. ಮಾಧ್ಯಮದವರು ಸುಮ್ಮನೆ ಅವರನ್ನು ಹೀರೊ ಮಾಡುತ್ತಿದ್ದಾರೆ. ಕನಕಪುರದ ಅಕ್ಕಪಕ್ಕ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಾಗದ ಅವರು, ಇಲ್ಲಿ ಯಾರನ್ನು ತಾನೇ ಗೆಲ್ಲಿಸಲು ಸಾಧ್ಯ’ ಎಂದು ಶಾಸಕ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

‘ಭ್ರಷ್ಟಾಚಾರಿ ಬಿಜೆಪಿ’:’ಬಿಜೆಪಿ ಎಂದರೆ ಭ್ರಷ್ಟಾಚಾರಿಗಳ ಜನತಾ ಪಕ್ಷ. ಅಲ್ಲಿರುವವರೆಲ್ಲರೂ ಭ್ರಷ್ಟಾಚಾರಿಗಳೇ. ರಾಜ್ಯದ ಮೈತ್ರಿ ಸರ್ಕಾರ ಬೀಳಿಸಲು ಷಡ್ಯಂತ್ರ ನಡೆಸಿದ್ದ ಧ್ವನಿಮುದ್ರಿಕೆ ಬಹಿರಂಗವಾಗಿತ್ತು. ಅಂತಹವರು ಭ್ರಷ್ಟಾಚಾರ ವಿರುದ್ಧ ಮಾತನಾಡಿದರೆ ಅದನ್ನು ಯಾರೂ ನಂಬುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿಯ 10 ಮಂದಿ ಸಂಪರ್ಕದಲ್ಲಿದ್ದಾರೆ: ‘ಮೂರು ತಿಂಗಳಿಂದ ಬಿಜೆಪಿಯ 9ರಿಂದ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಅವರನ್ನು ಕಾಂಗ್ರೆಸ್‌ಗೆ ಕರೆತರಲು ನಮಗೇ ಇಷ್ಟವಿಲ್ಲ. ಹೀಗಿರುವಾಗ ನಮ್ಮ ಸರ್ಕಾರ 23ರ ಬಳಿಕ ಹೇಗೆ ಬೀಳುತ್ತದೆ’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪ್ರಶ್ನಿಸಿದರು.

***

‘ಬಿಜೆಪಿಯವರು ಅವರೊಂದಿಗೆ ಸಂಪರ್ಕದಲ್ಲಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 22 ಶಾಸಕರ ಹೆಸರು ಬಹಿರಂಗಪಡಿಸಲಿ. ಬಳಿಕ, ನಾವು ಹೇಳುತ್ತೇವೆ
- ಜಮೀರ್ ಅಹ್ಮದ್ ಖಾನ್, ಆಹಾರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.