ಬೆಂಗಳೂರು/ಬಾಗಲಕೋಟೆ: ‘ಆಪರೇಷನ್ ಕಮಲ’ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತಿನ ಜಟಾಪಟಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಯಡಿಯೂರಪ್ಪ, ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದು ಎಲುಬಿಲ್ಲದ ನಾಲಿಗೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರು 36 ಸಾವಿರ ಮತಗಳ ಅಂತರದಿಂದ ಸೋಲಿಸಿ ಪಾಠ ಕಲಿಸಿದ್ದಾರೆ. ಆದರೂ, ಅವರಿಗೆ ಬುದ್ಧಿ ಬಂದಿಲ್ಲ’ ಎಂದು ವ್ಯಂಗ್ಯವಾಡಿದರು.
‘ಸರ್ಕಾರದಲ್ಲಿ ಉಂಟಾಗಿರುವ ಎಲ್ಲ ಗೊಂದಲಗಳಿಗೆ ಸಿದ್ದರಾಮಯ್ಯ ಕಾರಣ. ಅವರೇ ಸೂತ್ರಧಾರ. ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ಒಣಪೌರುಷದ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಲೋಕಸಭಾ ಚುನಾವಣಾ ಸಿದ್ಧತೆ ಬಗ್ಗೆ ಚರ್ಚಿಸಲು ನಮ್ಮ ಶಾಸಕರನ್ನು ಒಂದೆಡೆಗೆ ಕರೆಸಿಕೊಳ್ಳಲಾಗಿತ್ತು. ನಮ್ಮ ಶಾಸಕರನ್ನು ಅಲ್ಲಿಗೆ ಕರೆದುಕೊಂಡು ಹೋದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರಿಗೆ ಏನು ಸಮಸ್ಯೆ ಎಂದರು.
‘ಮಲ್ಲೇಶ್ವರ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮುಂಬೈಗೆ ಹೋದರೆ ಕಾಂಗ್ರೆಸ್‌ನವರಿಗೇನು ಸಮಸ್ಯೆ’ ಎಂದೂ ಕೇಳಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ದೇವೇಗೌಡರು ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದವರು. ಈಗ ಪ್ರಜಾಪ್ರಭುತ್ವ, ತತ್ವ ಸಿದ್ಧಾಂತ, ಸಂವಿಧಾನದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ’ ಎಂದರು.
ಬಿಎಸ್‌ವೈಗೆ ಮಾನ ಮರ್ಯಾದೆ ಇಲ್ಲ: ಕೆರೂರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಬಿಜೆಪಿ ತಿಪ್ಪರಲಾಗ ಹಾಕಿದ್ರೂ ಯಡಿಯೂರಪ್ಪ ಮತ್ತೆ ಸಿ.ಎಂ ಆಗೋ ಕನಸು ನನಸಾಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.
‘ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂದು ಮಾನ, ಮರ್ಯಾದೆ ಬಿಟ್ಟು ಮೂರನೇ ಬಾರಿ ಆಪರೇಷನ್ ಕಮಲ ಮಾಡಿ ವಿಫಲರಾಗುತ್ತಿದ್ದಾರೆ’ ಎಂದು ಕಿಚಾಯಿಸಿದರು.
ರಾಜ್ಯ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಆಗಲು ಸಿದ್ದರಾಮಯ್ಯ ಕಾರಣ ಎಂದ ಸಂಸದ ಪ್ರಹ್ಲಾದ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಸಂಸದ ಪ್ರಹ್ಲಾದ ಜೋಶಿ ಕಿಮ್ಮತ್ತಿಲ್ಲದೆ ಇರುವ ರಾಜಕಾರಣಿ. ಬಿಜೆಪಿಯವರಿಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಸುಳ್ಳು ಹೇಳುವುದೇ ಅವರ ಕಸುಬಾಗಿದೆ’ ಎಂದು ಅವರು ತಿಳಿಸಿದರು. ಶುಕ್ರವಾರ ನಡೆಯುವ ಸಿ.ಎಲ್.ಪಿ ಸಭೆಯಲ್ಲಿ ಭಾಗವಹಿಸದ ಶಾಸಕರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಿರಿ ಎಂಬ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ‘ನಿಮಗೇಕೆ ಬೇಕ್ರಿ ಅದು, ನಿಮ್ಮನ್ನ ಕೇಳಬೇಕಾ, ಅದು ಪಕ್ಷಕ್ಕೆ ಸಂಬಂಧಿಸಿದ್ದು’ ಎಂದು ಹೇಳಿದರು.
‘ಶಾಸಕ ರಮೇಶ ಜಾರಕಿಹೊಳಿ ಬೆಳಗಾವಿಯಲ್ಲಿ ಇದ್ದರೆ ಮಾತನಾಡಿಸುತ್ತೇನೆ, ಅವರು ಎಲ್ಲಿದ್ದಾರೆ ಎಂಬ ಮಾಹಿತಿಯಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಗೆ ‘ಸಂ’ಭ್ರಾಂತಿ: ಎಚ್‌ಡಿಕೆ ವ್ಯಂಗ್ಯ
‘ಬಿಜೆಪಿ ನಾಯಕರು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಅಂತಾ ನಾನಂತೂ ಹೇಳಿಲ್ಲ’ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಗುರುವಾರ ಮಾತನಾಡಿದ ಅವರು, ‘ಮಾಧ್ಯಮದಲ್ಲಿ ಬಂದಿರುವ ವರದಿ ಆಧರಿಸಿ ಹೇಳುತ್ತಿದ್ದೇನೆ. ರಾಜ್ಯದಲ್ಲಿ ಸಂಕ್ರಾಂತಿ ಮಾಡಲು ಹೋಗಿ ಸಂಭ್ರಾಂತಿ ಮಾಡಿಕೊಂಡಿದ್ದಾರೆ ಎಂಬುದು ನನ್ನ ಅಭಿಪ್ರಾಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.