ಬೆಂಗಳೂರು: ‘ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದ್ದು, ಹಿಂದಿನ 14 ತಿಂಗಳ ಸರ್ಕಾರಕ್ಕೂ ನಮ್ಮ ನೂತನ ಸರ್ಕಾರಕ್ಕೂ ಇರುವವ್ಯತ್ಯಾಸವನ್ನು ನಾಲ್ಕೇ ತಿಂಗಳಲ್ಲಿ ಮಾಡಿ ತೋರಿಸುತ್ತೇನೆ’ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಹದಗೆಟ್ಟಿರುವ ಆಡಳಿತ ಯಂತ್ರವನ್ನು ಸರಿಪಡಿಸುವ ಮೂಲಕ, ಆಡಳಿತ ಮತ್ತು ಅಭಿವೃದ್ಧಿಯನ್ನು ಇನ್ನಷ್ಟು ಉತ್ತಮ ಸ್ಥಿತಿಗೆ ಒಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.
‘ಎಂದಿಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ನನ್ನ ಬಗ್ಗೆ ಸಾಕಷ್ಟು ಜನ ಟೀಕೆ –ಟಿಪ್ಪಣಿಗಳನ್ನು ಮಾಡಿದ್ದಾರೆ. ಅವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ. ಮುಂದೆಯೂ ಸಹ ನನ್ನನ್ನು ದೂಷಿಸುವವರನ್ನು ಪ್ರೀತಿಯಿಂದಲೇ ಕಾಣುತ್ತೇನೆ ಎಂಬುದಾಗಿ ಜನತೆ ಮತ್ತು ವಿರೋಧ ಪಕ್ಷಗಳಿಗೆ ಭರವಸೆ ನೀಡುತ್ತೇನೆ’ ಎಂದು ಯಡಿಯೂರಪ್ಪ ಹೇಳಿದರು.
‘ರೈತರು ಮತ್ತು ನೇಕಾರರು ಈ ಸರ್ಕಾರದ ಎರಡು ಕಣ್ಣುಗಳು. ರೈತರ ಸಮಸ್ಯೆಗಳು ಮತ್ತು ಬರಗಾಲದಿಂದ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತೇನೆ. ನೇಕಾರರು, ಮೀನುಗಾರರು, ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಆದ್ಯತೆಯಾಗಿ ಪರಿಗಣಿಸುತ್ತೇನೆ’ ಎಂದು ವಿವರಿಸಿದರು.
ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ಮಾಹಿತಿ ತರಿಸಿಕೊಂಡು ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಬಹುಮತ ಸಾಬೀತಾದ ಬಳಿಕ ಅಗತ್ಯ ಎನಿಸಿದರೆ, ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಶಾಸಕರಾದ ಜಗದೀಶ ಶೆಟ್ಟರ್, ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ,
ಎಸ್.ಅರ್.ವಿಶ್ವನಾಥ್ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.