ADVERTISEMENT

ಅನುಭವ ಮಂಟಪ: ಸಂಧಾನದ ಮೂಲಕ ಭೂಸ್ವಾಧೀನಕ್ಕೆ ಮುಖ್ಯಮಂತ್ರಿ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 11:44 IST
Last Updated 12 ಜುಲೈ 2021, 11:44 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ₹50 ಕೋಟಿ ವೆಚ್ಚದಲ್ಲಿ 101 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ‘ಅನುಭವ ಮಂಟಪ’ ಯೋಜನೆಗೆ ಅಗತ್ಯ ಇರುವ ಭೂಮಿಯನ್ನು ಪರಸ್ಪರ ಸಂಧಾನದ ಮೂಲಕ ರೈತರ ಸಮ್ಮತಿ ಪಡೆದು ಸ್ವಾಧೀನಪಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಲಹೆ ನೀಡಿದರು.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆ ಸೋಮವಾರ ನಡೆಯಿತು. ರೈತರ ಒಪ್ಪಿಗೆ ಪಡೆದು ಭೂಸ್ವಾಧೀನಪಡಿಸಿಕೊಳ್ಳವ ಸಂಬಂಧ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದಲ್ಲಿ ಸಭೆ ಆಯೋಜಿಸಲು ತೀರ್ಮಾನಿಸಲಾಯಿತು.

‘ಅನುಭವ ಮಂಟಪ’ ಯೋಜನೆಗೆ ₹ 200 ಕೋಟಿ ಈಗಾಗಲೇ ಹಂಚಿಕೆ ಮಾಡಲಾಗಿದೆ. ಸದ್ಯ 11.25 ಎಕರೆ ಉಚಿತವಾಗಿ ಲಭ್ಯವಿದ್ದು, 69 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಈ ಭೂಮಿಯ ಮಾಲೀಕರು ಮಾರುಕಟ್ಟೆ ದರದಲ್ಲಿ ಪರಿಹಾರ ಕೇಳುತ್ತಿದ್ದಾರೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆಗೆ ತೊಂದರೆಯಾಗಿದೆ. ಲಭ್ಯ ಭೂಮಿಯಲ್ಲಿ ಮಣ್ಣಿನ ಪರೀಕ್ಷೆ ಮತ್ತು ಇತರ ಕಾಮಗಾರಿಗಳು ನಡೆದಿವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಭೂಸ್ವಾಧೀನ ಪ್ರಕ್ರಿಯೆಯ ಜೊತೆಗೆ ಡಿಪಿಆರ್ ಹಾಗೂ ಇತರ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ 2021-22ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಈ ವರ್ಷದ ಬಜೆಟ್‌ನಲ್ಲಿ ಲಭ್ಯವಿರುವ ₹ 10 ಕೋಟಿಯನ್ನೂ ಸೇರಿಸಿ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.

ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ 134 ಕಾಮಗಾರಿಗಳ ಪೈಕಿ ಈ ವರೆಗೆ 76 ಕಾಮಗಾರಿಗಳು ಪೂರ್ಣಗೊಂಡಿದ್ದು, 58 ಕಾಮಗಾರಿಗಳು ಬಾಕಿ ಇವೆ’ ಎಂದೂ ಅಧಿಕಾರಿಗಳು ತಿಳಿಸಿದರು.

ಮಂಡಳಿಯ ಸಭೆಗೆ ಇನ್ನು ಮುಂದೆ ಬೀದರ್ ಜಿಲ್ಲೆಯ ಶಾಸಕರನ್ನು ಆಹ್ವಾನಿಸುವಂತೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ನೀಡಿದ ಸಲಹೆಗೆ ಮುಖ್ಯಮಂತ್ರಿ ಸಮ್ಮತಿಸಿದರು.

ಕಾಗಿನೆಲೆ ಪ್ರಾಧಿಕಾರದ ಸಭೆ:
ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹14 ಕೋಟಿ ವೆಚ್ಚ ಮಾಡಲು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆ ಅನುಮೋದನೆ ನೀಡಿತು. ಕಾಗಿನೆಲೆಯಲ್ಲಿ ನಿರ್ಮಾಣ ಪೂರ್ಣಗೊಳಿಸಿರುವ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಶೀಘ್ರ ಉದ್ಘಾಟಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ರಾಯಣ್ಣ ಪ್ರಾಧಿಕಾರ:
ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ 2021-22ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಅಲ್ಲದೆ, ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳಗೆ ಸಂಬಂಧಿಸಿದ ಬಾಕಿ ಇರುವ ಬಿಲ್‌ಗಳ ₹ 22 ಕೋಟಿ ವೆಚ್ಚ ಪಾವತಿಗೆ ಅನುಮೋದನೆ ನೀಡಲಾಯಿತು.

₹279 ಕೋಟಿ ವೆಚ್ಚದ ಕ್ರಿಯಾ ಯೋಜನೆಯನ್ನು ಪ್ರಾಧಿಕಾರ ಈ ಹಿಂದೆಯೇ ರೂಪಿಸಿದ್ದು, 2017ರಿಂದ ಈವರೆಗೆ ₹ 159 ಕೋಟಿ ವೆಚ್ಚ ಮಾಡಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಪ್ರಾಧಿಕಾರಕ್ಕೆ ₹ 62 ಕೋಟಿ ಒದಗಿಸಲಾಗಿದೆ.

ರಾಯಣ್ಣನ ಜನಸ್ಥಳದಲ್ಲಿ ಸೈನಿಕ ಶಾಲೆಯ ಕಾಮಗಾರಿ ಪೂರ್ಣಗೊಂಡಿದ್ದು, ಕೇಂದ್ರ ರಕ್ಷಣಾ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಶಾಲೆಯ ಆರಂಭಿಸಬೇಕು. ಅನುಮೋದನೆ ಮತ್ತು ಹುದ್ದೆಗಳ ಮುಂಜೂರಾತಿ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಚರ್ಚಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ನಂದಘಡದಲ್ಲಿ ಅಂತರರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯ ಮತ್ತು ರಾಕ್ ಗಾರ್ಡನ್ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಈ ವರ್ಷವೇ ಅವುಗಳನ್ನು ಪೂರ್ಣಗೊಳಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕಳೆದ ವಾರ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರು ಪ್ರಾಧಿಕಾರ ಹಾಗೂ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ಜರುಗಿದ್ದವು. ಮುಂದುವರಿಕೆಯಾಗಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.