ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದೇ 27 ರಂದು (ಗುರುವಾರ) 77 ವರ್ಷ ಪೂರ್ಣಗೊಂಡು 78ಕ್ಕೆ ಕಾಲಿಡುತ್ತಿದ್ದಾರೆ.
ಇದೇ ಸಂಭ್ರಮದಲ್ಲಿ ಟ್ವೀಟ್ ಮಾಡಿರುವ ಅವರು, ‘ನಾಡಿನ ಸಮಸ್ತ ಜನತೆ, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಬಂಧುಗಳಲ್ಲಿ ವಿನಯಪೂರ್ವಕ ಮನವಿ.
ಎಲ್ಲರ ಹಾರೈಕೆ, ಹರಕೆ ಹಾಗೂ ಆರ್ಶೀವಾದಗಳಿಂದಲೇ ನಿಮ್ಮಲ್ಲರ ಸೇವೆ ಮಾಡುವ ಸ್ಥಾನದ ಸೌಭಾಗ್ಯವನ್ನು ಪಡೆದಿದ್ದೇನೆ. ನನ್ನ ಜೀವನದ ಎಲ್ಲ ಘಟ್ಟಗಳಲ್ಲೂ ನಿಮ್ಮೆಲ್ಲರ ಪ್ರೀತಿಯ ಮಹಾಪೂರದಲ್ಲಿ ಮಿಂದು ಪುನೀತನಾಗಿದ್ದೇನೆ, ವಿನೀತನಾಗಿದ್ದೇನೆ.
ನಾಳಿನ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಫಲಪುಷ್ಪ, ಪೇಟ, ಶಾಲು, ಹಾರ, ತುರಾಯಿ, ಸಿಹಿತಿಂಡಿ ಹಾಗೂ ನೆನಪಿನ ಕಾಣಿಕೆಗಳನ್ನು ತರಬಾರದೆಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ‘ ಎಂದು ಹೇಳಿದ್ದಾರೆ.
ಅಭಿನಂದನಾ ಸಮಾರಂಭ
ಯಡಿಯೂರಪ್ಪ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಆವರಣದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರ ಕುರಿತಾದ ‘ದಣಿವರಿಯದ ಧೀಮಂತ’ ಅಭಿನಂದನಾ ಗ್ರಂಥ, ‘ಎ ಲೀಡರ್ ಹು ಸಾ ಟುಮಾರೋ’ ಹೆಸರಿನ ಚಿತ್ರ ಕೈಪಿಡಿ ಮತ್ತು ‘ಅಪ್ರತಿಮ’ ಎಂಬ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ.
ಗಣ್ಯರಿಗೆ ಆಹ್ವಾನ
ಕಾರ್ಯಕ್ರಮವನ್ನು ಕೇಂದ್ರದ ರಕ್ಷಣಾ ಸಚಿವ ರಾಜನಾಥಸಿಂಗ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದಾರೆ. ಕವಿ ಡಾ.ಸಿದ್ದಲಿಂಗಯ್ಯಅಭಿನಂದನಾ ಭಾಷಣ ಮಾಡಲಿದ್ದಾರೆ.ಅರಮನೆ ಆವರಣದ ವೈಟ್ ಪೆಟಲ್ಸ್‌ನಲ್ಲಿ ಸಂಜೆ 5 ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.