ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐ.ಟಿ) ಕಾರಿಡಾರ್ ನಿರ್ಮಾಣಕ್ಕಾಗಿ ನಗರದ ಬೆಳ್ಳಂದೂರು ಮತ್ತು ದೇವರ
ಬೀಸನಹಳ್ಳಿ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿದ್ದ 15 ಎಕರೆ 30 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ.
ವಾಸುದೇವ ರೆಡ್ಡಿ ಎಂಬುವವರು 2013 ರಲ್ಲಿ ಸಲ್ಲಿಸಿದ್ದ ಖಾಸಗಿ ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಎರಡನೇ ‘ಬಿ’ ವರದಿಯನ್ನು ವಿಶೇಷ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ. ಜತೆಯಲ್ಲೇ ಯಡಿಯೂರಪ್ಪ ವಿರುದ್ಧ ವಿಚಾರಣೆ ಆರಂಭಿಸುವ ತೀರ್ಮಾನವನ್ನೂ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಪ್ರಕಟಿಸಿ
ದ್ದಾರೆ. ಡಿಸೆಂಬರ್ 1ಕ್ಕೆ ದೂರುದಾರರ ಪ್ರಮಾಣಿತ ಹೇಳಿಕೆ ದಾಖಲು ಮತ್ತು ಸಮನ್ಸ್ ಜಾರಿಗಾಗಿ ಮುಂದಿನ ವಿಚಾರಣೆ ನಿಗದಿಯಾಗಿದೆ.
ಐ.ಟಿ ಕಾರಿಡಾರ್ ನಿರ್ಮಾಣಕ್ಕಾಗಿ ಬೆಳ್ಳಂದೂರು, ದೇವರಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ ಮತ್ತು ಅಮಾನಿ ಬೆಳ್ಳಂದೂರು ಖಾನೆ ಗ್ರಾಮಗಳಲ್ಲಿ 434 ಎಕರೆ ಜಮೀನು ಸ್ವಾಧೀನಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) 2001 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.
ಅದರಲ್ಲಿ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳ 15 ಎಕರೆ 30 ಗುಂಟೆ ಜಮೀನನ್ನು ಆಗಿನ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶದಂತೆ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು 2006 ರ ಜೂನ್ 21ರಂದು ಆದೇಶ ಹೊರಡಿಸಲಾಗಿತ್ತು.
ಕೆಐಎಡಿಬಿ ಅಧಿಕಾರಿಗಳ ವಿರೋಧದ ನಡುವೆಯೂ ಈ ಜಮೀನನ್ನು ಕಾನೂನುಬಾಹಿರವಾಗಿ ಡಿನೋಟಿಫಿಕೇಷನ್ ಮಾಡುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಹಿಂದಿನ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹತ್ತು ಮಂದಿಯ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. ದೇಶಪಾಂಡೆ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿ ಹೈಕೋರ್ಟ್ 2015ರಲ್ಲಿ ಆದೇಶ ಹೊರಡಿಸಿತ್ತು. ಉಳಿದ ಎಂಟು ಆರೋಪಿಗಳ ವಿರುದ್ಧದ ದೂರನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದ್ದು, ಅದನ್ನು ಹೈಕೋರ್ಟ್ 2017 ರಲ್ಲಿ ಮಾನ್ಯ ಮಾಡಿತ್ತು.
ಯಡಿಯೂರಪ್ಪ ಕೂಡ ತಮ್ಮ ವಿರುದ್ಧದ ದೂರನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2020ರ ಡಿಸೆಂಬರ್ 22ರಂದು ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್, ‘ಯಡಿಯೂರಪ್ಪ ವಿರುದ್ಧದ ಆರೋಪಗಳಲ್ಲಿ ಹುರುಳಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ’ ಎಂದು ಹೇಳಿತ್ತು. ನಾಲ್ಕು ವರ್ಷಗಳಾದರೂ ತನಿಖೆ ಪೂರ್ಣಗೊಳಿಸದ ಲೋಕಾಯುಕ್ತ ಪೊಲೀಸರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.
ಎರಡು ಬಾರಿ ‘ಬಿ’ ವರದಿ: ಯಡಿಯೂರಪ್ಪ ವಿರುದ್ಧದ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳಿಲ್ಲದ ಕಾರಣದಿಂದ ವಿಚಾರಣೆಯನ್ನು ಕೈಬಿಡುವಂತೆ ಶಿಫಾರಸು ಮಾಡಿ ಲೋಕಾಯುಕ್ತ ಡಿವೈಎಸ್‌ಪಿ ಎಂ.ಜಿ. ಶಂಕರನಾರಾಯಣ 2021ರ ಜನವರಿ 18ರಂದು ಅಂತಿಮ (ಬಿ) ವರದಿ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ದೂರುದಾರರ ಪರ ವಕೀಲ ಕೆ.ವಿ. ಧನಂಜಯ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿ ಬಳಿಕ ‘ಬಿ’ ವರದಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಮರು ತನಿಖೆ ನಡೆಸುವಂತೆ ಜುಲೈ 21ರಂದು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು. ಆಗಸ್ಟ್ 21ರಂದು ಎರಡನೇ ಬಾರಿಗೆ ಡಿವೈಎಸ್‌ಪಿ ಶಂಕರನಾರಾಯಣ ‘ಬಿ’ ವರದಿ ಸಲ್ಲಿಸಿದ್ದರು. ಅದನ್ನೂ ಪ್ರಶ್ನಿಸಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದ ದೂರುದಾರರ ಪರ ವಕೀಲರು, ‘ಲೋಕಾಯುಕ್ತ ಪೊಲೀಸರು ಸರಿಯಾಗಿ ತನಿಖೆ ನಡೆಸದೇ ವರದಿ ನೀಡಿದ್ದಾರೆ. ಅದನ್ನು ತಿರಸ್ಕರಿಸಿ, ನ್ಯಾಯಾಲಯ ನೇರವಾಗಿ ವಿಚಾರಣೆ ಆರಂಭಿಸಬೇಕು’ ಎಂದು ಮನವಿ ಮಾಡಿದ್ದರು.
‘ಈ ಪ್ರಕರಣದಲ್ಲಿ ಉಲ್ಲೇಖಿಸಿರುವ ಡಿನೋಟಿಫಿಕೇಷನ್ ಕಾನೂನುಬಾಹಿರವಾಗಿ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಎರಡನೇ ಆರೋಪಿಯಾದ ಬಿ.ಎಸ್. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 13(1) (ಡಿ) ಮತ್ತು 13(2)ರ ವ್ಯಾಪ್ತಿಗೆ ಬರುವ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ಆರಂಭಿಸಲು ತನಿಖಾಧಿ
ಕಾರಿಯ ವರದಿಯಲ್ಲೇ ಸಾಕಷ್ಟು ಸಾಕ್ಷ್ಯಗಳಿವೆ’ ಎಂದು ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಮುಂದಿನ ಪ್ರಕ್ರಿಯೆ ಏನು?
ಡಿಸೆಂಬರ್ 1ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೂರುದಾರ ವಾಸುದೇವ ರೆಡ್ಡಿ ಅವರ ಪ್ರಮಾಣಿತ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ. ಆ ಬಳಿಕ ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಲಿದೆ.
‘2013 ರಲ್ಲಿ ಹತ್ತು ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು. ಈಗ ಯಡಿಯೂರಪ್ಪ ವಿರುದ್ಧ ಮಾತ್ರ ವಿಚಾರಣೆ ನಡೆಯಲಿದೆ. ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ ಬಳಿಕ ಯಡಿಯೂರಪ್ಪ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಬೇಕಾಗುತ್ತದೆ’ ಎನ್ನುತ್ತಾರೆ ಕಾನೂನು ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.