ಶಿವಮೊಗ್ಗ: ಯಾವುದೇ ವ್ಯಕ್ತಿ ಅಧಿಕಾರಕ್ಕೆ ಏರಲು ಪಕ್ಷವೇ ಕಾರಣ. ಪಕ್ಷ ತೊರೆದು ಹೋದ ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಎಷ್ಟು ಸ್ಥಾನ ಗೆದ್ದರು? ಮೂರು ಮತ್ತೊಂದು ಸ್ಥಾನ ಅಷ್ಟೆ. ಸಂಘಟನೆ ತೊರೆದವರು ಉದ್ಧಾರವಾಗಲಿಲ್ಲಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದರು.
ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಸ್ಥಾನಮಾನ ಶಾಶ್ವತವಲ್ಲ. ಅಧಿಕಾರದ ಗದ್ದುಗೆ ಏರಲು ಪಕ್ಷಬೇಕು. ಅಧಿಕಾರದಲ್ಲಿ ಇದ್ದಾಗ ಪಕ್ಷದ ಜತೆ ಅವರು ಹೊಂದಿರುವ ಸಂಬಂಧವೂ ಮುಖ್ಯ. ಸಂಘಟನೆ ಮೀರಿ ಹೋದವರು ಉದ್ದಾರವಾಗಲು ಸಾಧ್ಯವಿಲ್ಲ. ಪಕ್ಷ ಬೆಳೆದರೆ ಎಲ್ಲರೂ ಬೆಳೆಯುತ್ತೇವೆ. ಇದು ತಮಗೂ ಸೇರಿದಂತೆ ಕುಮರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಗೂ ಅನ್ವಯಿಸುತ್ತದೆ. ಅಧಿಕಾರದಲ್ಲಿ ಇದ್ದಾಗ ಪಕ್ಷ ದ್ರೋಹಿಗಳನ್ನು ಬೆಂಬಲಿಸಬಾರದು. ನಿಷ್ಠರಿಗೆ ಮನ್ನಣೆ ನೀಡಬೇಕು. ಏನುಬೇಕಾದರೂ ಮಾಡಬಹುದು ಎಂದು ಕುತಂತ್ರ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಸಿದ್ದರಾಮಯ್ಯ ಉದಾಹರಣೆ. ಅವರು ಕೆಳಗೆ ಬಿದಿದ್ದಾರೆ ಎಂದು ಕಲ್ಲು ಹೊಡೆಯುವುದಿಲ್ಲ ಎಂದು ಛೇಡಿಸಿದರು.
ಸೋಲಿಗೆ ರಮೇಶ್ ಕುಮಾರ್ ಕಾರಣ ಎಂದು ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಪಕ್ಕದಲ್ಲೇ ರಮೇಶ್ ಕುಮಾರ್ ಕೂರಿಸಿಕೊಂಡು ಸಭೆ ನಡೆಸುತ್ತಾರೆ. ಸಿದ್ದರಾಮಯ್ಯ ಅವರಿಗೆ ಇದೆಲ್ಲ ಪಕ್ಷ ದ್ರೋಹ ಚಟುವಟಿಕೆ ಎನಿಸುವುದಿಲ್ಲ. ಇದು ಸಿದ್ದರಾಮಯ ಪಕ್ಷ ಮೀರಿ ಬೆಳೆಯುವ ದುಸ್ಸಾಹಸ ಎಂದು ಬಣ್ಣಿಸಿದರು.
ತಮಗೆ ವಹಿಸಿರುವ ಹೆಚ್ಚುವರಿ ಹೊಣೆಗಾರಿಕೆ ವಹಿಸಿಕೊಳ್ಳುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಪ್ರತಿಕ್ರಿಯಿಸಿದರು. ಶರಾವತಿ ಭೂಗರ್ಭ ವಿದ್ಯುತ್ ಸ್ಥಾವರ ಕುರಿತು ಕೇಳಿದ ಪ್ರಶ್ನೆಗೆ, ಕಾಡು ಉಳಿಯಬೇಕು. ಬೆಳಕು ನೀಡಬೇಕು. ತಜ್ಞರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.