ADVERTISEMENT

ನೀರಾವರಿ ಅಕ್ರಮದ ವಿಶ್ವನಾಥ್‌ ಆರೋಪಕ್ಕೆ ಸಿಎಂ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 10:40 IST
Last Updated 18 ಜೂನ್ 2021, 10:40 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ನೀರಾವರಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ ತರಾತುರಿಯಲ್ಲಿ ಟೆಂಡರ್‌ ಕರೆದು ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಆರೋಪಿಸಿದ್ದರು.

ಈ ಸಂಬಂಧ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದ್ದ ಅವರು, ‘ಭದ್ರಾ ಮೇಲ್ದಂಡೆ ಮತ್ತು ಕಾವೇರಿ ನೀರಾವರಿ ನಿಗಮದಲ್ಲಿ ಅಕ್ರಮ ನಡೆದಿದೆ. ಸುಮಾರು ₹20 ಸಾವಿರ ಕೋಟಿ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ. ಗುತ್ತಿಗೆದಾರರಿಂದ ಹಣ ಪಡೆಯಲಾಗಿದೆ’ ಎಂದು ಅವರು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಎಚ್‌.ವಿಶ್ವನಾಥ್‌ ಅವರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಈ ಬಗ್ಗೆ ನೀರಾವರಿ ಇಲಾಖೆಯ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.

ವಿಶ್ವನಾಥ್‌ ಅವರ ಬಗ್ಗೆ ಏನೂ ಮಾತನಾಡಲು ಬಯಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.

ADVERTISEMENT

ಅಶ್ವತ್ಥ ನಾರಾಯಣ ತಿರುಗೇಟು: ಭದ್ರಾ ಮೇಲ್ದಂಡೆ ಯೋಜನೆ ಟೆಂಡರ್‌ನಲ್ಲಿ ಭ್ರಷ್ಟಾಚಾರ, ಅಕ್ರಮವಾಗಿರುವ ದಾಖಲೆಗಳಿದ್ದರೆ ಪಕ್ಷದ ರಾಜ್ಯಾಧ್ಯಕ್ಷರ ಮುಂದಿಡಲಿ ಇಲ್ಲವೇ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷ ಮತ್ತು ಸರ್ಕಾರಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡಬಾರದು ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಚ್ಚರಿಕೆ ನೀಡಿದ್ದರೂ ಕೆಲವರಿಗೆ ಬಾಯಿ ಚಪಲ. ಅವರು ಮಾತನಾಡುವುದನ್ನು ತಡೆಯಲಾಗದು ಎಂದರು.

ವಿಶ್ವನಾಥ್ ಅವರು ಗುರುವಾರ ನೀಡಿದ ಹೇಳಿಕೆ ಬಗ್ಗೆ ಶಿಸ್ತು ಕ್ರಮಕ್ಕಾಗಿ ಪಕ್ಷದ ಕೇಂದ್ರ ಸಮಿತಿಗೆ ಶಿಫಾರಸು ಮಾಡಲಾಗಿದ್ದು, ಮಾಧ್ಯಮಗಳಿಗೆ ಇವತ್ತು ನೀಡಿರುವ ಹೇಳಿಕೆಯನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.