ಬೆಂಗಳೂರು: ಈ ಹಿಂದೆ ವೀರಶೈವ– ಲಿಂಗಾಯತ ಸಮಾಜವನ್ನು ಒಡೆಯಲು ಹೋಗಿದ್ದ ಕಾಂಗ್ರೆಸ್ ಪಕ್ಷ ಈಗ ಈ ಸಮುದಾಯವನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಇದ್ದಾಗ ಕಾಂಗ್ರೆಸ್‌ಗೆ ಲಿಂಗಾಯತರ ನೆನಪಾಗಲಿಲ್ಲ. ಅಧಿಕಾರ ಇಲ್ಲದಾದ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ವೀರಶೈವ– ಲಿಂಗಾಯತ ಸಮಾಜ ಎಸ್‌ಸಿ, ಎಸ್‌ಟಿ, ಒಬಿಸಿ ಸೇರಿ ಎಲ್ಲರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೆ. ವೀರಶೈವ ಲಿಂಗಾಯತ ಸಮಾಜ ಬಿಜೆಪಿ ಜೊತೆಗಿದೆ. ಕರ್ನಾಟಕದ ಜನರು ದೇಶದ ಅಭಿವೃದ್ಧಿ, ಸಮಗ್ರತೆಗಾಗಿ ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎಂದರು.
‘ಡಿ.ಕೆ.ಶಿವಕುಮಾರ್ ಅವರು ವೀರಶೈವ– ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ರಾಜ್ಯದ ಪ್ರಮುಖ ವೀರಶೈವ ಲಿಂಗಾಯತ ಮಠಾಧೀಶರು ನನ್ನನ್ನು ಕರೆಸಿಕೊಂಡು ಬಿಜೆಪಿ ಬೆಂಬಲವನ್ನು ಘೋಷಿಸಿದ್ದರು’ ಎಂದರು.
‘ನನ್ನನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ. ಈ ಅಪ ಪ್ರಚಾರದ ಹಿಂದೆ ಕುತ್ಸಿತ ಉದ್ದೇಶವಿದೆ. ನನ್ನನ್ನು ಬಿಜೆಪಿ ಮೂಲೆಗುಂಪು ಮಾಡಿಲ್ಲ. ಚೆನ್ನಾಗಿ ನೋಡಿಕೊಂಡಿದೆ’ ಎಂದು ಯಡಿಯೂರಪ್ಪ ತಿಳಿಸಿದರು.
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಓಡಾಡಿದರು. ಬೆರಳೆಣಿಕೆಯಷ್ಟೇ ಸೀಟನ್ನು ಗೆಲ್ಲಲು ಸಾಧ್ಯವಾಯಿತು. ಇಲ್ಲೂ ಅದೇ ಪುನರಾವರ್ತನೆಯಾಗಲಿದೆ. ಕಾಂಗ್ರೆಸ್ ಪಕ್ಷ ಸಮರ್ಥ ನಾಯಕರನ್ನು ಹೊಂದಿಲ್ಲ. ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಸರಿಸಾಟಿಯಾದ ನಾಯಕರಲ್ಲ ಎಂದರು.
ಈ ಬಾರಿ 130 ರಿಂದ 135 ಸ್ಥಾನಗಳನ್ನು ಗೆಲ್ಲುವುದು ಖಚಿತ. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲುತ್ತಾರೆ. ವಿ.ಸೋಮಣ್ಣ ಅವರು ಗೆಲ್ಲುತ್ತಾರೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.