ADVERTISEMENT

ನೇಮಕದ ಹಿಂದೆ ‘ಭವಿಷ್ಯ’ದ ಲೆಕ್ಕ; ಶಾಸಕರ ತೃಪ್ತಿಗೆ ಅಧಿಕಾರದ ಗದ್ದುಗೆ

ಸಂಪುಟ ವಿಸ್ತರಣೆಯತ್ತ ಮುಖ್ಯಮಂತ್ರಿ ಮುಂದಡಿ

ವೈ.ಗ.ಜಗದೀಶ್‌
Published 28 ಜುಲೈ 2020, 4:55 IST
Last Updated 28 ಜುಲೈ 2020, 4:55 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ರಾಜ್ಯದ ‘ಮಿಶ್ರತಳಿ’ ಸರ್ಕಾರಕ್ಕೆ ವರ್ಷ ತುಂಬುತ್ತಿದ್ದಂತೆ 20 ಶಾಸಕರಿಗೆ ನಿಗಮ–ಮಂಡಳಿಗಳ ಅಧ್ಯಕ್ಷ ಸ್ಥಾನ ದಯಪಾಲಿಸಿ ಅವರನ್ನು ಓಲೈಸುವ ಯತ್ನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೈ ಹಾಕಿದ್ದಾರೆ.

ಕೊರೊನಾ ನಿಯಂತ್ರಣದ ಬೃಹತ್ ಸವಾಲಿನ ಮಧ್ಯೆಯೇ ತೂರಿಕೊಂಡು ಬರುತ್ತಿರುವ ಮತ್ತೆರಡು ಸವಾಲುಗಳನ್ನು ಮಣಿಸಿ, ಅಧಿಕಾರವನ್ನು ತನ್ನ ಕೈವಶದಲ್ಲೇ ಇಟ್ಟುಕೊಳ್ಳುವುದು ಇದರ ಹಿಂದಿನ ಲೆಕ್ಕಾಚಾರ.

ಮುಖ್ಯಮಂತ್ರಿಯಾಗಲೇಬೇಕು ಎಂಬ ತುಂಬು ಹಂಬಲಕ್ಕೆ ಏಣಿಯಾದವರಿಗೆ ಸಚಿವ ಸ್ಥಾನ ದೊರಕಿಸಿಕೊಟ್ಟು ‘ವಚನ ಪರಿಪಾಲಕ’ನಾಗುವುದು ಮೊದಲ ಕೈಂಕರ್ಯ. ‘ಒಂದು ವರ್ಷ ಮಾತ್ರ ಮುಖ್ಯಮಂತ್ರಿ ಗಿರಿ; ಮುಂದೆ ನಾವು ಹೇಳಿದವರಿಗೆ ಬಿಟ್ಟುಕೊಡಬೇಕು’ ಎಂದು ಪಕ್ಷದ ವರಿಷ್ಠರು ಹಿಂದೆಯೇ ಸೂಚಿಸಿದಂತೆ ಯಡಿಯೂರಪ್ಪ ನಡೆದು
ಕೊಳ್ಳಲೇಬೇಕು. ಹೀಗಾಗಿ ರಾಜ್ಯ ಸರ್ಕಾರದ ಸಾರಥ್ಯ ಬದಲಾಗುತ್ತದೆ’ ಎಂದು ಪ್ರತಿಪಾದಿಸುತ್ತಿರುವವರಿಗೆ ಹಾಗೂ ಆ ದಿಕ್ಕಿನತ್ತ ತಲೆ ಹಾಕಿಕೊಂಡೇ ಮಲಗಿ ಕನಸು ಕಾಣುತ್ತಿರುವವರಿಗೆ ತಕ್ಕ ಉತ್ತರ ನೀಡುವುದು ಈ ನೇಮಕಾತಿ ಹಿಂದಿನ ಮತ್ತೊಂದು ಕಾರ್ಯತಂತ್ರ.

ADVERTISEMENT

ಮೈತ್ರಿ ಸರ್ಕಾರ ಪತನಗೊಳಿಸಿ ತಾವು ಮುಖ್ಯಮಂತ್ರಿಯಾಗುವ ದಾರಿಯನ್ನು ಸುಗಮಗೊಳಿಸಿದವರಿಗೆ ಸಚಿವ ಸ್ಥಾನ ನೀಡಲೇಬೇಕಾದುದು ಯಡಿಯೂರಪ್ಪ ಮುಂದಿರುವ ತುರ್ತು. ಅದಕ್ಕಾಗಿಯೇ ವಿಧಾನಪರಿಷತ್ತಿನ ನಾಮನಿರ್ದೇಶನ ಪ್ರಕ್ರಿಯೆ ಮುಗಿಸಿಬಿ‌ಟ್ಟಿದ್ದಾರೆ. 34 ಸಂಖ್ಯಾಬಲದ ಸಚಿವ ಸಂಪುಟದಲ್ಲಿ ಖಾಲಿ ಇರುವ 6 ಸ್ಥಾನಗಳ ಪೈಕಿ ಮೂರನ್ನು ಎಚ್.ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌ ಹಾಗೂ ಆರ್. ಶಂಕರ್ ಅವರಿಗೆ ನೀಡಬೇಕಾಗಿದೆ. ಸುಪ್ರೀಂಕೋರ್ಟ್‌ ತೀರ್ಪಿನ ಪರಿಮಿತಿಯಲ್ಲಿ ಅದು ಸಾಧ್ಯವೋ ಅಸಾಧ್ಯವೋ ಎಂಬುದನ್ನು ಯಡಿಯೂರಪ್ಪ ಗಣನೆಗೆ ತೆಗೆದುಕೊಂಡಂತಿಲ್ಲ. ಅದೇ ಹೊತ್ತಿನಲ್ಲಿ ‘ಮೂಲ’ ಬಿಜೆಪಿಯ ಇಬ್ಬರು–ಮೂವರಿಗಾದರೂ ಸಚಿವ ಸ್ಥಾನ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಭಿನ್ನಮತದ ಹೊಗೆ ಸರ್ಕಾರವನ್ನು ಕಾಡಲಿದೆ ಎಂಬುದು ಯಡಿಯೂರಪ್ಪ ಅವರಿಗೆ ತಿಳಿಯದ ಸಂಗತಿಯೇನಲ್ಲ. ಹಾಗಂತ ಮೂರು ಸ್ಥಾನ ಕೊಟ್ಟರೆ ಉಪಚುನಾವಣೆ (ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲರ ಕ್ಷೇತ್ರಗಳು) ಬಾಕಿ ಇರುವ ಈ ಇಬ್ಬರಿಗೆ ಕಾಯ್ದಿರಿಸಲು ಸಚಿವ ಸ್ಥಾನ ಉಳಿಯದು. ಹೀಗಾಗಿ ಇಬ್ಬಾಯಿಯ ಖಡ್ಗದ ಮೇಲೆ ನಡೆಯಬೇಕಾದ ಇಕ್ಕಟ್ಟಿನಲ್ಲಿ ಮುಖ್ಯಮಂತ್ರಿ ಇದ್ದಾರೆ.

ಇದೇ ಕಾರಣಕ್ಕೆ ಸಚಿವ ಸ್ಥಾನದ ತೀವ್ರ ಆಕಾಂಕ್ಷಿಗಳಾಗಿದ್ದವರ ಪೈಕಿ ಕೆಲವರಿಗೆ ನಿಗಮ–ಮಂಡಳಿಯ ಸ್ಥಾನ ನೀಡುವ ಯತ್ನ ಮಾಡಿದ್ದಾರೆ. ಇವರಲ್ಲಿ ಇಬ್ಬರು ಶಾಸಕರು ಬಿಟ್ಟರೆ ಉಳಿದವರು ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಬಿಜೆಪಿಯಲ್ಲೇ ಇರುವ ‘ಮೂಲ’ ನಿವಾಸಿಗಳು.

ನಿಮಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ಸಂದೇಶವನ್ನು ಶಾಸಕರಿಗೆ ರವಾನಿಸುವ ಮೂಲಕ ಸಂಪುಟ ವಿಸ್ತರಣೆ ಹೊತ್ತಿನಲ್ಲಿ ಅವರೆಲ್ಲ ತಮ್ಮ ಜತೆಗಿರುವಂತೆ ನೋಡಿಕೊಳ್ಳುವ ಲೆಕ್ಕಾಚಾರ ಈ ನೇಮಕಾತಿ ಹಿಂದಿದೆ.

ಬಲಾಬಲದ ಪ್ರದರ್ಶನ: ಕರ್ನಾಟಕದಲ್ಲಿರುವ ಶಾಸಕರಷ್ಟೇ ಗುಂಪು ಕಟ್ಟಿಕೊಂಡು ಯಡಿಯೂರಪ್ಪ ಅವರನ್ನು ಕುರ್ಚಿ
ಯಿಂದ ಇಳಿಸುವ ಧೈರ್ಯ ತೋರಲಾರರು ಹಾಗೂ ಆ ಮಟ್ಟಿಗೆ ನಾಯಕತ್ವ ಕೊಟ್ಟು ಮುನ್ನಡೆಸುವ ನಾಯಕರು
‘ರಾಜ್ಯ’ದಲ್ಲಿ ಸದ್ಯಕ್ಕೆ ಇಲ್ಲ. ಪಕ್ಷದ ವರಿಷ್ಠರು ಮನಸ್ಸು ಮಾಡಿದರೆ ಮಾತ್ರ ನಾಯಕತ್ವ ಬದಲಾವಣೆ ಸಾಧ್ಯವಾಗಬಲ್ಲುದು. ಅಂತಹ ಹೊತ್ತಿನೊಳಗೆ ಶಾಸಕರು, ಸಂಸದರು ತಮ್ಮ ಬೆಂಬಲಕ್ಕೆ ಇದ್ದಾರೆ; ತಮ್ಮನ್ನು ಮುಟ್ಟಿದರೆ ಕಷ್ಟ ಎಂಬ ಸಂದೇಶವನ್ನೂ ರವಾನಿಸುವುದು ಇದರ ಹಿಂದಿನ ತರ್ಕ.

ಹಾಲಿ ಸಂಪುಟದಲ್ಲಿ ಇರುವ ಸಚಿವರ ಪೈಕಿ ಇಬ್ಬರು ಉಪಮುಖ್ಯಮಂತ್ರಿಗಳು, ನಾಲ್ಕೈದು ಸಚಿವರು ಸೇರಿ ಗರಿಷ್ಠ 7–8 ಸಚಿವರು ವರಿಷ್ಠರ ಆಯ್ಕೆ. ಯಡಿಯೂರಪ್ಪ ನಾಮಬಲದಿಂದ ಶಾಸಕರು ಹಾಗೂ ಬಳಿಕ ಸಚಿವರಾದವರು ಬೆಂಬಲಕ್ಕೆ ನಿಲ್ಲುವುದರ ಜತೆಗೆ, ನಿಗಮ–ಮಂಡಳಿಯ ಋಣವೂ ಸೇರಿ ಕೊಂಡರೆ ತಮ್ಮ ಬಲ ಗಟ್ಟಿಯಾಗುತ್ತದೆ. ಅಂತಹ ಹೊತ್ತಿನಲ್ಲಿ ತಮ್ಮನ್ನು ಅಲುಗಾಡಿಸುವ ಯೋಚನೆಯನ್ನೂ ವರಿಷ್ಠರು ಮಾಡಲಾರರು ಎಂಬ ಆಲೋಚನೆ ಇದರ ಹಿಂದೆ ಕೆಲಸ ಮಾಡಿದೆ.

ಸವದಿ ದೆಹಲಿಯಾತ್ರೆ: ವರ್ಷದ ಸಂಭ್ರಮದ ವೇಳೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿಯಾತ್ರೆ ನಡೆಸಿದ್ದು ಪಕ್ಷದೊಳಗೆ ಊಹಾಪೋಹ ಹಾಗೂ ವಿಶ್ಲೇಷಣೆಗೆ ಕಾರಣವಾಗಿದೆ. ‘ಮೂವರು ಕೇಂದ್ರ ಸಚಿವರ ಭೇಟಿ ಮೊದಲೇ ನಿಗದಿಯಾಗಿತ್ತು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ’ ಎಂದು ಸಚಿವರ ಆಪ್ತ ಮೂಲಗಳು ಹೇಳಿವೆ.

ನಾಲ್ವರಿಗೆ ಕೊಟ್ಟು ಕಿತ್ತುಕೊಂಡರು?

ನಿಗಮ–ಮಂಡಳಿಗಳಿಗೆ ನೇಮಕದ ಆದೇಶ ಹೊರಬಿದ್ದಾಗ 24 ಶಾಸಕರ ಹೆಸರು ಇತ್ತು. ಸಂಜೆ ಹೊತ್ತಿಗೆ ಅದು 20ಕ್ಕೆ ಇಳಿಯಿತು.

ಜಿ.ಎಚ್. ತಿಪ್ಪಾರೆಡ್ಡಿ ಅವರು ನಿಗಮದ ನೇಮಕಾತಿಯನ್ನು ತಿರಸ್ಕರಿಸಬಹುದು ಎಂಬ ಕಾರಣಕ್ಕೆ ಅವರ ಹೆಸರನ್ನು ಕೈಬಿಡಲಾಯಿತು. ಲಾಲಾಜಿ ಮೆಂಡನ್‌ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಕಾನೂನಾತ್ಮಕ ಗೊಂದಲಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಹೆಸರು ತೆಗೆಯಲಾಯಿತು. ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು ಅವರ ಹೆಸರು ಕೈಬಿಡಲಾಗಿದೆ.

ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಅನೇಕರು ನಿಗಮ–ಮಂಡಳಿ ತಿರಸ್ಕರಿಸುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರೆ, ಕೆಲವರು ಯಡಿಯೂರಪ್ಪ ಜತೆ ಚರ್ಚಿಸಿದ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.