ADVERTISEMENT

ಶುಭ ಸುದ್ದಿಯ ಭರವಸೆ ಕೊಟ್ಟ ಬಿಎಸ್‌ವೈ; ಐಷಾರಾಮಿ ಧಾಮದಲ್ಲಿ ಬಿಜೆಪಿ ಶಾಸಕರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 4:41 IST
Last Updated 16 ಜನವರಿ 2019, 4:41 IST
   

ನವದೆಹಲಿ: ಈ ಸಲದ ಸಂಕ್ರಾಂತಿ ಹಬ್ಬದಂದು ಸಾವಿರಾರು ಕಿ.ಮೀ.ದೂರದ ಹರಿಯಾಣದ ಹೋಟೆಲೊಂದರಲ್ಲಿ 'ಬಂದಿಗಳಂತೆ' ಕಾಲ ಕಳೆಯಬೇಕಾದೀತು ಎಂಬ ಅಂದಾಜು ರಾಜ್ಯ ಬಿಜೆಪಿ ಶಾಸಕರಿಗೆ ಸೋಮವಾರ ಸಂಜೆಯ ವರೆಗೂ ಖಂಡಿತ ಇರಲಿಲ್ಲ.

ಏನು ನಡೆಯುತ್ತಿದೆ, ತಮ್ಮನ್ನು ಯಾಕೆ ಇಲ್ಲಿಡಲಾಗಿದೆ ಎಂಬ ಅರಿವು ಅವರಿಗೆ ಉಂಟು. ಆದರೆ, ಕಾರ್ಯಾಚರಣೆಯ ವಿವರಗಳು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಅತ್ಯಂತ ಆಪ್ತರ ವಿನಾ ಬೇರೆ ಯಾರಿಗೂ ತಿಳಿದಿಲ್ಲ.

ಮಂಗಳವಾರ ಮುಂಜಾನೆ ಉಪಾಹಾರದ ಸಂದರ್ಭದಲ್ಲಿ ಶಾಸಕರಿಗೆ ಎಳ್ಳು- ಬೆಲ್ಲ ಬೀರಿದ ಯಡಿಯೂರಪ್ಪ ಅವರು ಸದ್ಯದಲ್ಲೇ ಶುಭ ಸುದ್ದಿ ನೀಡುವ ಭರವಸೆ ನೀಡಿದ್ದಾರೆ. ‘ಇನ್ನೂ ಕೆಲ ದಿನಗಳನ್ನು ಹೋಟೆಲಿನಲ್ಲೇ ಕಳೆಯಬೇಕಾಗುತ್ತದೆ, ತಾಳ್ಮೆಯಿಂದಿರಿ’ ಎಂದೂ ಅವರು ಶಾಸಕರಿಗೆ ತಿಳಿಸಿದ್ದಾರೆ.

ADVERTISEMENT

ಸದ್ಯಕ್ಕೆ ವಿಲಾಸೀ ಹೊಟೆಲಿನ ಸುಖವನ್ನು ಸವಿಯುತ್ತಿರುವ ಶಾಸಕರಲ್ಲಿ ಕೆಲವರು ಕಾಲ ಕಳೆಯಲು ಮಂಗಳವಾರ ಕ್ರಿಕೆಟ್ ಆಡಿದ್ದಾರೆ. ಎಳ್ಳು-ಬೆಲ್ಲ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ತಮ್ಮ ಸರ್ಕಾರ ಪ್ರಮಾಣವಚನ ಸ್ವೀಕರಿಸುವ ಸವಿದಿನಗಳನ್ನು ಎದುರು ನೋಡತೊಡಗಿದ್ದಾರೆ. ಹೊರಗೆ ಗದಗುಟ್ಟಿಸುವ ಉತ್ತರಭಾರತದ ಭಯಂಕರ ಚಳಿ ಬಾಧೆ ಇವರನ್ನು ತಟ್ಟದು. 'ಏನು ನಡೆಯುತ್ತಿದೆಯೆಂದು ನಮಗೇನೂ ತಿಳಿಯದು, ಆರಾಮಾಗಿದ್ದೇವೆ' ಎಂಬುದು ದೂರವಾಣಿ ಸಂಪರ್ಕಕ್ಕೆ ಸಿಕ್ಕ ಕೆಲ ಶಾಸಕರ ಉದ್ಗಾರ.

ನಾವೂ ಅನ್ಯಮಾರ್ಗ ಹಿಡಿಯುತ್ತೇವೆ: ಸಿಂಹ
ಮೈಸೂರು:
‘ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ನಿಶ್ಚಿತ. ಇದಕ್ಕಾಗಿ ನಾವು ಅನ್ಯಮಾರ್ಗ ಹಿಡಿದರೆ ತಪ್ಪೇನು’ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು.

‘ಜೆಡಿಎಸ್‌– ಕಾಂಗ್ರೆಸ್‌ ದೋಸ್ತಿ ಸರ್ಕಾರ ರಚಿಸುವಾಗ ಹಿಡಿದಿದ್ದು ಅನ್ಯಮಾರ್ಗವಲ್ಲದೇ ಮತ್ತಿನ್ನೇನು. ನಾವೂ ಅದನ್ನು ಮಾಡಬೇಕಾಗುತ್ತದೆ. ಆದರೆ, ಆಪರೇಷನ್‌ ಕಮಲ ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಪ್ರಜಾಪ್ರಭುತ್ವದಲ್ಲಿ ಮ್ಯಾಜಿಕ್‌ ನಂಬರ್‌ ಮುಖ್ಯ ಎನ್ನುವುದನ್ನು ನಾವು ಗೌರವಿಸುತ್ತೇವೆ. ನಾವು 104 ಸಂಖ್ಯೆ ಇಟ್ಟುಕೊಂಡು ಸುಮ್ಮನೆ ಕೂರಬೇಕೆ. ಜನರಿಂದ ತಿರಸ್ಕೃತಗೊಂಡ ಪಕ್ಷಗಳು ಅಧಿಕಾರದಲ್ಲಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.
‘ಬಿಜೆಪಿ ಶಾಸಕರು ದೆಹಲಿಯಲ್ಲಿರುವುದು ನಿಜ. ಲೋಕಸಭಾ ಚುನಾವಣೆಗೆ ಸಿದ್ಧತೆಗೆ ತರಬೇತಿ ನೀಡಲು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ನಮ್ಮ ಶಾಸಕರನ್ನು ಯಾರೂ ಕೊಳ್ಳಲಾಗದು. ಆಪರೇಷನ್‌ ಕಮಲದ ಬಗ್ಗೆ ಭಯವೇಕೆ. ತಮ್ಮ ಶಾಸಕರ ಗಟ್ಟಿತನದ ಬಗ್ಗೆ ಜೆಡಿಎಸ್‌, ಕಾಂಗ್ರೆಸ್‌ಗೆ ನಂಬಿಕೆ ಇಲ್ಲವೇ’ ಎಂದರು.

**
ಮೈತ್ರಿಯಿಂದ ಹಿಂದೆ ಸರಿಯಲ್ಲ: ಮಹೇಶ್‌
ಮೈಸೂರು: ಜೆಡಿಎಸ್ ಮೈತ್ರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎನ್‌.ಮಹೇಶ್‌ ಇಲ್ಲಿ ಮಂಗಳವಾರ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಮೈತ್ರಿಯಿಂದ ಹಿಂದೆ ಸರಿಯುವಂತಿದ್ದರೆ ಮೈಸೂರಿನಲ್ಲಿ ಏಕೆ ಇರುತ್ತಿದ್ದೆ? ಮುಂಬೈನಲ್ಲೊ, ದೆಹಲಿಯಲ್ಲೊ ಇರುತ್ತಿದ್ದೆ’ ಎಂದರು.

ಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಬಿಎಸ್ಪಿ ಗೆಲ್ಲಿಲಿದೆ. ಚುನಾವಣೆಗಾಗಿ ಪಕ್ಷಕ್ಕೆ ಸಂಪನ್ಮೂಲ ಕ್ರೋಡೀಕರಿಸಲಾಗುತ್ತಿದೆ ಎಂದು ಹೇಳಿದರು.

**
ಅಜಯಸಿಂಗ್ ‘ಅಲಭ್ಯ’ದ ಊಹಾಪೋಹ

ಕಲಬುರ್ಗಿ: ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರು ತಮ್ಮ ಆಪ್ತರ ಬಳಿ ಮೊಬೈಲ್ ಬಿಟ್ಟು ನವದೆಹಲಿಗೆ ತೆರಳಿದ್ದು, ಇದರಿಂದಾಗಿ ಅಜಯಸಿಂಗ್ ಕೂಡ ಅತೃಪ್ತರ ಬಣ ಸೇರಲಿದ್ದಾರೆ ಎಂಬ ಊಹಾಪೋಹ ಜಿಲ್ಲೆಯಲ್ಲಿ ದಿನವಿಡೀ ಹರಿದಾಡಿತು.

‘ಎರಡು ದಿನಗಳಿಂದ ಶಾಸಕರ ಮೊಬೈಲ್ ಸ್ವಿಚ್ಡ್‌ ಆಫ್ ಬರುತ್ತಿದೆ. ಇದರಿಂದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ. ಕೆಲವರು ಅವರು ಪ್ರವಾಸಕ್ಕೆ ಹೋಗಿದ್ದಾರೆ ಎಂದು ಹೇಳಿದರೆ, ಹಲವರು ಶಾಸಕರು ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಾಗುತ್ತಿಲ್ಲ’ ಎಂದು ಸ್ಥಳೀಯ ಮುಖಂಡರೊಬ್ಬರು ತಿಳಿಸಿದರು.

ಶಾಸಕರ ಮೊಬೈಲ್‌ಗೆ ‘ಪ್ರಜಾವಾಣಿ’ ಪ್ರತಿನಿಧಿ ಕರೆ ಮಾಡಿದಾಗ ಅವರ ಆಪ್ತರೊಬ್ಬರು ಸ್ವೀಕರಿಸಿದರು. ‘ಅಜಯಸಿಂಗ್ ಅವರು ತಮ್ಮ ಮೊಬೈಲ್‌ ಅನ್ನು ಬೆಂಗಳೂರಿನಲ್ಲಿಯೇ ಬಿಟ್ಟು ನವದೆಹಲಿಗೆ ತೆರಳಿದ್ದಾರೆ. ನಾನು ಕುಮಾರಕೃಪಾ ಅತಿಥಿಗೃಹದಲ್ಲೇ ಇದ್ದೇನೆ. ಒಂದೆರಡು ಕರೆಗಳನ್ನು ಸ್ವೀಕರಿಸದ ಕಾರಣ ಈ ರೀತಿ ಊಹಾಪೋಹ ಹಬ್ಬಿದೆ. ಶಾಸಕರು ವಾಪಸ್ಸಾಗುತ್ತಿದ್ದು, ಅಂತಹ ಬೆಳವಣಿಗೆ ಏನೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ’

ಭದ್ರಾವತಿ: ‘ನಾನು ಕಾಂಗ್ರೆಸ್‌ ಪಕ್ಷದ ಶಿಸ್ತಿನ ಸಿಪಾಯಿ. ಇಲ್ಲಿಯ ತನಕ ಯಾವುದೇ ಭಿನ್ನಮತೀಯ ಶಾಸಕ ಮುಖಂಡರು ಸಂಪರ್ಕಿಸಿಲ್ಲ’ ಎಂದು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ತಿಳಿಸಿದ್ದಾರೆ.

ಸದ್ಯದ ಬೆಳವಣಿಗೆ ಗಮನಿಸಿದರೆ ಸಮ್ಮಿಶ್ರ ಸರ್ಕಾರದ ಆಡಳಿತಕ್ಕೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಊಹಾಪೋಹದ ಮೇಲೆ ನಡೆದಿದ್ದು, ಇದರಲ್ಲಿ ಸತ್ಯಾಂಶ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಗಾಳಕ್ಕೆ ಪ್ರತಿಗಾಳ: ಸಚಿವ ಸತೀಶ್‌ ಎಚ್ಚರಿಕೆ

ಬೆಳಗಾವಿ: ‘ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಆದರೆ, ಗಾಳಕ್ಕೆ ಪ್ರತಿ ಗಾಳ ಇರುತ್ತದೆ ಎಂಬುದನ್ನು ಯಾರೂ ಮರೆಯಬಾರದು’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.

ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಮ್ಮಲ್ಲಿ ಕೆಲವರು ಅತೃಪ್ತರಿರುವುದು ನಿಜ. ಆದರೆ ಅವರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘16 ಮಂದಿ ಅತೃಪ್ತ ಶಾಸಕರಿದ್ದಾರೆ ಎಂದು ಕೆಲವು ಮಾಧ್ಯಮದವರು ಹೇಳುತ್ತಿದ್ದಾರೆ. ಇಷ್ಟೊಂದು ಸಂಖ್ಯಾಬಲ ಇದ್ದರೆ ಬಿಜೆಪಿಯವರು ಕಾಯುತ್ತಿರುವುದು ಏಕೆ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ನಮ್ಮಲ್ಲಿ ಮೂರ್ನಾಲ್ಕು ಜನ ಅತೃಪ್ತರಿದ್ದಾರೆ. ಅವರು ಸುಮ್ಮನಾಗಲು ಈಗಲೂ ಅವಕಾಶವಿದೆ. ಹಟ ಮುಂದುವರಿಸಿದರೆ ಪಕ್ಷದ ವರಿಷ್ಠರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಮೂರು ತಿಂಗಳಿನಿಂದಲೂ ನಡೆಯುತ್ತಿರುವ ಆಪರೇಷನ್ ಕಮಲದ ಕಸರತ್ತು ವಿಫಲವಾಗುವುದು ಖಚಿತ’ ಎಂದು ಪ್ರತಿಕ್ರಿಯಿಸಿದರು.

‘ಬಿಜೆಪಿ ಬಳಿ, ನಮ್ಮ ಸರ್ಕಾರವನ್ನು ಪತನಗೊಳಿಸುವಷ್ಟು ಸಂಖ್ಯಾಬಲ ಇಲ್ಲ. ಅವರಿಗೂ ಭಯ ಇದೆ. ಅದಕ್ಕಾಗಿಯೇ ಅವರ ಶಾಸಕರನ್ನು ನವದೆಹಲಿಯಲ್ಲಿ ಇರಿಸಿದ್ದಾರೆ’ ಎಂದು ಟೀಕಿಸಿದರು.

ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿಗೆ ಸೇರಿಸುವ ಪ್ರಯತ್ನವನ್ನು ಸೋದರ, ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ಬಾಲಚಂದ್ರ ಬಿಜೆಪಿಯಲ್ಲೇ ಇದ್ದಾರೆ. ರಮೇಶ್ ಬಿಜೆಪಿಗೆ ಹೋಗುತ್ತಿದ್ದಾರೆಯೇ? ಯಾರ ಮೂಲಕ ಹೋಗುತ್ತಿದ್ದಾರೆ ಎನ್ನುವುದನ್ನು ಅವರನ್ನೇ ಕೇಳಿ’ ಎಂದು ಉತ್ತರಿಸಿದರು.

ಆಪರೇಷನ್‌ ಜೆಡಿಎಸ್‌ಗೆ ಚಾಲನೆ: ಪುಟ್ಟರಾಜು

ಮಂಡ್ಯ: ‘ಸುಮ್ಮನಿದ್ದವರನ್ನು ಬಿಜೆಪಿ ಮುಖಂಡರು ಕೆಣಕಿದ್ದಾರೆ. ಇನ್ನು ನಾವು ಸುಮ್ಮನೆ ಕೂರುವುದಿಲ್ಲ. ಆಪರೇಷನ್‌ ಜೆಡಿಎಸ್‌ ಮಾಡುತ್ತೇವೆ. ಇದಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಸೂಚನೆ ನೀಡಿದ್ದಾರೆ’ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಇಲ್ಲಿ ಮಂಗಳವಾರ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿ, ‘ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ನಿಂದ ನಾನು ಅಧಿಕೃತವಾಗಿ ಅಖಾಡಕ್ಕೆ ಇಳಿಯುತ್ತಿದ್ದೇವೆ. ಬಿಜೆಪಿ ಬಹಳ ಮಂದಿ ಶಾಸಕರು ಸಂಪರ್ಕದಲ್ಲಿದ್ದು, ನಮ್ಮ ಜೊತೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು ಅಸ್ಥಿರಗೊಳಿಸುವುದು ಸುಲಭದ ಮಾತಲ್ಲ. ನಮ್ಮ ಯಾವೊಬ್ಬ ಶಾಸಕರೂ ಬಿಜೆಪಿ ಕಡೆ ಕಾಲಿಡುವುದಿಲ್ಲ’ ಎಂದರು.

ಪಿಎಚ್‌.ಡಿ: ‘ಸಮ್ಮಿಶ್ರ ಸರ್ಕಾರ ನಡೆಸುವುದರಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪಿಎಚ್‌.ಡಿ ಮಾಡಿದ್ದಾರೆ. ಎರಡೂ ಪಕ್ಷದ ಶಾಸಕರನ್ನು ಒಗ್ಗಟ್ಟಿನಿಂದ ಕರೆದೊಯ್ಯುತ್ತಿದ್ದಾರೆ. 7 ತಿಂಗಳಿಂದ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಆಡಳಿತ ನಡೆಸುತ್ತಿದ್ದಾರೆ. ಅಪಪ್ರಚಾರ ನಡೆಯುತ್ತಿದ್ದು ಜನರು ಇದಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಶೀಘ್ರವೇ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಾಗುವುದು’ ಎಂದು ಹೇಳಿದರು.

ಬಿಜೆಪಿ ಮುಖಂಡರಿಗೆ ಉಷ್ಣ: ‘ಸಂಕ್ರಾಂತಿ ಹಬ್ಬ ಬಿಜೆಪಿ ಮುಖಂಡರಿಗೆ ಸರಿ ಇದ್ದಂತಿಲ್ಲ. ಎಳ್ಳು–ಬೆಲ್ಲ ತಿಂದು ಅವರಿಗೆ ಉಷ್ಣವಾಗಿವೆ. ಹೀಗಾಗಿ ತಂಪು ಮಾಡಿಕೊಳ್ಳಲು ಎಲ್ಲರೂ ಸೇರಿ ಪ್ರವಾಸ ಹೋಗಿದ್ದಾರೆ’ ಎಂದು ಶಾಸಕ ಸುರೇಶ್‌ಗೌಡ ವ್ಯಂಗ್ಯವಾಡಿದರು.

‘ಸಮ್ಮಿಶ್ರ ಸರ್ಕಾರ ರಚನೆಯಾದ ಕ್ಷಣದಿಂದಲೂ ಬಿಜೆಪಿ ಮುಖಂಡರು ಒಂದಲ್ಲಾ ಒಂದು ತಂತ್ರ ಮಾಡುತ್ತಲೇ ಬಂದಿದ್ದಾರೆ. ಆದರೆ ಫಲ ದೊರೆಯುತ್ತಿಲ್ಲ. ಅತೃಪ್ತ ಶಾಸಕರು ಬಿಜೆಪಿ ಮುಖಂಡರ ಸಂಪರ್ಕದಲ್ಲಿ ಇಲ್ಲ. ಇದು ಬರೀ ಊಹಾಪೋಹ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.