ಬೆಂಗಳೂರು: ಜೆಡಿಎಸ್ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿರುವ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.
‘ಮೈತ್ರಿಯಾದರೆ, ಅದಕ್ಕೆ ಬದ್ಧವಾಗಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಅದಿಲ್ಲವಾದರೆ ಎಲ್ಲ ಸ್ಥಾನಗಳಲ್ಲೂ ಸ್ಪರ್ಧಿಸುತ್ತೇವೆ. ಈ ಬಗ್ಗೆ ಪಕ್ಷದ ಅಧಿನಾಯಕಿ (ಮಾಯಾವತಿ) ತೀರ್ಮಾನಿಸಲಿದ್ದಾರೆ’ ಎಂದು ಬಿಎಸ್‌ಪಿ ನಾಯಕ, ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಪಕ್ಷ ಹೊಂದಾಣಿಕೆ ಮಾಡಿಕೊಂಡು 18 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಕೊಳ್ಳೇಗಾಲದಲ್ಲಿ ಮಾತ್ರ ಗೆದ್ದಿತ್ತು. ಇದರಿಂದಾಗಿ ಕಾಂಗ್ರೆಸ್ ಪರವಾಗಿದ್ದ ದಲಿತ ಮತಗಳು ವಿಭಜನೆಯಾಗಿದ್ದವು.
‘ಶನಿವಾರ (ಫೆ. 2) ಪಕ್ಷದ ರಾಜ್ಯ ಸಮಿತಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರೂ ಆಗಿರುವ ರಾಜ್ಯಸಭೆ ಸದಸ್ಯ ಅಶೋಕ್ ಸಿದ್ದಾರ್ಥ ಮತ್ತು ಪಕ್ಷದ ಕರ್ನಾಟಕ ಉಸ್ತುವಾರಿ ಎಂ.ಎಲ್. ತೋಮರ್ ಭಾಗವಹಿಸಲಿದ್ದಾರೆ’ ಎಂದರು.
‘ಚಾಮರಾಜನಗರ, ಮೈಸೂರು, ಬೀದರ್, ಕಲಬುರ್ಗಿ, ಚಿಕ್ಕೋಡಿ, ರಾಯಚೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಪಕ್ಷಕ್ಕೆ ನೆಲೆ ಇದೆ’ ಎಂದೂ ಮಹೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.