ಬೆಂಗಳೂರು: ‘ನಿಮ್ಮ ಶಾಸಕರಿಗೆ ನೀವು ನೀಡಿರುವ ವಿಪ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮೂರು–ನಾಲ್ಕು ದಿನಗಳಲ್ಲಿ ಅದರ ಕಥೆ ಏನಾಗುತ್ತದೆ ಎಂಬುದನ್ನು ಕಾದು ನೋಡಿ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಎಸೆದರು.
ವಿಧಾನಸಭೆಯಲ್ಲಿ ಮಂಗಳವಾರ ವಿಶ್ವಾಸಮತ ನಿರ್ಣಯದ ಪ್ರಸ್ತಾವದ ಚರ್ಚೆಯ ವೇಳೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪಕ್ಷಾಂತರ ನಿಷೇಧ ಕಾಯ್ದೆಯ ಬಗ್ಗೆ ಉಲ್ಲೇಖಿಸಿದರು. ‘ಪಕ್ಷಾಂತರ ನಿಷೇಧ ಕಾಯ್ದೆಯಡಿ 15 ಶಾಸಕರು ಅನರ್ಹಗೊಳ್ಳಲಿದ್ದಾರೆ. ಈ ಸಂಬಂಧ ನಮ್ಮ ನಾಯಕರು ಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ’ ಎಂದರು.
ಆಗ ಮಧ್ಯಪ್ರವೇಶಿಸಿದ ಬಿಜೆಪಿಯ ಜಗದೀಶ ಶೆಟ್ಟರ್, ‘ಶಿವಕುಮಾರ್ ಅವರು ಸದನದ ದಾರಿ ತಪ್ಪಿಸುತ್ತಿದ್ದಾರೆ. ಜತೆಗೆ, 15 ಶಾಸಕರ ಹಾದಿಯನ್ನೂ ತಪ್ಪಿಸುತ್ತಿದ್ದಾರೆ. ಸದನಕ್ಕೆ 15 ಶಾಸಕರು ಹಾಜರಾಗುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಶಿವಕುಮಾರ್ ಅವರು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ‘ನಮ್ಮ ಶಾಸಕರ ದಾರಿ ತಪ್ಪಿಸುತ್ತಿರುವುದು ಶಿವಕುಮಾರ್ ಅಲ್ಲ, ಬಿಜೆಪಿಯವರು. ಬಿಜೆಪಿಯವರು ತೋಡಿದ ಹಳ್ಳಕ್ಕೆ ಬೀಳಬೇಡಿ ಎಂದಷ್ಟೇ ಕಿವಿಮಾತು ಹೇಳಿದ್ದಾರೆ’ ಎಂದರು.
‘ಪಕ್ಷಾಂತರ ನಿಷೇಧ ಕಾಯ್ದೆ ಈಗಲೂ ಚಾಲ್ತಿಯಲ್ಲಿದೆ. ವಿಪ್ ಕೊಡುವ ಅಧಿಕಾರ ನನಗಿದೆ ಎಂದು ಸಭಾಧ್ಯಕ್ಷರು ರೂಲಿಂಗ್ ನೀಡಿದ್ದಾರೆ. ಈ ಶಾಸಕರನ್ನು ನಾವೆಲ್ಲ ಕಷ್ಟಪಟ್ಟು ಗೆಲ್ಲಿಸಿದ್ದೇವೆ. ಅವರು ನಮ್ಮ ಸೂಚನೆಯನ್ನು ಪಾಲಿಸಲೇಬೇಕು’ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ‘ಶರದ್ ಯಾದವ್ ಪ್ರಕರಣದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ನೀಡಿರುವ ಆದೇಶವನ್ನು ನೆನಪಿಸಿಕೊಳ್ಳಿ’ ಎಂದು ಛೇಡಿಸಿದರು.
‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.