ಬೆಂಗಳೂರು/ಹುಬ್ಬಳ್ಳಿ: ‘ಶಾಸಕ ನಾಗನಗೌಡ ಪಾಟೀಲ ಅವರ ಪುತ್ರ ಶರಣಗೌಡರೊಂದಿಗೆ ಮಾತನಾಡಿದ್ದು ನಾನೇ. ಸಂಭಾಷಣೆಯಲ್ಲಿರುವುದು ನನ್ನದೇ ಧ್ವನಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿರುವುದರಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಸಿಡಿಸಿದ ‘ಆಡಿಯೊ ಬಾಂಬ್’ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ. ಈ ಆಡಿಯೊದಲ್ಲಿ ತಮ್ಮ ಹೆಸರೂ ಪ್ರಸ್ತಾಪವಾಗಿರುವುದರಿಂದ ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶಕುಮಾರ್ ಹೇಳಿದ್ದಾರೆ. ಹೀಗಾಗಿ, ಈ ಪ್ರಕರಣ ಮೈತ್ರಿ ಪಕ್ಷಗಳ (ಜೆಡಿಎಸ್–ಕಾಂಗ್ರೆಸ್) ಮತ್ತು ವಿರೋಧ ಪಕ್ಷ ಬಿಜೆಪಿ ಸದಸ್ಯರ ಮಧ್ಯೆ ಭಾರಿ ಕದನಕ್ಕೆ ವಸ್ತುವಾಗುವ ಸಾಧ್ಯತೆ ನಿಚ್ಚಳವಾಗಿದೆ.
ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿದ ಯಡಿಯೂರಪ್ಪ, ‘ಶರಣಗೌಡ ನನ್ನೊಂದಿಗೆ ಮಾತನಾಡಿದ್ದು ನಿಜ. ಆದರೆ, ಅವರನ್ನು ಕುಮಾರಸ್ವಾಮಿ ಅವರೇ ನನ್ನ ಬಳಿ ಕಳುಹಿಸಿಕೊಟ್ಟಿದ್ದಾರೆ. ಉದ್ದೇಶಪೂರ್ವಕವಾಗಿ ಈ ಸಂಭಾಷಣೆಯನ್ನು ರೆಕಾರ್ಡ್ ಮಾಡಿಸುವ ಮೂಲಕ ಕುತಂತ್ರದ ರಾಜಕೀಯ ನಡೆಸಿದ್ದಾರೆ’ ಎಂದು ಆರೋಪಿಸಿದರು.
‘ಸಂಭಾಷಣೆಯಲ್ಲಿ ಅರ್ಧ ಸತ್ಯ, ಅರ್ಧ ಸುಳ್ಳು ಇದೆ. ವಿಧಾನಸಭಾಧ್ಯಕ್ಷರಿಗೆ ಹಣ ಕೊಡುವುದಾಗಿ ಹೇಳಿದ್ದು ಸುಳ್ಳು. ಕುಮಾರಸ್ವಾಮಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರಿಗೆ ಕುಮಾರಸ್ವಾಮಿ ಆಮಿಷ ಒಡ್ಡಿರುವ ದಾಖಲೆಗಳು ನಮ್ಮ ಬಳಿ ಇವೆ. ನಮ್ಮದು ಸೂಟ್‌ಕೇಸ್ ಸಂಸ್ಕೃತಿ ಹಾಗೂ ಸೂಟ್‌ಕೇಸ್ ಇಲ್ಲದೇ ಯಾವುದೇ ಕೆಲಸ ಆಗುವುದಿಲ್ಲ ಎಂದು ಎಚ್.ಡಿ. ರೇವಣ್ಣ ಅವರ ಮಗ ಪ್ರಜ್ವಲ್ ಹೇಳಿರುವ ದಾಖಲೆಗಳೂ ನನ್ನ ಬಳಿ ಇವೆ. ಈ ದಾಖಲೆಗಳನ್ನು ಸೋಮವಾರ ಬಿಡುಗಡೆ ಮಾಡುತ್ತೇನೆ’ ಎಂದು ಪ್ರಕಟಿಸಿದರು.
ಬಜೆಟ್ ಮಂಡನೆಗೆ ಮುನ್ನ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ, ‘ದೇವದುರ್ಗದಲ್ಲಿ ಗುರುವಾರ ತಡರಾತ್ರಿ ಯಡಿಯೂರಪ್ಪ ಅವರು ಶರಣಗೌಡ ಅವರನ್ನು ಕರೆಸಿಕೊಂಡು ಸಚಿವ ಸ್ಥಾನ ಮತ್ತು ಹಣದ ಆಮಿಷ ಒಡ್ಡಿದ್ದಾರೆ. ಆಗ ಶಾಸಕರಾದ ಪ್ರೀತಂ ಗೌಡ, ಶಿವನಗೌಡ ನಾಯ್ಕ್ ಕೂಡಾ ಇದ್ದರು’ ಎಂದು ಆರೋಪಿಸಿದ್ದರು.
‘ಕುಮಾರಸ್ವಾಮಿ ಅವರು ಸಿನಿಮಾ ಹಿನ್ನೆಲೆಯವರು. ಅವರು ಏನನ್ನೂ ಬೇಕಾದರೂ ಸೃಷ್ಟಿಸಬಲ್ಲರು. ಅದನ್ನೇ ಈಗ ಮಾಡಿದ್ದಾರೆ. ಇದು ನಕಲಿ ಆಡಿಯೊ. ನಾನು ಯಾರನ್ನೂ ಭೇಟಿ ಮಾಡಿಲ್ಲ. ಸಭಾಧ್ಯಕ್ಷರ ಬಗ್ಗೆ ಮಾತನಾಡಿದ್ದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ’ ಎಂದು ಯಡಿಯೂರಪ್ಪ ಸವಾಲು ಹಾಕಿದ್ದರು.
* ಆಡಿಯೊದಲ್ಲಿರುವುದು ತಮ್ಮದೇ ಧ್ವನಿಯಾಗಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಅವರು ಹೇಳಿದಂತೆ ನಡೆದುಕೊಳ್ಳಲಿ
-ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ
* ನಾನು ಹಿಟ್ಲರ್ ಅಲ್ಲ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಯಾರು ಮಾರಾಟ ಆಗುತ್ತಾರೋ, ಯಾರು ದುಡ್ಡು ಕೊಡುತ್ತಾರೋ ಗೊತ್ತಿಲ್ಲ
-ಕೆ.ಆರ್.ರಮೇಶ್ ಕುಮಾರ್, ವಿಧಾನಸಭಾಧ್ಯಕ್ಷ
* ಯಡಿಯೂರಪ್ಪ ಕೊನೆಗೂ ತಪ್ಪೊಪ್ಪಿಕೊಂಡಿದ್ದಾರೆ. ಅವರಿಗೆ ಧರ್ಮಸ್ಥಳದ ಮಂಜುನಾಥಸ್ವಾಮಿ ಈಗಲಾದರೂ ಬುದ್ಧಿ ಕೊಟ್ಟಿರಬಹುದು
- ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.