ಮೈಸೂರು: ಕೇರಳದ ವಯನಾಡಿನಲ್ಲಿ ಸುರಿದ ‘ಮಾನಂದವಾಡಿ ಮಾನ್ಸೂನ್’ ವರ್ಷಧಾರೆಗೆ, ಆಗಸ್ಟ್ ಮೊದಲ ವಾರದಲ್ಲೇ ಭರ್ತಿಯಾದ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರಿ ಹಬ್ಬದಂದೇ (ಶುಕ್ರವಾರ) ಬಾಗಿನ ಅರ್ಪಿಸಲಿದ್ದಾರೆ.
ಮುಖ್ಯಮಂತ್ರಿ ಬಾಗಿನ ಅರ್ಪಣೆಗಾಗಿಯೇ 2284 ಅಡಿ ಎತ್ತರದ ಜಲಾಶಯವನ್ನು ಭರ್ತಿ ಮಾಡಲಾಗಿದೆ. 2283.84 ಅಡಿವರೆಗೂ ನೀರು ಸಂಗ್ರಹಿಸಿದ್ದು, ಇದು ಗರಿಷ್ಠ ಸಂಗ್ರಹಣೆಯಾಗಿದೆ. 4000 ಕ್ಯುಸೆಕ್ ನೀರಿನ ಹೊರ ಹರಿವಿದೆ.
19.52 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಿಂದ ಇದೂವರೆಗೂ 35 ಟಿಎಂಸಿ ಅಡಿಗೂ ಹೆಚ್ಚಿನ ನೀರನ್ನು ನದಿ ಪಾತ್ರಕ್ಕೆ, ನಾಲೆಗಳಿಗೆ ಹರಿಸಲಾಗಿದೆ.
ಆ.6ರ ವೇಳೆಗೆ 15 ಟಿಎಂಸಿ ಅಡಿ ನೀರು ಹೊರ ಹರಿದಿದ್ದರೆ, ಉಳಿದ 14 ದಿನಗಳಲ್ಲಿ 20 ಟಿಎಂಸಿ ಅಡಿ ನೀರು ಹೊರ ಹರಿದಿದೆ. ಹಿಂದಿನ ವರ್ಷದ ಅವಧಿಯಲ್ಲಿ 53 ಟಿಎಂಸಿ ಅಡಿಗೂ ಹೆಚ್ಚು ನೀರು ಹೊರ ಹರಿದಿತ್ತು ಎಂಬುದನ್ನು ಜಲಾಶಯದ ಮೂಲಗಳು ತಿಳಿಸಿವೆ.
ಮೂವರಿಂದ ಮೂರು ಬಾರಿ ಬಾಗಿನ
2003–04ರಿಂದ 2019–20ರವರೆಗೆ ಕಬಿನಿಗೆ ಒಂಬತ್ತು ಬಾರಿ ನಾಲ್ವರು ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದ್ದು, ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರು ಬಾಗಿನದ ಗೌರವ ನೀಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ತಮ್ಮ ಅಧಿಕಾರದ ಅವಧಿಯಲ್ಲಿ ತಲಾ ಮೂರು ಬಾರಿ ಮುಖ್ಯಮಂತ್ರಿಯಾಗಿ ಬಾಗಿನ ಅರ್ಪಿಸಿದ್ದಾರೆ.
2004–05ರಲ್ಲಿ ಎನ್.ಧರ್ಮಸಿಂಗ್, 2006–07, 2007–08, 2018–19ರಲ್ಲಿ ಕುಮಾರಸ್ವಾಮಿ, 2013–14, 2015–16, 2017–18ರಲ್ಲಿ ಸಿದ್ದರಾಮಯ್ಯ, 2009–10, 2019–20ರಲ್ಲಿ ಬಾಗಿನ ಅರ್ಪಿಸಿದ್ದ ಬಿ.ಎಸ್.ಯಡಿಯೂರಪ್ಪ ಇದೀಗ ಮತ್ತೊಮ್ಮೆ ಕಪಿಲೆಗೆ ಬಾಗಿನದ ಗೌರವ ನೀಡಲಿದ್ದಾರೆ.
2012–13ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ.ರಾಮದಾಸ್, 2014–15ರಲ್ಲಿ ವಿ.ಶ್ರೀನಿವಾಸ ಪ್ರಸಾದ್ ಸರ್ಕಾರದ ಪರವಾಗಿ ಕಪಿಲೆಗೆ ಗೌರವಾರ್ಪಣೆ ಸಲ್ಲಿಸಿದ್ದರು ಎಂಬುದು ಕಬಿನಿ ಜಲಾಶಯದ ಮೂಲಗಳಿಂದ ತಿಳಿದು ಬಂದಿದೆ.
ಮೊದಲ ಬಾಗಿನ ನೀಡಿದ್ದು ಅರಸು: ಕಪಿಲೆಗೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕಬಿನಿ ಜಲಾಶಯ ನಿರ್ಮಿಸಲಾಗಿದೆ. 1974ರಿಂದಲೂ ಇಲ್ಲಿ ನೀರು ಸಂಗ್ರಹ ಮಾಡಲಾಗುತ್ತಿದೆ.
‘ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗಲೇ ಜಲಾಶಯ ನಿರ್ಮಾಣಗೊಂಡಿತು. ಭರ್ತಿಯಾದ ಕಬಿನಿಗೆ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿ ಅರಸು’ ಎಂದು ಜಲಾಶಯದ ಗೇಜ್ ರೀಡರ್ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅರಸು ನಂತರ ಆರ್.ಗುಂಡೂರಾವ್, ಎಸ್.ಬಂಗಾರಪ್ಪ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ ಸಹ ತಮ್ಮ ಆಡಳಿತದ ಅವಧಿಯಲ್ಲಿ ಕಪಿಲೆಗೆ ಬಾಗಿನದ ಗೌರವ ನೀಡಿದ್ದಾರೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.