ಬಾಗಲಕೋಟೆ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಾದಾಮಿ ತಾಲೂಕಿನ ಮುಷ್ಠಿಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಜೆಡಿಎಸ್ ಮುಖಂಡರಿಗೆ ಹೇಳಿರುವ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಅದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸೋತು ಸುಣ್ಣವಾಗಿರುವ ನಿಖಿಲ್‌ಗೆ ಆ ರೀತಿ ಹೇಳಿಕೆ ನೀಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ನಾವು (ಬಿಜೆಪಿಯವರು) 105 ಮಂದಿ ಇದ್ದೇವೆ. ಅವರಿಗೆ (ಜೆಡಿಎಸ್-ಕಾಂಗ್ರೆಸ್) ಆಡಳಿತ ನಡೆಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ನಾವು ಆಡಳಿತ ಮಾಡುತ್ತೇವೆ. ಆದರೆ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ ಎಂದರು.
ಜಿಂದಾಲ್ ಕಂಪೆನಿಗೆ ಭೂಮಿ ಮಂಜೂರು ಮಾಡಿರುವ ವಿಚಾರದಲ್ಲಿ ಒಳ ವ್ಯವಹಾರ ನಡೆದಿದೆಎಂದು ಆರೋಪಿಸಿದ ಯಡಿಯೂರಪ್ಪ, ಭೂಮಿ ಕೊಡುವ ನಿರ್ಧಾರ ಹಿಂದಕ್ಕೆ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಸಿದ್ದರಾಮಯ್ಯ ದೊಡ್ಡ ನಾಯಕರು. ಅವರ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ತಿಳಿಯಲು ಬರ ಅಧ್ಯಯನ ಪ್ರವಾಸವನ್ನು ಬಾದಾಮಿಯಿಂದ ಆರಂಭಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.