ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ 42 ಗ್ರಾಮಗಳಲ್ಲಿ ನಡೆಸಿದ್ದ ಗ್ರಾಮ ವಾಸ್ತವ್ಯದ ನಂತರ ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದರ ಚಿತ್ರಣ ನೀಡುವ ಪುಸ್ತಕವೊಂದನ್ನು ಇದೇ ಸೋಮವಾರ ಬಿಡುಗಡೆ ಮಾಡುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಿಜೆಪಿ ಸದಸ್ಯತ್ವ ಅಭಿಯಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯದ ನಾಟಕ ಮಾಡಿ, 42 ಗ್ರಾಮಗಳಿಗೆ ತಲಾ ₹1 ಕೋಟಿ ನೀಡುವುದಾಗಿ ಹೇಳಿ ಹಣವನ್ನೇ ಬಿಡುಗಡೆ ಮಾಡಲಿಲ್ಲ ಎಂದು ಟೀಕಿಸಿದರು.
‘ನಮ್ಮ ಸರ್ಕಾರ ಇದ್ದಾಗ, ಯಾವುದೇ ಭರವಸೆ ನೀಡದೇ ಸುವರ್ಣ ಗ್ರಾಮ ಯೋಜನೆಯಡಿ ಪ್ರತಿ ಗ್ರಾಮಗಳಿಗೆ ₹ 2 ಕೋಟಿವರೆಗೆ ಹಣ ಬಿಡುಗಡೆ ಮಾಡಿದ್ದೆವು. ಲೋಕಸಭೆ ಚುನಾವಣೆಯಲ್ಲಿ ಜನ ತಿರಸ್ಕರಿಸಿರುವುದರಿಂದ ಕುಮಾರಸ್ವಾಮಿ ಗಾಬರಿ ಬಿದ್ದು ಗ್ರಾಮ ವಾಸ್ತವ್ಯ ನಾಟಕ ಮತ್ತೆ ಆರಂಭಿಸಿದ್ದಾರೆ. ಇದರ ಉದ್ದೇಶ ಜನರ ಗಮನ ಬೇರೆಡೆ ಸೆಳೆಯುವುದಕ್ಕೆ ಮಾಡಿರುವ ಷಡ್ಯಂತ್ರ’ ಎಂದು ಯಡಿಯೂರಪ್ಪ ಹರಿಹಾಯ್ದರು.
ಒಂದು ದಿನ ಗ್ರಾಮ ವಾಸ್ತವ್ಯ ಮಾಡಿ ಎರಡನೇ ದಿನ ಮಳೆ ಬಿತ್ತು ಎಂದು ಕುಂಟು ನೆಪ ಹೇಳಿ ವಾಪಸ್ ಬಂದಿದ್ದಾರೆ. ಈ ನಾಟಕವನ್ನು ರಾಜ್ಯದ ಆರೂವರೆ ಕೋಟಿ ಜನ ನೋಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಮಳೆ ಆಗಿಲ್ಲ, ಬರಗಾಲ ತಾಂಡವಾಡುತ್ತಿದೆ. ಜನ– ಜಾನುವಾರುಗಳಿಗೆ ಕುಡಿಯುವ ನೀರು ವ್ಯವಸ್ಥೆ ಆಗಬೇಕು. ಶಿವಮೊಗ್ಗ ಸೇರಿದಂತೆ ಮಲೆನಾಡಿನ ಯಾವುದೇ ಭಾಗದಲ್ಲಿ ಮಳೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬರಪೀಡಿತ ಪ್ರದೇಶಕ್ಕೆ ಹೋಗಿ ಕುಡಿಯುವ ನೀರಿವ ವ್ಯವಸ್ಥೆ ಮಾಡುವುದರ ಬದಲು, ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದರು.
ದೋಸ್ತಿ ಪಕ್ಷಗಳಿಗೆ ಮರ್ಯಾದೆ ಇದ್ದಿದ್ದರೆ, ಲೋಕಸಭೆ ಚುನಾವಣೆ ಫಲಿತಾಂಶ ಬಂದ ತಕ್ಷಣವೇ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಜನ ಎರಡೂ ಪಕ್ಷಗಳನ್ನು ಸೋಲಿಸಿದ್ದಾರೆ. ಅಪ್ಪ ದೇವೇಗೌಡ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಿದ್ದರೆ, ಮಗ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಎನ್ನುತ್ತಿದ್ದಾರೆ. ಮೈತ್ರಿ ಸರ್ಕಾರ ಹೆಚ್ಚು ದಿನಗಳು ಉಳಿಯುವುದು ಕಷ್ಟ ಎಂದು ಯಡಿಯೂಪ್ಪ ಭವಿಷ್ಯ ನುಡಿದರು.
ಈ ಬಾರಿ ಸದಸ್ಯತ್ವ ಅಭಿಯಾನದಲ್ಲಿ 50 ಲಕ್ಷಕ್ಕೂ ಹೆಚ್ಚು ಸದಸ್ಯತ್ವ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ 171 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಉಳಿದ 43 ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತ ಪಡೆಯಲು ಸಾಧ್ಯವಾಗಿಲ್ಲ. ಇಲ್ಲಿ ಸದಸ್ಯತ್ವ ಸಂಖ್ಯೆ ಹೆಚ್ಚಿಸುವುದರ ಜತೆ, ವಿವಿಧ ಮೋರ್ಚಾಗಳಲ್ಲಿ ಆದ್ಯತೆ ನೀಡಬೇಕು ಎಂದೂ ಸಲಹೆ ನೀಡಿದರು.
‘ಭಿನ್ನರಾಗ ದ್ವಂದ್ವ ನೀತಿ ಬಿಂಬಿಸುತ್ತದೆ’
ಬಿ.ಎಸ್.ಯಡಿಯೂರಪ್ಪ ಟೀಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ’ ಎಂಬ ಕುವೆಂಪು ಅವರ ಮಾತನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಗ್ರಾಮ ವಾಸ್ತವ್ಯದ ಕುರಿತು ವಿರೋಧ ಪಕ್ಷದ ನಾಯಕರ ಟೀಕೆ ಹುರುಳಿಲ್ಲದ್ದು. ಸರ್ಕಾರ ಬರ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುತ್ತಿದೆ. ನಾನು ನಿನ್ನೆ ವಾಸ್ತವ್ಯ ಮಾಡಿದ ಗ್ರಾಮ ಬರಪೀಡಿತ ಪ್ರದೇಶವೇ ಆಗಿದೆ ಎಂದು ಹೇಳಿದ್ದಾರೆ.
ಗ್ರಾಮ ವಾಸ್ತವ್ಯದ ಮೂಲಕ ಜನರ ಸಂಕಷ್ಟಗಳನ್ನು ಅರಿತಿದ್ದೇನೆ. ಅದನ್ನು ಪರಿಹಾರವನ್ನೂ ಒದಗಿಸಲಾಗುತ್ತಿದೆ. ಪ್ರತಿಪಕ್ಷ ನಾಯಕರು ಒಂದು ಕಡೆ ಬೆನ್ನುತಟ್ಟಿ, ಮಾಧ್ಯಮಗಳ ಮುಂದೆ ಭಿನ್ನರಾಗ ಹಾಡುವುದು, ಅವರ ದ್ವಂದ್ವ ನೀತಿ ಬಿಂಬಿಸುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.