ADVERTISEMENT

ಉಪಚುನಾವಣೆ | ಮೂರು ಕ್ಷೇತ್ರಗಳಲ್ಲಿ ಗೆಲುವಿನ ವಿಶ್ವಾಸ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 16:04 IST
Last Updated 8 ನವೆಂಬರ್ 2024, 16:04 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗಳು ಮತ್ತು ಹಿಂದೂ ವಿರೋಧಿ ನಡವಳಿಕೆಗಳು ಉಪಚುನಾವಣೆ ಮೇಲೆ ಪರಿಣಾಮ ಬೀರಿದ್ದು, ಮೂರೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ  ಹೇಳಿದರು.

‘ಶಿಗ್ಗಾವಿಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಚನ್ನಪಟ್ಟಣ ಮತ್ತು ಸಂಡೂರಿನಲ್ಲಿ ನಮ್ಮ ಗೆಲುವಿನ ಸಾಧ್ಯತೆ ಹೆಚ್ಚು. ತಾವೇ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ ನಾಯಕರಿಗೆ ಈ ಎರಡೂ ಕ್ಷೇತ್ರಗಳು ಕೈತಪ್ಪಿ ಹೋಗುತ್ತವೆ ಎಂಬ ಆತಂಕ ಕಾಡಿದೆ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ಹೆಚ್ಚಿನ ಗಮನ ನೀಡಿದ್ದಾರೆ ಎಂದರು.

ADVERTISEMENT

ಡಿಕೆಶಿ ಸರ್ವಾಧಿಕಾರಿ ವರ್ತನೆ:

ತಮ್ಮ ಬಳಿ ತಗ್ಗಿ ಬಗ್ಗಿ ನಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಯನಗರ ಶಾಸಕರನ್ನು ಉದ್ದೇಶಿಸಿ ಹೇಳಿದ್ದಾರೆ. ಇದು ಶಾಸಕರು ಮಾತ್ರವಲ್ಲ ಕ್ಷೇತ್ರದ ಜನರಿಗೆ ಮಾಡಿರುವ ಅಪಮಾನ ಎಂದು ವಿಜಯೇಂದ್ರ ಕಿಡಿಕಾರಿದರು.

‘ಡಿ.ಕೆ.ಶಿವಕುಮಾರ್‌ ಅವರಲ್ಲಿರುವ ದರ್ಪ ಅವರನ್ನು ಈ ರೀತಿ ಮಾತನಾಡಿಸಿದೆ. ಜಯನಗರದ ಜನತೆ ಏನು ತಪ್ಪು ಮಾಡಿದ್ದಾರೆ. ಅಲ್ಲಿ ಬಿಜೆಪಿ ಶಾಸಕರು ಇರುವುದು ತಪ್ಪಾ? ಅನುದಾನ ಕೇಳಿದ್ದು ತಪ್ಪಾ? ಪ್ರಜಾಪ್ರಭುತ್ವದಲ್ಲಿ ಟೀಕೆ ಮಾಡಬಾರದೇ? ಶಾಸಕರು ಮತ್ತು ಜನರು ತಗ್ಗಿಬಗ್ಗಿ ನಡೆಯಬೇಕಾ’ ಎಂದು ಅವರು ಪ್ರಶ್ನಿಸಿದರು.

ಉಪಮುಖ್ಯಮಂತ್ರಿ ಅವರಿಗೆ ಅವರ ಮಾತಿನ ಮೇಲೆ ಹಿಡಿತ ಇರಲಿ. ವಿರೋಧ ಪಕ್ಷಗಳ ಶಾಸಕರ ಮೇಲಿನ ದಬ್ಬಾಳಿಕೆ ಸಹಿಸುವುದಿಲ್ಲ. ಈ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದರು.

‘ಇನ್ನು ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.  ಶಾಸಕರು ಗಾಬರಿ ಆಗಬಾರದು ಎಂಬ ಕಾರಣಕ್ಕೆ ಮತ್ತು ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಹೇಳಿದರು.

ವಕ್ಫ್‌ ನೋಟಿಸ್‌ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಹೇಳಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ‘ಇಂತಹ ಮಣ್ಣು ತಿನ್ನುವ ಕೆಲಸ ಏಕೆ ಮಾಡಬೇಕು. ರೈತರ ಆಸ್ತಿಯನ್ನು ವಕ್ಫ್‌ ಹೆಸರಲ್ಲಿ ಕಬಳಿಸಲು ಜಮೀರ್ ಅಹ್ಮದ್ ಖಾನ್ ಅವರನ್ನು ಏಕೆ ಬಿಟ್ಟಿದ್ದು? ರೈತರ ಜೀವನಕ್ಕೆ ಕೊಳ್ಳಿ ಇಡುವ ಕೆಲಸವನ್ನು ಏಕೆ ಮಾಡಿದ್ದಾರೆ’ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.