ಬೆಂಗಳೂರು:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವಾರ ಕಳೆದರೂ ಮುಖ್ಯಮಂತ್ರಿ ಹೊರತು ಸಂಪುಟ ದರ್ಜೆಯ ಯಾವುದೇ ಸಚಿವರಿಲ್ಲದೆ, ಇಲಾಖೆಗಳಿಗೆ ನೇತೃತ್ವವಿಲ್ಲದೆ ಅನಾಥವಾಗಿವೆ. ಸರ್ಕಾರದಲ್ಲಿ ಎಲ್ಲ ನಿರ್ಧಾರಗಳ ಹೊಣೆ ಮತ್ತು ಅಧಿಕಾರದ ಕೇಂದ್ರ ಬಿ.ಎಸ್.ಯಡಿಯೂರಪ್ಪ ಮಾತ್ರ. ದಿನ ಉರುಳುತ್ತಿದ್ದಂತೆ ಯಡಿಯೂರಪ್ಪ ಅವರ ಮೇಲೆ ಪ್ರತಿಪಕ್ಷಗಳ ಒತ್ತಡ ಹೆಚ್ಚುತ್ತಿದೆ.
ಸಂಪುಟ ಸಚಿವರು ಇಲ್ಲದೆಯೇಅಧಿಕಾರಿಗಳೊಂದಿಗೆ ಸಭೆ, ಸಂಪುಟ ಸಭೆಗಳನ್ನು ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಏಕವ್ಯಕ್ತಿ ಪ್ರದರ್ಶನದೊಂದಿಗೆ ಸರ್ಕಾರ ಮುನ್ನಡೆಸುತ್ತಿದ್ದಾರೆ. ಇದೇ ಕಾರಣದಿಂದಾಗಿ ಪಕ್ಷದ ಒಳಗೆ ಹಾಗೂ ಹೊರಗಿನಿಂದ ಅವರ ಮೇಲೆ ಒತ್ತಡ ಏರುತ್ತಿದೆ. ಇದರ ನಿವಾರಣೆಗಾಗಿ ಮುಂದಿನ ವಾರವೇ ನವದೆಹಲಿಗೆ ಹಾರಲಿರುವ ಅವರು, ಕೇಂದ್ರದ ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲಿಯೇ ಸಂಪುಟ ವಿಸ್ತರಣೆಗೆ ಅಂತಿಮ ಪಟ್ಟಿಯೂ ಸಿದ್ಧಗೊಳ್ಳಲಿದೆ ಎನ್ನಲಾಗುತ್ತಿದೆ.
ಉಪಮುಖ್ಯಮಂತ್ರಿ ಸ್ಥಾನದ ಸಂಭಾವ್ಯರೆಂದೇ ಬಿಂಬಿತರಾಗಿರುವ ಬಿಜೆಪಿಯ ಮಾಜಿ ಸಚಿವ ಬಿ.ಶ್ರೀರಾಮುಲು ಸಂಪುಟ ವಿಸ್ತರಣೆಗೂ ಮುನ್ನ ಮುಂದಿರುವ ಸವಾಲಿನ ಕುರಿತು ಮಾತನಾಡಿದ್ದಾರೆ. ’ಅನರ್ಹಗೊಂಡಿರುವ 17 ಶಾಸಕರು ಹಾಗೂ ಪಕ್ಷದಲ್ಲಿನ ಹಿರಿಯ ಮುಖಂಡರನ್ನು ಸಮಾಧಾನಗೊಳಿಸುವಂತಹ ಸೂಕ್ತ ನಡೆಯನ್ನು ಪಕ್ಷ ಸಾಧಿಸಬೇಕಿದೆ. ಪಕ್ಷದಲ್ಲಿ ಬಹಳಷ್ಟು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ, ಹಾಗೇ ಬಂಡಾಯ ಶಾಸಕರನ್ನೂ ಪರಿಗಣಿಸಬೇಕಿದೆ. ಏಕೆಂದರೆ, ಅವರು ನಮಗೆ ಸಹಕರಿಸಿದ್ದಾರೆ. ಪಕ್ಷದ ಹಿರಿಯರನ್ನು ಹೇಗೆ ಪರಿಗಣಿಸಲಿದ್ದಾರೆ ಎಂಬುದನ್ನು ಪಕ್ಷದ ಮುಖಂಡರು ನಿರ್ಧರಿಸಲಿದ್ದಾರೆ’ ಎಂದಿದ್ದಾರೆ.
ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ’ಹೌದು. ನನ್ನನ್ನು ಉಪಮುಖ್ಯಮಂತ್ರಿಯಂತೆ ಬಿಂಬಿಸಲಾಗಿತ್ತು. ಆದರೆ, ಇವತ್ತಿನ ಪರಿಸ್ಥಿತಿಯಲ್ಲಿ ಪಕ್ಷದ ಮುಖಂಡರು ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಹೇಳಿದ್ದಾರೆ.
ಸಂಪುಟ ವಿಸ್ತರಣೆ ವಿಳಂಬಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಹಗ್ಗಜಗ್ಗಾಟವೇ ಕಾರಣ ಎಂದು ಕಾಂಗ್ರೆಸ್ ವಿಶ್ಲೇಷಿಸುತ್ತಿದೆ. 'ಹಿಂಬಾಗಿಲ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ,ಎಲ್ಲಿ ನಿಮ್ಮ ಸಚಿವ ಸಂಪುಟ? ಆರ್‌ಎಸ್‌ಎಸ್‌ಮತ್ತು ಬಿಜೆಪಿಯ ಅಧಿಕಾರ ಹಂಚಿಕೆಯ ಕಿತ್ತಾಟಕ್ಕೆ ರಾಜ್ಯದ ಜನತೆಗೆ ಏಕೆ ತೊಂದರೆ ಕೊಡುತ್ತಿರುವಿರಿ? ಆಡಳಿತ ಯಂತ್ರವನ್ನು ಸ್ಥಗಿತಗೊಳಿಸಿರುವಿರೇಕೆ? ಮಂತ್ರಿಗಳಿಗಾಗಿ, ಅಭಿವೃದ್ಧಿಯ ಕೆಲಸಗಳಿಗಾಗಿ ಜನತೆ ಇನ್ನೆಷ್ಟು ದಿನ ಕಾಯಬೇಕು?’ ಎಂದು ಕಾಂಗ್ರೆಸ್ ಟ್ವೀಟಿಸಿದೆ.
'ಬಿಜೆಪಿ ಅಧಿಕಾರಕ್ಕೆ ಬಂದು ವಾರ ಕಳೆದಿದೆ. ಸಚಿವ ಸಂಪುಟ ರೂಪಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕರ್ನಾಟಕ ಇನ್ನೆಷ್ಟು ದಿನ ಬಿಜೆಪಿ ಸಂಪುಟಕ್ಕಾಗಿ ಕಾಯಬೇಕೋ...' ಎಂದು ಕಾಂಗ್ರೆಸ್ ಮಾಜಿ ಸಚಿವ ಕೃಷ್ಣ ಬೈರೇಗೌಡ ದನಿಗೂಡಿಸಿದ್ದಾರೆ.
ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷ ಸಹ ಯಡಿಯೂರಪ್ಪ ವಿರುದ್ಧ ಗುಡುಗಿದೆ. ’ರಾಜ್ಯದಾದ್ಯಂತ ಬರ ಹಾಗೂ ಕೆಲವೆಡೆ ನೆರೆಯ ಪರಿಸ್ಥಿತಿ ಇದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಂದು ವಾರವಾದರೂ ಮಂತ್ರಿಮಂಡಲವನ್ನೂ ರಚಿಸದೇ ಕಾಲಹರಣ ಮಾಡುವ ಮೂಲಕ ಸರ್ಕಾರದ ಆಡಳಿತ ಯಂತ್ರವನ್ನೇ ಸ್ಥಗಿತಗೊಳಿಸಲು ಮುಂದಾಗಿದ್ದಾರೆ. ರಾಜ್ಯದ ಜನಸಾಮಾನ್ಯರ ಪಾಲಿಗೆ ಇದು ಒಂಥರಾ 'ಅತೃಪ್ತ ಆತ್ಮಗಳ' ಸರ್ಕಾರವಾಗಿದೆ’ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.