ADVERTISEMENT

ಬಜೆಟ್ ಖಚಿತ: ರಾಜಕೀಯ ಅನಿಶ್ಚಿತ, ಬಜೆಟ್‌ ಮಂಡನೆಗೆ ಮುನ್ನವೇ ಶಾಸಕರ ರಾಜೀನಾಮೆ?

ಕೈ–ದಳ ಶಾಸಕಾಂಗ ಪಕ್ಷದ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 4:49 IST
Last Updated 8 ಫೆಬ್ರುವರಿ 2019, 4:49 IST
   

ಬೆಂಗಳೂರು: ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ತಾರ್ಕಿಕ ಅಂತ್ಯ ತಲುಪಿಸುತ್ತೇವೆ ಎಂಬ ದೃಢ ನಿಶ್ಚಯ ಬಿಜೆಪಿ ನಾಯಕರದಾಗಿದ್ದರೆ, ‘ಆ‍ಪರೇಷನ್‌ ಕಮಲ’ ವಿಫಲಗೊಳಿಸುವೆ ಎಂಬ ಸಂಕಲ್ಪ ತೊಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜನಪ್ರಿಯ ಬಜೆಟ್‌ ಮಂಡಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕರು ಹತ್ತು ಹಲವು ಸಲ ಎಚ್ಚರಿಕೆ ನೀಡಿದ ಬಳಿಕವೂ ನಾಲ್ವರು ಅತೃಪ್ತ ಶಾಸಕರು ವಿಧಾನಸೌಧದತ್ತ ಮುಖ ಮಾಡಿಲ್ಲ. ಗುರುವಾರದ ಕಲಾಪಕ್ಕೆ ಆಡಳಿತ ಪಕ್ಷಗಳ 9 ಶಾಸಕರು ಗೈರಾಗಿದ್ದರು. ಈ ನಡುವೆ, ಕುಮಾರಸ್ವಾಮಿ ಅವರು ಮೈತ್ರಿಕೂಟದ 23 ಕ್ಕೂ ಹೆಚ್ಚು ಶಾಸಕರನ್ನು ಕರೆಸಿಕೊಂಡು ಸರ್ಕಾರ ಉಳಿಸಿಕೊಳ್ಳುವ ಕಾರ್ಯತಂತ್ರ ಹೆಣೆದರು. ಅತೃಪ್ತರ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಪ್ರತಾಪ ಗೌಡ ಪಾಟೀಲ, ಭೀಮಾ ನಾಯ್ಕ, ಬಸವರಾಜ ದದ್ದಲ್‌ ಅವರೊಂದಿಗೆ ಆಪ್ತವಾಗಿ ಮಾತನಾಡಿ ಸಮಾಧಾನಪಡಿಸಿದರು.

ತಮ್ಮ ಜತೆಗೆ ನಂಟು ಹೊಂದಿರುವ ಅತೃಪ್ತ ಶಾಸಕರ ಗುಂಪಿನ ಬಲ 10ಕ್ಕೆ ಏರಲಿದೆ. ಮೊದಲ ಕಂತಿನಲ್ಲಿ ನಾಲ್ವರು ಶಾಸಕರು ಬಜೆಟ್‌ ಮಂಡನೆಗೆ ಮುನ್ನವೇ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ನಾಯಕರು ಅಮಿತ ವಿಶ್ವಾಸ ವ್ಯಕ್ತಪಡಿಸಿದರು. ಬಜೆಟ್‌ ಮಂಡನೆಗೆ ಮುನ್ನ ಬೆಳಿಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪತ್ರಿಕಾಗೋಷ್ಠಿ ಕರೆದಿದ್ದು, ‘ಕೈ’ ನಾಯಕರಿಗೆ ಸಡ್ಡು ಹೊಡೆದಿರುವ ಶಾಸಕರು ಈ ವೇಳೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಅವರಿಗೆ ಆಘಾತ ನೀಡುವುದು ಕಾರ್ಯತಂತ್ರದ ಭಾಗ ಎನ್ನಲಾಗುತ್ತಿದೆ.

ADVERTISEMENT

‘ಬಿಜೆಪಿ ನಾಯಕರು ಮುಂಬೈನಲ್ಲಿ ಕೂಡಿಹಾಕಿರುವ ನಮ್ಮ ನಾಲ್ವರ ಶಾಸಕರು ಬಜೆಟ್ ಮಂಡಿಸುವಾಗ ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ. ಯಡಿಯೂರಪ್ಪನವರ 25 ದಿನಗಳ ಪ್ರಯತ್ನ ಮಣ್ಣುಪಾಲಾಗಲಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದರು. ಮೊದಲಿನಿಂದಲೂ ಈ ಗುಂಪಿನಲ್ಲಿ ನಾಲ್ಕು ಜನರಷ್ಟೇ ಇದ್ದಾರೆ. ಬಿ.ಸಿ.ಪಾಟೀಲ, ಸುಧಾಕರ್‌ ಅವರ ಮನವೊಲಿಸುತ್ತೇವೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಗುರುವಾರ ಬೆಳಿಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದಿವೆ. ಒಂದು ವೇಳೆ ಸಭೆಗೆ ಹಾಜರಾಗದಿದ್ದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಪಕ್ಷಾಂತರ ನಿಷೇಧ ಕಾನೂನಿನಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.

ಮೈತ್ರಿಗೆ ಆತಂಕ ತಂದಿರುವವರು

ಕಾಂಗ್ರೆಸ್‌ ಶಾಸಕರು

* ರಮೇಶ ಜಾರಕಿಹೊಳಿ (ಗೋಕಾಕ)

* ಮಹೇಶ ಕುಮಟಳ್ಳಿ (ಅಥಣಿ)

* ಡಾ. ಉಮೇಶ ಜಾಧವ (ಚಿಂಚೋಳಿ)

* ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ)

* ಬಿ.ಸಿ.ಪಾಟೀಲ (ಹಿರೇಕೆರೂರ)

* ಜೆ.ಎನ್. ಗಣೇಶ್(ಕಂಪ್ಲಿ)

ಜೆಡಿಎಸ್‌ ಶಾಸಕರು

* ಕೆ.ಸಿ.ನಾರಾಯಣ ಗೌಡ (ಕೆ.ಆರ್‌.ಪೇಟೆ)

* ದೇವಾನಂದ ಚವ್ಹಾಣ (ನಾಗಠಾಣ)

ಪಕ್ಷೇತರರು

* ಆರ್‌.ಶಂಕರ್‌

(ರಾಣೆಬೆನ್ನೂರು)

* ಎಚ್‌.ನಾಗೇಶ್‌

(ಮುಳಬಾಗಿಲು)

ಜೆಡಿಎಸ್‌–ಕಾಂಗ್ರೆಸ್ ನಡೆ ಏನು?

* ಬಜೆಟ್‌ ಮಂಡನೆ ವೇಳೆ ಬಿಜೆಪಿ ಶಾಸಕರು ಗಲಾಟೆ ಮಾಡಿದರೆ ಅವರನ್ನು ಸದನದಿಂದ ಅಮಾನತು ಮಾಡಿಸುವುದು

* ಬಜೆಟ್‌ಗೆ ಅಂಗೀಕಾರ ಆಗುವವರೆಗೆ ಸದನಕ್ಕೆ ಬಾರದಂತೆ ತಡೆಯುವುದು.

* ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೆ, ಬಿಜೆಪಿಯ 3–4 ಶಾಸಕರಿಂದ ರಾಜೀನಾಮೆ ಕೊಡಿಸಿ ಅವರ ಬಲ ಕುಗ್ಗಿಸುವುದು

* ಶಾಸಕಾಂಗ ಪಕ್ಷದ ಸಭೆಗೆ ಗೈರಾಗುವವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ದೂರು

ಬಿಜೆಪಿ ನಡೆಯೇನು?

* ಬಜೆಟ್‌ ಮಂಡನೆ ವೇಳೆ 20 ನಿಮಿಷಗಳು ಧರಣಿ ನಡೆಸುವುದು. ಬಳಿಕ ಕುಮಾರಸ್ವಾಮಿ ಬಜೆಟ್‌ ಭಾಷಣ ಆಲಿಸುವುದು

* ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸುವುದು

* ಬಜೆಟ್‌ಗಿಂತ ಶಾಸಕರ ರಾಜೀನಾಮೆಯೇ ಸುದ್ದಿಯಾಗುವಂತೆ ಮಾಡುವುದು

* ಶಾಸಕರ ರಾಜೀನಾಮೆಯನ್ನು ಸಭಾಧ್ಯಕ್ಷರು ಅಂಗೀಕರಿಸದಿದ್ದರೆ ರಾಜ್ಯಪಾಲರ ಎದುರು ಪರೇಡ್‌ ಮಾಡಿಸುವುದು.

ಧೈರ್ಯವಿದ್ದರೆ ಅವಿಶ್ವಾಸ ಮಂಡಿಸಲಿ: ಕುಮಾರಸ್ವಾಮಿ ಸವಾಲು

‘ಬಿಜೆಪಿಯವರು ಗೋ ಬ್ಯಾಕ್ ಎಂದು ಕೂಗುವುದನ್ನು ಬಿಟ್ಟು, ಧೈರ್ಯವಿದ್ದರೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪಂಥಾಹ್ವಾನ ನೀಡಿದರು.

ಕಲಾಪ ಮುಂದೂಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಮ್ಮ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿಯವರು ಟೀಕಿಸುತ್ತಿದ್ದಾರೆ. ಅವರ ಜತೆ ಅಷ್ಟು ಶಾಸಕರಿದ್ದರೆ ಅವಿಶ್ವಾಸ ಮಂಡಿಸಲಿ ಅಥವಾ ವಿಶ್ವಾಸ ಮತ ಸಾಬೀತುಪಡಿಸಿ ಎಂದು ನನಗಾದರೂ ಹೇಳಲಿ. ನಾನು ವಿಶ್ವಾಸ ಮತ ಸಾಬೀತುಪಡಿಸಲು ಸಿದ್ಧನಿದ್ದೇನೆ’ ಎಂದು ಸವಾಲು ಎಸೆದರು.

‘ರಾಜ್ಯಪಾಲರು ಭಾಷಣ ಮಾಡುವಾಗ ಧರಣಿ ನಡೆಸುವುದು, ಬಜೆಟ್‌ ಮಂಡನೆ ಮಾಡುವಾಗ ಪ್ರತಿಭಟನೆ ನಡೆಸುವುದು ಪ್ರಜಾತಂತ್ರ ವಿರೋಧಿ ಕ್ರಮ. ಸರ್ಕಾರದ ನಡೆ ಸರಿಯಿಲ್ಲ ಎಂದಾದರೆ ಚರ್ಚೆ ಮಾಡಲು ಸಾಕಷ್ಟು ಅವಕಾಶ ಇದೆ. ಆದರೆ ಮುಖತಃ ಚರ್ಚೆ ಮಾಡಲು ಅವರು ತಯಾರಿಲ್ಲ. ಸುಮ್ಮನೆ ಕೂಗುವುದು ಅವರಿಗೆ ಪರಿಪಾಠವಾಗಿದೆ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.