ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ಜಿಲ್ಲೆಯ ಜನತೆಗೆ ನಿರಾಸೆ ಮೂಡಿಸಿದೆ. ತವರು ಜಿಲ್ಲೆ ಹಾವೇರಿಗೆ ಭರಪೂರ ಯೋಜನೆಗಳನ್ನು ಪ್ರಕಟಿಸಿರುವ ಅವರು ಪಕ್ಕದ ಗದಗ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತೋರಿದ್ದಾರೆ. ಕೈಗಾರಿಕೆ, ಕೃಷಿ, ನೀರಾವರಿ, ಪ್ರವಾಸೋದ್ಯಮ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಸಾಕಷ್ಟು ಅನುದಾನ ಮತ್ತು ಹೊಸ ಯೋಜನೆಗಳು ಘೋಷಣೆ ಆಗಬಹುದು ಎಂಬ ಜಿಲ್ಲೆಯ ಜನರ ನಿರೀಕ್ಷೆಗಳು ಹುಸಿಯಾಗಿವೆ.
ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳಿಗೆ ಮಹದಾಯಿ ನ್ಯಾಯಾಧೀಕರಣದಿಂದ ಹಂಚಿಕೆಯಾದ 3.90 ಟಿಎಂಸಿ ಅಡಿ ನೀರಿನ ಬಳಕೆಗಾಗಿ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದಿಂದ ಕೆಲವು ತಿಂಗಳ ಹಿಂದೆ ಅನುಮೋದನೆ ಸಿಕ್ಕಿತ್ತು. ಈ ಬಾರಿಯ ಬಜೆಟ್‌ನಲ್ಲಿ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ಘೋಷಣೆ ಆಗುತ್ತದೆ ಎಂಬ ನಿರೀಕ್ಷೆ ಅಧಿಕವಾಗಿತ್ತು.
ಆದರೆ, ಡಿಪಿಆರ್‌ಗೆ ಅನುಮೋದನೆ ಒದಗಿಸಿದ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಗೆ ಧನ್ಯವಾದ ಸಲ್ಲಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಈ ಯೋಜನೆಯ ಕಾಮಗಾರಿ ಪ್ರಾರಂಭಿಸಲು ₹1000 ಕೋಟಿ ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದಷ್ಟೇ ಹೇಳಿದ್ದಾರೆ.
ತಾಲ್ಲೂಕು ಆಸ್ಪತ್ರೆ ಇಲ್ಲದ ಸಮುದಾಯ ಆರೋಗ್ಯ ಕೇಂದ್ರಗಳನ್ನು 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನಾಗಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸುವ ಯೋಜನೆ ಪ್ರಕಟಿಸಿದ್ದು, ಅದರಲ್ಲಿ ಶಿರಹಟ್ಟಿ ಕೂಡ ಸೇರಿದೆ.
‘ಶಿರಹಟ್ಟಿಯಲ್ಲಿ ಈಗಾಗಲೇ ತಾಲ್ಲೂಕು ಆಸ್ಪತ್ರೆ ಇದೆ. ಶಿರಹಟ್ಟಿಯಿಂದ ಬೇರ್ಪಟ್ಟು ಹೊಸ ತಾಲ್ಲೂಕು ಆಗಿರುವ ಲಕ್ಷ್ಮೇಶ್ವರ ಹಾಗೂ ರೋಣದಿಂದ ಬೇರ್ಪಟ್ಟು ಹೊಸ ತಾಲ್ಲೂಕು ಕೇಂದ್ರ ಆಗಿರುವ ಗಜೇಂದ್ರಗಡದಲ್ಲಿ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರಗಳೇ ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ಉದಯಿಸಿದ ತಾಲ್ಲೂಕು ಕೇಂದ್ರಗಳ ಅಭಿವೃದ್ಧಿಗೆ ಈವರೆಗೂ ಅನುದಾನ ಸಿಕ್ಕಿಲ್ಲ. ತಾಲ್ಲೂಕು ಕೇಂದ್ರಗಳಲ್ಲಿ ಇರಬೇಕಾದ ಪೂರ್ಣ ಪ್ರಮಾಣದ ಕಚೇರಿಗಳು ಇನ್ನೂ ಆರಂಭಗೊಂಡಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಹೊಸ ತಾಲ್ಲೂಕುಗಳ ಅಭಿವೃದ್ಧಿ ಅನುದಾನ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ’ ಎಂದು ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ (ಪಿಎಂ–ಎಬಿಎಚ್‌ಐಎಂ) ಅಡಿಯಲ್ಲಿ ತೃತೀಯ ಹಂತದ ಆರೈಕೆಯನ್ನು ಒದಗಿಸಲು ಗದಗ ಜಿಲ್ಲಾ ಆಸ್ಪತ್ರೆಯಲ್ಲಿ 50 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪಿಸುವುದಾಗಿ ಸಿಎಂ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಗದಗ ಜಿಲ್ಲೆಯ ಒಟ್ಟಾರೆ ಆರೋಗ್ಯ ಸೌಲಭ್ಯ ವ್ಯವಸ್ಥೆಗೆ ಈ ಬಜೆಟ್‌ನಲ್ಲಿಯಾದರೂ ಬೂಸ್ಟರ್ ಡೋಸ್ ಸಿಗಬಹುದು ಎಂಬ ನಿರೀಕ್ಷೆ ಕೂಡ ಸುಳ್ಳಾಗಿದೆ.
ಉಳಿದಂತೆ, ಗದಗ ವಾಡಿ ರೈಲ್ವೆ ಮಾರ್ಗಕ್ಕೆ ₹200 ಕೋಟಿಯನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಲಾಗಿದೆ. ಇದಲ್ಲದೇ, ಗದಗ– ಹೂಟಗಿ ಮಾರ್ಗದ ಡಬ್ಲಿಂಗ್ ಕಾಮಗಾರಿಗೆ ₹170 ಕೋಟಿ ಒದಗಿಸಲಾಗುತ್ತಿದ್ದು, ರಾಜ್ಯ ಸರ್ಕಾರದ ಪಾಲನ್ನು ನೀಡುವುದಾಗಿ ಘೋಷಿಸಿದ್ದಾರೆ. ಜತೆಗೆ ಗದಗ ನಗರದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗೆ ವಿಫುಲ ಅವಕಾಶಗಳಿದ್ದವು. ಜತೆಗೆ ಕೈಗಾರಿಕೆ, ಜವಳಿ ಪಾರ್ಕ್, ಫುಡ್ ಪಾರ್ಕ್, ಪ್ರವಾಸೋದ್ಯಮ ಹೀಗೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸಿಗುತ್ತದೆ ಎಂದು ಜನರು ಕಾದಿದ್ದರು. ಆದರೆ, ಗದಗ ಜಿಲ್ಲೆಯ ಜನರ ನೀರಿಕ್ಷೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ತಣ್ಣೀರು ಎರಚಿದ್ದಾರೆ.
ಗದಗ ಜಿಲ್ಲೆಗೆ ನಾಮ ಎಳೆದ ಬಜೆಟ್: ಗೋವಿಂದಗೌಡ್ರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ಬಜೆಟ್ ಗದಗ ಜಿಲ್ಲೆಯ ಪಾಲಿಗೆ ಬಹಳ ನಿರಾಶಾದಾಯಕವಾಗಿದೆ. ಜಿಲ್ಲೆಗೆ ಪ್ರತಿ ಬಾರಿಯೂ ರೈಲ್ವೆ ಯೋಜನೆಯ ಹಣ ಮೀಸಲಿಟ್ಟು ಮುಗ್ದ ಗದಗ ಜನತೆಗೆ ನಾಮ ಎಳೆಯುವ ಕೆಲಸ ಮಾಡಿದ್ದಾರೆ ಎಂದು ಜೆ.ಡಿ.ಎಸ್ ಮುಖಂಡ ವೆಂಕನಗೌಡ ಆರ್. ಗೋವಿಂದಗೌಡ್ರ ಟೀಕಿಸಿದ್ದಾರೆ.
ಗದಗ ಜಿಲ್ಲೆಗೆ ಯಾವುದೇ ಕೈಗಾರಿಕೆಗಳ ಪ್ರಸ್ತಾಪವಿಲ್ಲ. ಈಚೆಗೆ ಲಕ್ಕುಂಡಿಯಲ್ಲಿ ನಡೆದ ಲಕ್ಕುಂಡಿ ಉತ್ಸವ ಉದ್ಘಾಟಿಸಿದ ಮುಖ್ಯಮಂತ್ರಿಗಳು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಭರವಸೆಯ ಹೊಳೆಯನ್ನೇ ಹರಿಸಿದ್ದರು. ಆದರೆ ಈ ಬಜೆಟ್‌ನಲ್ಲಿ ಗದಗ ಜಿಲ್ಲೆಯ ಪ್ರವಾಸೋದ್ಯಮದ ಬಗ್ಗೆ ಚಕಾರ ಎತ್ತಿಲ್ಲ. ಹೀಗಾಗಿಯೇ ನಮ್ಮ ಜಿಲ್ಲೆ ಹಿಂದುಳಿದಿದೆ’ ಎಂದು ಕಿಡಿಕಾರಿದ್ದಾರೆ.
‘ಗದಗ ಜಿಲ್ಲೆಗೆ ಬಜೆಟ್‌ನಲ್ಲಿ ಏನೂ ಸಿಗದಿರುವುದಕ್ಕೆ ಜಿಲ್ಲೆಯ ನಾಯಕರ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಒಟ್ಟಾರೆ ರಾಜ್ಯ ಸರ್ಕಾರ ಗದಗ ಜಿಲ್ಲೆಯ ಜನತೆಯನ್ನು ಕೈ ಬಿಟ್ಟಿದೆ. ನಮ್ಮ ಜಿಲ್ಲೆಯ ಪರಿಸ್ಥಿತಿ ನೋಡಿದರೆ ವಿಶೇಷ ಪ್ಯಾಕೇಜ್ ನೀಡಬೇಕಾಗಿತ್ತು. ಎಲ್ಲ ಬಜೆಟ್‌ಗಳಲ್ಲಿ ರೈಲ್ವೆ ಯೋಜನೆಗಳ ಪ್ರಸ್ತಾಪ ಬಿಟ್ಟರೆ ಏನೂ ಆಗಿಲ್ಲ. ಜನ ತಕ್ಕಪಾಠ ಕಲಿಸುತ್ತಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.