ADVERTISEMENT

ಬಸ್‌ ಪ್ರಯಾಣದರ ಹೆಚ್ಚಳ | ಪ್ರಸ್ತಾವದ ನಂತರ ನಿರ್ಧಾರ: ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:49 IST
Last Updated 19 ಜೂನ್ 2024, 15:49 IST
<div class="paragraphs"><p>ರಾಮಲಿಂಗಾರೆಡ್ಡಿ</p></div>

ರಾಮಲಿಂಗಾರೆಡ್ಡಿ

   

ಬೆಂಗಳೂರು: ‘ನಾಲ್ಕು ಸಾರಿಗೆ ನಿಗಮಗಳಿಂದ ಪ್ರಯಾಣ ದರ ಪ್ರಸ್ತಾವ ಬಂದಮೇಲೆ ಆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬಿಎಂಟಿಸಿ ಬಸ್‌ ಪ್ರಯಾಣ ದರ 2014ರಲ್ಲಿ ಹೆಚ್ಚಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಸೇರಿದಂತೆ ಉಳಿದ ಮೂರು ನಿಗಮಗಳ ಬಸ್‌ ಪ್ರಯಾಣ ದರ 2020ರಲ್ಲಿ ಏರಿಸಲಾಗಿತ್ತು. ಆ ವರ್ಷಗಳಿಗೆ ಹೋಲಿಸಿದರೆ ಡೀಸೆಲ್‌ ದರ, ಸಿಬ್ಬಂದಿ ವೇತನ ಸೇರಿದಂತೆ ನಿರ್ವಹಣೆ ವೆಚ್ಚವೆಲ್ಲ ಹೆಚ್ಚಾಗಿದೆ. ಬಿಎಂಟಿಸಿ ಸೇರಿ ನಾಲ್ಕೂ ನಿಗಮಗಳು ಈವರೆಗೆ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ. ಅವರು ಮಂಡಳಿ ಸಭೆ ನಡೆಸಿ ಅಲ್ಲಿಂದ ಪ್ರಸ್ತಾವ ಬಂದರೆ, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸುದ್ದಿಗಾರರಿಗೆ ಬುಧವಾರ ಮಾಹಿತಿ ನೀಡಿದರು.

ADVERTISEMENT

ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆ: ವಾಹನಗಳಿಗೆ ‘ಅತಿ ಭದ್ರತೆಯ ನೋಂದಣಿ ಫಲಕ’ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳುವ ಅವಧಿಯನ್ನು ಸೆಪ್ಟೆಂಬರ್‌ 15ರವರೆಗೆ ವಿಸ್ತರಿಸಲಾಗಿದೆ. ಅದರ ನಂತರ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

‘ಕೇಂದ್ರ ಸರ್ಕಾರ ಮಾಡಿರುವ ತೀರ್ಮಾನ ಇದಾಗಿದ್ದು, ನಾವು ಅನುಷ್ಠಾನಗೊಳಿಸುತ್ತಿದ್ದೇವೆ. ವಾಣಿಜ್ಯ ವಾಹನಗಳು ಸದೃಢ ಪ್ರಮಾಣಪತ್ರ (ಎಫ್‌ಸಿ) ಪಡೆಯಲು ಪ್ರತಿ ವರ್ಷ ಬರಬೇಕಾಗುತ್ತದೆ. ಆಗ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಪ್ರಯಾಣಿಕ ವಾಹನಗಳ ಮಾಲೀಕರು ಅವರೇ ಅಳವಡಿಸಿಕೊಳ್ಳಬೇಕು. ಒಟ್ಟಾರೆ ಶೇ 25ರಷ್ಟು ವಾಹನಗಳ ಮಾಲೀಕರು ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದಾರೆ’ ಎಂದು ಹೇಳಿದರು.

ಸಾರ್ವಜನಿಕ ಸೇವಾ ವಾಹನಗಳಿಗೆ ‘ವೆಹಿಕಲ್‌ ಟ್ರ್ಯಾಕಿಂಗ್‌ ಡಿವೈಸ್’ ಮತ್ತು ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಕೆ ಯೋಜನೆಯನ್ನು ನಿರ್ವಹಿಸುವ ‘ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟ್ರರ್‌’ ಅನ್ನು ಸಚಿವರು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.