ADVERTISEMENT

ಕ್ರಿಸ್‌ಮಸ್‌ ಹಬ್ಬದ ಸಾಲು ಸಾಲು ರಜೆ: ಬಸ್ ಪ್ರಯಾಣ ದುಬಾರಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 22:30 IST
Last Updated 21 ಡಿಸೆಂಬರ್ 2022, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕ್ರಿಸ್‌ಮಸ್‌ ಹಬ್ಬದ ಸಾಲು ಸಾಲು ರಜೆಗಳಲ್ಲಿ ಪ್ರವಾಸಕ್ಕೆ ತೆರಳುವ ಯೋಚನೆಯಲ್ಲಿ ಇರುವವರಿಗೆ ಖಾಸಗಿ ಬಸ್ ಪ್ರಯಾಣ ದರಏರಿಕೆ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳ ದರಕ್ಕೆ ಹೋಲಿಸಿದರೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು,
ವಿಮಾನ ಪ್ರಯಾಣದಷ್ಟೇ ದುಬಾರಿಯಾಗಿದೆ.

ಕ್ರಿಸ್‌ಮಸ್ ಪ್ರಯುಕ್ತ ಮುಂದಿನ ವಾರ ಬಹುತೇಕ ಖಾಸಗಿ ಶಾಲೆಗಳಿಗೆ ರಜೆ ಇದ್ದು, ಹೊರ ಊರುಗಳಿಗೆ ತೆರಳಲು ಖಾಸಗಿ ಬಸ್‌ಗಳನ್ನು ಹತ್ತಲು ಮುಂದಾದವರು ಪ್ರಯಾಣ ದರ ನೋಡಿ ಗಾಬರಿಗೊಳ್ಳುತ್ತಿದ್ದಾರೆ. ಹಬ್ಬ ಮತ್ತು ಸರ್ಕಾರಿ ರಜೆಗಳ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳವಾಗದಂತೆಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದರು. ಈ ಸಂಬಂಧ ಬಸ್‌ ಮಾಲೀಕರ ಸಭೆಗಳನ್ನೂ ನಡೆಸಿ ಸಾರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಅದ್ಯಾವುದಕ್ಕೂ ಕಿಮ್ಮತ್ತು ನೀಡದ ಖಾಸಗಿ ಬಸ್ ಆಪರೇಟರ್‌ಗಳು ಮನಸೋಇಚ್ಛೆ ಪ್ರಯಾಣ ದರ ಹೆಚ್ಚಳ ಮಾಡಿದ್ದಾರೆ.

ಕ್ರಿಸ್‌ಮಸ್‌ ರಜೆಗೆ ಕೇರಳ, ಗೋವಾ, ಆಂಧ್ರಪ್ರದೇಶ ಸೇರಿ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿದೆ. ಇದನ್ನೇ ನೋಡಿಕೊಂಡು ಬೇಡಿಕೆ ಇರುವ ಮಾರ್ಗಗಳಲ್ಲೇ ಪ್ರಯಾಣ ದರ ಹೆಚ್ಚಿಸಲಾಗಿದೆ.

ADVERTISEMENT

ಹುಬ್ಬಳ್ಳಿ ಮತ್ತು ಬೆಳಗಾವಿಗೆ ಶುಕ್ರವಾರ(ಡಿ.23) ಪ್ರಯಾಣ ಮಾಡುವವರಿಗೆ ಗರಿಷ್ಠ ದರ ₹5,000 ಇದೆ. ಗೋವಾಕ್ಕೆ ಕೆಲವು ಬಸ್‌ಗಳಲ್ಲಿ ₹7 ಸಾವಿರ ಇದ್ದರೆ, ಕೆಲ ಬಸ್‌ಗಳಲ್ಲಿ ₹5467 ಪ್ರಯಾಣ ದರ ಇದೆ.

ಬೆಂಗಳೂರಿನಿಂದ ಎರ್ನಾಕುಲಂ ಪ್ರಯಾಣಕ್ಕೂ ₹7 ಸಾವಿರ ದರ ಇದೆ. ಮಂಗಳೂರಿಗೆ ₹3,500, ಮೈಸೂರಿಗೆ ₹5,000, ಮಡಿಕೇರಿಗೆ ₹1,600 ದರ ಇದೆ.‌ ಹುಬ್ಬಳ್ಳಿ ಮತ್ತು ಬೆಳಗಾವಿಗೆ 25ರಂದು ಪ್ರಯಾಣ ಮಾಡಲು ಟಿಕೆಟ್ ಕಾಯ್ದಿರಿಸಲು ಬಯಸಿದರೆ ₹8 ಸಾವಿರ ಗರಿಷ್ಠ ದರ ನಿಗದಿಯಾಗಿರುವುದು ವೆಬ್‌ಸೈಟ್‌ಗಳಲ್ಲಿ ಗೋಚರಿಸುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಾತ್ರ ಪ್ರಯಾಣ ದರ ಸಾಮಾನ್ಯ ದಿನಗಳಷ್ಟೇ ಇದೆ. ಹೊರ ರಾಜ್ಯಗಳಿಗೆ ವಿಶೇಷ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು ಕೆಎಸ್‌ಆರ್‌ಟಿಸಿಗೆ ಕಷ್ಟದ ಕೆಲಸ. ಬೇಡಿಕೆ ಆಧರಿಸಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಿದರೆ ಅಂತರರಾಜ್ಯ ಒಪ್ಪಂದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುವುದು ಕಷ್ಟ. ಇದರ ನಡುವೆಯೂ ಕ್ರಿಸ್‌ಮಸ್ ರಜೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಲು ಹೆಚ್ಚುವರಿ 300 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

ಎಲ್ಲಿಂದ– ಎಲ್ಲಿಗೆ; ಪ್ರಯಾಣ ದರ(ಗರಿಷ್ಠ)

ಬೆಂಗಳೂರು– ಎರ್ನಾಕುಲಂ; ₹7,000

ಬೆಂಗಳೂರು– ಗೋವಾ; ₹7,000

ಬೆಂಗಳೂರು– ಮಂಗಳೂರು; ₹3,500

ಹುಬ್ಬಳ್ಳಿ– ಮೈಸೂರು; ₹5,000

ಬೆಂಗಳೂರು– ಮೈಸೂರು; ₹5,000

ಬೆಂಗಳೂರು– ಮಡಿಕೇರಿ; 1,600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.