ಬಾಗಲಕೋಟೆ: ಕಟ್ಟಡ ಕಾರ್ಮಿಕರ ಪ್ರಯಾಣ ವೆಚ್ಚದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಕಾರ್ಮಿಕ ಇಲಾಖೆಯು ಬಸ್ ಪಾಸ್ ವಿತರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಕಾರ್ಮಿಕರು ನಿತ್ಯ ‘ಗ್ರಾಮ ಓನ್’ ಹಾಗೂ ‘ಕರ್ನಾಟಕ ಓನ್ ಸೆಂಟರ್’ಗಳಿಗೆ ತಿರುಗಾಡುವಂತಾಗಿದೆ.
ರಾಜ್ಯದಲ್ಲಿ ಲಕ್ಷಾಂತರ ಕಟ್ಟಡ ಕಾರ್ಮಿಕರು ನಿತ್ಯ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಹೋಗಿ ಕೆಲಸ ಮಾಡುತ್ತಾರೆ. ಅಂತಹ ಕಾರ್ಮಿಕರು ಬಸ್ ಪ್ರಯಾಣಕ್ಕಾಗಿ ನೂರಾರು ರೂಪಾಯಿ ಖರ್ಚು ಮಾಡುತ್ತಿದ್ದರು. ಇದಕ್ಕೆ ಕೂಲಿಯ ಶೇ 10 ರಿಂದ 30ರಷ್ಟು ಹಣ ಖರ್ಚಾಗುತ್ತಿತ್ತು.
ಗ್ರಾಮೀಣ ಪ್ರದೇಶದಿಂದ ಕಟ್ಟಡ ಕೆಲಸ ಹುಡುಕಿಕೊಂಡು ಬರುವ ಕಾರ್ಮಿಕರು ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದ ಬಳಿ ಬೆಳಿಗ್ಗೆಯೇ ಬಂದು ಕಾಯುತ್ತಾರೆ. ಕಟ್ಟಡ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ಮೇಸ್ತ್ರಿಗಳು ಅಲ್ಲಿಂದ ಅವರನ್ನು ಕರೆದುಕೊಂಡು ಹೋಗುತ್ತಾರೆ.
ನಿತ್ಯ ಕೆಲಸ ಕೊಡುವ ಮೇಸ್ತ್ರಿಗಳಿಗೆ ಕೂಲಿಯಲ್ಲಿನ ಒಂದಷ್ಟು ಹಣ ನೀಡಬೇಕು. ಜೊತೆಗೆ ಬಸ್ ಪ್ರಯಾಣಕ್ಕೂ ಖರ್ಚು ಮಾಡಬೇಕು. ಇದಕ್ಕೇ ಕೂಲಿಯಲ್ಲಿನ ಅರ್ಧದಷ್ಟು ಹಣ ಹೊರಟು ಹೋಗುತ್ತದೆ. ಕೆಲಸ ಸಿಗದಿದ್ದರೆ, ಪ್ರಯಾಣದ ಖರ್ಚು ಮೈಮೇಲೆಯೇ ಬರುತ್ತದೆ.
ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ, ಅವರ ಗ್ರಾಮದಿಂದ 45 ಕಿ.ಮೀ.ವರೆಗೆ ನಿತ್ಯ ಸಂಚರಿಸಲು ಬಸ್ ಪಾಸ್ ನೀಡಲಾರಂಭಿಸಿತ್ತು. ಅದನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
‘ಜಿಲ್ಲೆಯಲ್ಲಿ 1.14 ಲಕ್ಷ ಮಂದಿ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಸಿದ್ದಾರೆ. ಆ ಪೈಕಿ ಈಗಾಗಲೇ 4,205 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ 652 ಮಂದಿಗೆ ಬಸ್ ಪಾಸ್ ವಿತರಿಸಲಾಗಿದೆ’ ಎಂದು ಇವೇ ಮೂಲಗಳು ಹೇಳುತ್ತವೆ.
‘ಇಲಾಖೆ ವತಿಯಿಂದ ಲಕ್ಷ ಕಾರ್ಮಿಕರಿಗೆ ಬಸ್ ಪಾಸ್ ವಿತರಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಗುರಿ ಮುಟ್ಟಿರುವುದರಿಂದ ಬಸ್ ಪಾಸ್ ನೀಡುವುದನ್ನು ಸರ್ಕಾರದ ಸೂಚನೆಯಂತೆ ಸ್ಥಗಿತಗೊಳಿಸಲಾಗಿದೆ’ ಎಂದು ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್. ಜಾಧವ ‘ಪ್ರಜಾವಾಣಿ’ ತಿಳಿಸಿದರು.
‘ಬಸ್ ಪಾಸ್ ಪಡೆಯಲು ಎರಡು, ಮೂರು ದಿನದಿಂದ ಅಲೆದಾಡುತ್ತಿದ್ದೇನೆ. ಪಾಸ್ ನೀಡುವುದನ್ನು ನಿಲ್ಲಿಸಲಾಗಿದೆ. ಆಮೇಲೆ ಬನ್ನಿ ಎಂದು ಹೇಳುತ್ತಿದ್ದಾರೆ. ಕೆಲವೇ ಜನರಿಗೆ ನೀಡಲಾಗಿದೆ. ಎಲ್ಲರಿಗೂ ನೀಡಬೇಕು’ ಎಂದು ಕಾರ್ಮಿಕ ಪರಸಪ್ಪ ಕಟ್ಟಿಮನಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.