ಮಂಗಳೂರು: ಉದ್ಯಮಿ ಸಿದ್ಧಾರ್ಥ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ್ ಅವರಿಗೆ ಸಲ್ಲಿಸಿದ್ದಾರೆ.
‘ನೀರಿಗೆ ಬಿದ್ದು ಉಸಿರುಗಟ್ಟಿ ಸಾವು ಸಂಭವಿಸಿದೆ’ ಎಂಬ ಒಂದು ವಾಕ್ಯದ ಅಭಿಪ್ರಾಯವನ್ನು ಪ್ರಾಥಮಿಕ ವರದಿಯಲ್ಲಿ ನೀಡಲಾಗಿದೆ ಎಂದು ಗೊತ್ತಾಗಿದೆ.
ಕೆಫೆ ಕಾಫಿ ಡೇ ಸಂಸ್ಥಾಪಕರಾದ ಸಿದ್ಧಾರ್ಥ ಅವರು ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ನೇತ್ರಾವತಿ ಸೇತುವೆಯಿಂದ ಸೋಮವಾರ ಸಂಜೆ ಕಣ್ಮರೆಯಾಗಿದ್ದರು. ಹೊಯ್ಗೆ ಬಜಾರ್ ಸಮೀಪದ ಕಡಲ ಕಿನಾರೆಯಲ್ಲಿ ಅವರ ಮೃತದೇಹ ಬುಧವಾರ ಪತ್ತೆಯಾಗಿತ್ತು. ಮಂಗಳೂರು ಉಪ ವಿಭಾಗಾಧಿಕಾರಿ ರವಿಚಂದ್ರ ನಾಯಕ್ ಸಮ್ಮುಖದಲ್ಲಿ ವಿಧಿ ವಿಜ್ಞಾನ ವಿಭಾಗದ ಒಬ್ಬ ಪ್ರಾಧ್ಯಾಪಕ ಮತ್ತು ಒಬ್ಬ ಹಿರಿಯ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಿದ್ದರು.
ಮೃತದೇಹದ ವಿವಿಧ ಭಾಗಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ದೇಹ ಇದ್ದ ಸ್ಥಿತಿ ಮತ್ತು ಪರೀಕ್ಷೆಯ ಸಮಯದಲ್ಲಿ ತಜ್ಞರು ಕಂಡ ವಿಷಯಗಳನ್ನು ಆಧರಿಸಿ ಪ್ರಾಥಮಿಕ ವರದಿಯನ್ನು ತನಿಖಾಧಿಕಾರಿಗೆ ಸಲ್ಲಿಸಲಾಗಿದೆ.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ‘ವೈದ್ಯರು ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಕಂಡ ಸಂಗತಿಗಳನ್ನು ಆಧರಿಸಿ ಪ್ರಾಥಮಿಕ ವರದಿಯೊಂದನ್ನು ತನಿಖಾಧಿಕಾರಿಗೆ ನೀಡಿದ್ದಾರೆ. ಸಂಗ್ರಹಿಸಿರುವ ಮಾದರಿಗಳ ಪರೀಕ್ಷೆಯ ವರದಿ ಲಭ್ಯವಾದ ಬಳಿಕ ಅಂತಿಮ ವರದಿಯನ್ನು ಸಲ್ಲಿಸಲಾಗುವುದು’ ಎಂದರು.
ಕಾಫಿ ಡೇ ಷೇರು ಖರೀದಿಸಲು‘ಟೀಂ ನಮ್ಮುಡುಗರು’ ಮನವಿ
ಚಿಕ್ಕಮಗಳೂರು: ‘ನಮ್ಮ ಕಾಫಿ ಡೇ, ನಾನು ಸಿದ್ಧಾರ್ಥ’ ಅಭಿಯಾನದಲ್ಲಿ ಭಾಗಿಯಾಗಿ, ಸಾಧ್ಯವಾದಷ್ಟು ಕಾಫಿ ಡೇ ಷೇರು ಖರೀದಿಸಿ' ಎಂದು ಮೂಡಿಗೆರೆಯ ‘ಟೀಮ್ ನಮ್ಮುಡುಗರು’ ಗುಂಪು ಸಾಮಾಜಿಕ ಮಾಧ್ಯಮದಲ್ಲಿ ಸಮಸ್ತ ಮಲೆನಾಡಿಗರಲ್ಲಿ ಮನವಿ ಮಾಡಿದೆ.
ಈ ಗುಂಪು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿದೆ. ‘ಅಂತರರಾಷ್ಟ್ರೀಯ ಖ್ಯಾತಿಯ ಕೆಫಿ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಸಾವು ನಮಗೆ ತೀವ್ರ ದುಃಖ ಹಾಗೂ ಬೇಸರ ತಂದಿದೆ. ಅವರ ಕನಸು– ಜೀವನ ಶೈಲಿ ಎಲ್ಲರಿಗೂ ಮಾದರಿ ಮತ್ತು ಸ್ಫೂರ್ತಿದಾಯಕವಾಗಿವೆ. ‘ಕೆಫೆ ಕಾಫಿ ಡೇ’ ಷೇರುಗಳನ್ನು ಖರೀದಿಸುವುದರ ಮೂಲಕ ಅದರ ಖ್ಯಾತಿ ಉಳಿಸಿ, ಬೆಳೆಸುವುದು ನಮ್ಮ ಆದ್ಯ ಕರ್ತವ್ಯ. ಕಾಫಿ ಡೇ ಉಳಿಸಲು ನಮ್ಮ ಹೆಜ್ಜೆ’ ಎಂದು ಸಂದೇಶದಲ್ಲಿ ತಿಳಿಸಿದೆ.
ವ್ಯಾಟ್ಸ್‌ಆ್ಯಪ್ ಗ್ರೂಪ್‌ನ ಅಡ್ಮಿನ್ ದಿವಿನ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕಾಫಿ ಡೇ ಷೇರು ಕುಸಿಯುತ್ತಿದೆ, ಕುಸಿಯುವುದಕ್ಕೆ ನಾವು ಬಿಡಬಾರದು. ಷೇರುಗಳನ್ನು ಖರೀದಿಸಿ, ಸಂಸ್ಥೆ ಉಳಿಸಬೇಕು. ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ (‘ಫೇಸ್‌ಬುಕ್’, ‘ವ್ಯಾಟ್ಸ್‌ಆ್ಯಪ್ ’…) ಅಭಿಯಾನ ಆರಂಭಿಸಿದ್ದೇವೆ’ ಎಂದು ತಿಳಿಸಿದರು.
ಸಿಡಿಇಎಲ್ ಷೇರು ಬೆಲೆ ಶೇ 48ರಷ್ಟು ಕುಸಿತ
ನವದೆಹಲಿ(ಪಿಟಿಐ): ಕಾಫಿ ಡೇ ಎಂಟರ್‌ಪ್ರೈಸಿಸ್ ಲಿಮಿಟೆಡ್‌ನ (ಸಿಡಿಇಎಲ್) ಷೇರು ಬೆಲೆಯು ನಾಲ್ಕು ದಿನಗಳಲ್ಲಿ ಶೇ 48ರಷ್ಟು ಕುಸಿತ ಕಂಡಿದೆ.
ಕಂಪನಿಗೆ ಸಂಬಂಧಿಸಿದ ನಕಾರಾತ್ಮಕ ಸುದ್ದಿಗಳಿಂದಾಗಿ ಹೂಡಿಕೆದಾರರು ನಿರಂತರವಾಗಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸತತ ನಾಲ್ಕು ದಿನಗಳವರೆಗೆ ಮಾರಾಟ ಒತ್ತಡಕ್ಕೆ ಒಳಗಾಗಿರುವುದರಿಂದ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 1,956.6 ಕೋಟಿ ಮೊತ್ತದ ಸಂಪತ್ತು ಕರಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯವು ಈಗ ₹ 2,110.40 ಕೋಟಿಗೆ ಇಳಿದಿದೆ.
ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಷೇರು ಬೆಲೆಯು ಶೇ 9.96ರಷ್ಟು ಕುಸಿತ ಕಂಡು ₹ 99.90ಕ್ಕೆ ಇಳಿಯಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ಯಲ್ಲಿಯೂ ಬೆಲೆ ₹ 99.45ಕ್ಕೆ ಇಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.